ರಾಜ್ಯದಲ್ಲಿ ವೀರಶೈವ-ಲಿಂಗಾಯತ ಅಬಿವೃದ್ಧಿ ನಿಗಮ ಸ್ಥಾಪನೆ ಸ್ವಾಗತಾರ್ಹ: ಸಚಿವ ಪ್ರಭು ಚವ್ಹಾಣ್

ಬೀದರ, ನ 18: ವೀರಶೈವ-ಲಿಂಗಾಯತ ಸಮಾಜದ ಸರ್ವತೋಮುಖ ಅಭಿವೃದ್ಧಿಯ ದೃಷ್ಟಿಯಿಂದ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದಲ್ಲಿ ಕರ್ನಾಟಕ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲು ಆದೇಶಿಸಿರುವುದು ಸ್ವಾಗತಾರ್ಹ ಎಂದು ಪಶು ಸಂಗೋಪನೆ, ಹಜ್, ವಕ್ಪ್ ಹಾಗೂ ಬೀದರ-ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ತಿಳಿಸಿದ್ದಾರೆ.

ವೀರಶೈವ-ಲಿಂಗಾಯತ ಜನಾಂಗದವರು ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ಇವರಲ್ಲಿ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದವರು ಅನೇಕ ಜನರಿದ್ದಾರೆ. ಇಂಥವರ ಏಳಿಗೆಗಾಗಿ ಕೆಲಸ ನಿರ್ವಹಿಸುವ ಪ್ರತ್ಯೇಕ ನಿಗಮವನ್ನು ಸ್ಥಾಪಿಸಿದ್ದು, ವೀರಶೈವ-ಲಿಂಗಾಯತ ಸಮಾಜಕ್ಕೆ ದೀಪಾವಳಿ ಹಬ್ಬದ ಕೊಡುಗೆ ನೀಡಿದಂತಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿರುವ ಮರಾಠಾ ಸಮಾಜದವರ ಅಭಿವೃದ್ದಿಗಾಗಿ ಮರಾಠಾ ಅಭಿವೃದ್ಧಿ ಪ್ರಾಧಿಕಾರವನ್ನು ಸ್ಥಾಪಿಸಲು ಆದೇಶಿಸಿದ ಒಂದು ವಾರದೊಳಗಾಗಿ ಕರ್ನಾಟಕ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮವನ್ನು ಸ್ಥಾಪನೆ ಮಾಡಲು ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಆದೇಶ ನೀಡಿರುವುದು ಸಂತಸ ಇಮ್ಮಡಿಗೊಳಿಸಿದೆ.

ಸರ್ಕಾರದಿಂದ ಜಾರಿಗೊಳಿಸುವ ಸೌಲಭ್ಯಗಳು ಸಮರ್ಪಕವಾಗಿ ಸಿಗಲಿ ಎನ್ನುವ ಸದಾಶಯದಿಂದ ವೀರಶೈವ-ಲಿಂಗಾಯತ ಸಮಾಜದವರಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮವನ್ನು ಸ್ಥಾಪನೆ ಮಾಡಲಾಗುತ್ತಿದೆ. ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ನೇರವಾಗಿ ಮತ್ತು ಸುಲಭವಾಗಿ ಪಡೆಯಲು ಅನುಕೂಲವಾಗಲಿದ್ದು, ವೀರಶೈವ-ಲಿಂಗಾಯತ ಸಮಾಜದಲ್ಲಿ ಕಡುಬಡವರಾಗಿರುವ ಜನರ ಏಳಿಗೆಗೆ ಹೊಸ ಚೈತನ್ಯ ಸಿಗಲಿದೆ. ಕರ್ನಾಟಕ ವೀರಶೈವ-ಲಿಂಗಾಯತ ಅಭಿವೃದ್ಧಿ ಮಂಡಳಿ ಸ್ಥಾಪನೆಗೆ ಸೂಚಿಸಿರುವ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರಿಗೆ ರಾಜ್ಯದ ಸಮಸ್ತ ವೀರಶೈವ-ಲಿಂಗಾಯತ ಸಮುದಾಯದ ಪರವಾಗಿ ಹೃದಯಪೂರ್ವಕ ಧನ್ಯವಾದಗಳು ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.