ರಾಜ್ಯದಲ್ಲಿ ಸಿಎಂ ಬದಲಾವಣೆಯ ಪ್ರಶ್ನೆಯೇ ಇಲ್ಲ: ಪ್ರಹ್ಲಾದ್ ಜೋಶಿ


ಮಂಗಳೂರು, ನ.೫- ಬಿ.ಎಸ್. ಯಡಿಯೂರಪ್ಪನವರೇ ನಮ್ಮ ನಾಯಕರು. ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸ್ಪಷ್ಟಪಡಿಸಿದ್ದಾರೆ. ಮಂಗಳೂರಿನಲ್ಲಿ ಇಂದಿನಿಂದ (ನವೆಂಬರ್ ೫) ನಡೆಯಲಿರುವ ಬಿಜೆಪಿಯ ಕಾರ್ಯಕಾರಣಿ ಸಭೆ ಹಿನ್ನೆಲೆಯಲ್ಲಿ ಪ್ರಹ್ಲಾದ್ ಜೋಶಿ ಮಂಗಳೂರಿಗೆ ಆಗಮಿಸಿದ್ದು, ಈ ಸಂದರ್ಭದಲ್ಲಿ ಮಾಧ್ಯಮಕ್ಕೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು ಪತ್ರಕರ್ತ ರಾಷ್ಟ್ರೀಯ ವಾಹಿನಿ ನಿರೂಪಕ ಅರ್ನಬ್ ಗೋಸ್ವಾಮಿ ಬಂಧನ ವಿಚಾರಕ್ಕೆ
ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅವರು, ಮಹಾರಾಷ್ಟ್ರ ಸರ್ಕಾರದ ನಿಲುವನ್ನು ಖಂಡಿಸಿದ್ದಾರೆ. ಈ ಬಗ್ಗೆ ವಿರೋಧ ವ್ಯಕ್ತಪಡಿಸಿರುವರು ಅವರು, ಮಹಾರಾಷ್ಟ್ರ ಸರ್ಕಾರದ ಅಂತ್ಯ ಸಮೀಪಿಸುತ್ತಿದೆ ಎಂದಿದ್ದಾರೆ.
ಈ ಹಿಂದೆ ಅರ್ನಬ್ ಗೋಸ್ವಾಮಿ ಮೋದಿ ವಿರುದ್ಧ ಕೂಡಾ ಮಾತನಾಡಿದ್ದರು. ಆದರೆ, ಮೋದಿ ಸರಕಾರ ಎಂದಿಗೂ ಅವರ ವಿರುದ್ಧ ತಿರುಗಿ ಬಿದ್ದಿಲ್ಲ. ಮಾಧ್ಯಮ ತಮ್ಮ ಜವಾಬ್ದಾರಿ ಮಾಡುತ್ತಿದೆ. ಆದರೆ ಮಹಾರಾಷ್ಟ್ರ ಸರಕಾರ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಮಾಡಿದೆ. ಮಹಾರಾಷ್ಟ್ರ ಸರ್ಕಾರದ ನಡೆಯನ್ನು ವಿರೋಧಿಸುತ್ತೇನೆ
ಎಂದು ಅವರು ಮಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.