ರಾಜ್ಯದಲ್ಲಿ ಸಂಪೂರ್ಣ ಲಾಕ್‌ಡೌನ್

ಬೆಂಗಳೂರು, ಮೇ ೫- ಪ್ರಧಾನಿ ನರೇಂದ್ರ ಮೋದಿಯವರು ಸೂಚಿಸಿದರೆ ರಾಜ್ಯದಲ್ಲಿ ಸಂಪೂರ್ಣ ಲಾಕ್‌ಡೌನ್ ಜಾರಿ ಮಾಡಲಾಗುವುದು. ಲಾಕ್‌ಡೌನ್‌ಗೆ ಸಂಬಂಧಿಸಿದಂತೆ ಪ್ರಧಾನಿಗಳ ನಿರ್ದೇಶನಕ್ಕಾಗಿ ಕಾಯುತ್ತಿದ್ದೇವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ರಾಜ್ಯದಲ್ಲಿ ಕೊರೊನಾ ನಿಯಂತ್ರಣ ಸಂಬಂಧ ಸಂಪೂರ್ಣ ಲಾಕ್‌ಡೌನ್ ಜಾರಿ ಮಾಡಲು ಪ್ರಧಾನಿಗಳ ಆದೇಶಕ್ಕೆ ಕಾಯುತ್ತಿದ್ದೇವೆ. ಇಂದು ಕೇಂದ್ರ ಸಚಿವ ಸಂಪುಟ ಸಭೆ ನಡೆದಿದೆ. ಹಾಗೆಯೇ ಸಂಜೆ ಪ್ರಧಾನಿಗಳು ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಪ್ರಧಾನಿಗಳು ಏನು ಹೇಳುತ್ತಾರೋ ಅದನ್ನು ಪಾಲಿಸುತ್ತೇವೆ ಎಂದರು.
ದೇಶದ ಪ್ರಧಾನಿಗಳ ಸೂಚನೆಯನ್ನು ಸಹಜವಾಗಿಯೇ ಪಾಲಿಸಲೇಬೇಕು. ಹಾಗಾಗಿ ಲಾಕ್‌ಡೌನ್‌ಗೆ ಸಂಬಂಧಿಸಿದಂತೆ ಪ್ರಧಾನಿಗಳು ನೀಡುವ ಸೂಚನೆಯನ್ನು ಆಧರಿಸಿ ರಾಜ್ಯದಲ್ಲಿಯೂ ತೀರ್ಮಾನಗಳನ್ನು ಕೈಗೊಳ್ಳುತ್ತೇವೆ ಎಂದರು.
ರಾಜ್ಯದ ಮೊದಲ ಮುಖ್ಯಮಂತ್ರಿ ದಿ. ಕೆ.ಸಿ. ರೆಡ್ಡಿಯವರ ೧೧೯ನೇ ಜನ್ಮದಿನಾಚರಣೆ ಅಂಗವಾಗಿ ವಿಧಾನಸೌಧದ ಬಳಿ ಇರುವ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಸೋಂಕು ನಿಯಂತ್ರಣಕ್ಕೆ ಸಂಪೂರ್ಣ ಲಾಕ್‌ಡೌನ್ ಜಾರಿ ಮಾಡಬೇಕೋ, ಬೇಡವೋ ಎಂಬ ಬಗ್ಗೆ ಪ್ರಧಾನಿಗಳ ನಿರ್ದೇಶನದಂತೆ ನಡೆದುಕೊಳ್ಳುತ್ತೇವೆ. ಅವರ ಸೂಚನೆಗಾಗಿ ಕಾದಿದ್ದೇವೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರು ಸೂಚನೆ ನೀಡಿದರೆ ರಾಜ್ಯದಲ್ಲಿ ಸಂಪೂರ್ಣ ಲಾಕ್‌ಡೌನ್ ಮಾಡುತ್ತೇವೆ ಎಂದು ಅವರು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಮೇ ೧೨ರ ವರೆಗೂ ಜನತಾ ಕರ್ಫ್ಯೂ ಮುಂದುವರೆಯಲಿದೆ. ಕರ್ಫ್ಯೂವನ್ನು ವಿಸ್ತರಿಸುವ ಬಗ್ಗೆ ಇನ್ನು ಯಾವುದೇ ತೀರ್ಮಾನಗಳು ಆಗಿಲ್ಲ. ಕೇಂದ್ರದ ತೀರ್ಮಾನ ನೋಡಿಕೊಂಡು ಸಂಪೂರ್ಣ ಲಾಕ್‌ಡೌನ್ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದರು.
ದೇಶದಲ್ಲಿ ಸೋಂಕು ನಿಯಂತ್ರಣಕ್ಕೆ ಸಂಪೂರ್ಣ ಲಾಕ್‌ಡೌನ್ ಜಾರಿ ಮಾಡುವಂತೆ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಸಲಹೆ ಮಾಡಿದೆ. ಹಾಗೆಯೇ ತಜ್ಞರು ಸಹ ಲಾಕ್‌ಡೌನ್‌ಗೆ ಶಿಫಾರಸ್ಸು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಇಂದು ಕೇಂದ್ರ ಸಚಿವ ಸಂಪುಟ ಸಭೆ ನಡೆದಿದ್ದು, ಸಂಪುಟ ಸಭೆಯಲ್ಲಿ ಲಾಕ್‌ಡೌನ್ ಬಗ್ಗೆ ತೀರ್ಮಾನಗಳಾಗುವ ಸಾಧ್ಯತೆಗಳು ಇವೆ ಎಂದು ಹೇಳಲಾಗಿದೆ.
ದೇಶದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ೧೪ ದಿನಗಳ ಲಾಕ್‌ಡೌನ್ ಜಾರಿ ಮಾಡುವಂತೆ ಪ್ರಧಾನಿಗಳ ಮೇಲೆ ಒತ್ತಡ ಇದ್ದು, ದೇಶದಲ್ಲಿ ಸಂಪೂರ್ಣ ಲಾಕ್‌ಡೌನ್ ಜಾರಿಯಾಗುತ್ತದೋ, ಇಲ್ಲವೋ ಎಂಬುದನ್ನು ಪ್ರಧಾನಿಗಳು ಇಂದು ಪ್ರಕಟಿಸುವ ಸಾಧ್ಯತೆ ಇದೆ.

ಸಂಪೂರ್ಣ ಲಾಕ್‌ಡೌನ್.

ಪ್ರಧಾನಿ ಆದೇಶಕ್ಕೆ ಕಾದಿರುವ ಸಿ.ಎಂ.

ಸೋಂಕು ನಿಗ್ರಹಕ್ಕೆ ದೇಶಾದ್ಯಂತ ಲಾಕ್‌ಡೌನ್ ಗೆ ಸುಪ್ರೀಂ ಸೂಚನೆ.

ಲಾಕ್‌ಡೌನ್ ಬಗ್ಗೆ ಪ್ರಧಾನಿ ಇಂದು ನಿರ್ಧಾರ.

ಸಂಪೂರ್ಣ ಲಾಕ್‌ಡೌನ್‌ಗೆ ತಜ್ಞರ ಶಿಫಾರಸು.

ಕೇಂದ್ರ ಸಚಿವ ಸಂಪುಟದಲ್ಲಿ ಚರ್ಚೆ.