
ಬೆಂಗಳೂರು, ಮೇ.7- ಕರ್ನಾಟಕದಲ್ಲಿ ವ್ಯಾಪಕ ಭ್ರಷ್ಟಚಾರ ನಡೆದಿದ್ದರೂ ಪ್ರಧಾನಿ ನರೇಂದ್ರ ಮೋದಿಯವರು ಏಕೆ ಮೌನವಹಿಸಿದ್ದಾರೆ ಎಂದು ಟೀಕಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಡಬಲ್ ಇಂಜಿನ್ ಸರ್ಕಾರದ ಪ್ರತಿ ಇಂಜಿನ್ ಗೆ ರಾಜ್ಯದ ಶೇ.40ರಷ್ಟು ಕಮಿಷನ್ ನಿಂದ ಎಷ್ಟು ಸಿಕ್ಕಿದೆ ಎಂಬುದನ್ನು ಸ್ಪಷ್ಟಪಡಿಸುವಂತೆ ಆಗ್ರಹಿಸಿದ್ದಾರೆ.
ವಿಧಾನಸಭಾ ಚುನಾವಣೆಗೆ ನಾಳೆ ಸಂಜೆ ಪ್ರಚಾರ ಅಂತ್ಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅನೇಕಲ್ ನಲ್ಲಿ ಇಂದು ಆಯೋಜಿಸಿದ್ದ ಬೃಹತ್ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಕಳೆದ ಮೂರು ವರ್ಷಗಳಿಂದ ಕರ್ನಾಟಕದಲ್ಲಿ ಬಿಜೆಪಿ ಸರಕಾರವಿದ್ದು, ಪ್ರಧಾನಿಗೆ ಇಲ್ಲಿನ ಭ್ರಷ್ಟಾಚಾರದ ಬಗ್ಗೆ ಅರಿವಿದೆ. ನೀವು ಅದನ್ನು ಕೇವಲ ‘ಡಬಲ್ ಇಂಜಿನ್ ಸರ್ಕಾರ’ ಎನ್ನುತ್ತಿದ್ದೀರಿ. ಈ ಬಾರಿ ಡಬಲ್ ಇಂಜಿನ್ ಕಳ್ಳತನವಾಗಿದೆ ಎಂದು ಕಿಡಿಕಾರಿದರು.
ಮೈಸೂರು ಸ್ಯಾಂಡಲ್ ಸೋಪ್ ತಯಾರಿಸುವ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಲಿಮಿಟೆಡ್‌ನಲ್ಲಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಸಹಾಯಕ ಪ್ರಾಧ್ಯಾಪಕರು, ಸಹಾಯಕ ಎಂಜಿನಿಯರ್‌ಗಳ ನೇಮಕಾತಿಯಲ್ಲಿ ದೊಡ್ಡ ಪ್ರಮಾಣದ ಹಗರಣಗಳ ಸರಮಾಲೆಯೇ ನಡೆದಿದೆ. ಆದರೆ ಮೋದಿಯವರು ಮೌನಕ್ಕೆ ಶರಣಾಗಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್ ತನ್ನನ್ನು 91 ಬಾರಿ ನಿಂದಿಸಿದೆ ಎಂದು ಪ್ರಧಾನಿ ಬಂದು ಹೇಳುತ್ತಾರೆ. ಆದರೆ ಭ್ರಷ್ಟಾಚಾರವನ್ನು ತಡೆಯಲು ಅವರು ಏನು ಮಾಡಿದ್ದಾರೆ, ಯಾವ ತನಿಖೆ ನಡೆಸಲಾಯಿತು ಮತ್ತು ಎಷ್ಟು ಜನರನ್ನು ಜೈಲಿಗೆ ಹಾಕಲಾಯಿತು ಎಂಬುದನ್ನು ಮೊದಲು ರಾಜ್ಯದ ಜನರ ಮುಂದೆ ಬಹಿರಂಗಪಡಿಸಲಿ ಎಂದು ಕಾಂಗ್ರೆಸ್ ಆಗ್ರಹಿಸಿದರು.
ಸಂಸತ್ತಿನಲ್ಲಿ ಅದಾನಿ ವಿಷಯವನ್ನು ಪ್ರಸ್ತಾಪಿಸಿದ್ದಕ್ಕಾಗಿ ನನ್ನನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿದ್ದಾರೆ ಎಂದು ರಾಹುಲ್ ಆರೋಪಿಸಿದರು.