ರಾಜ್ಯದಲ್ಲಿ ಲಾಕ್‌ಡೌನ್ ಜಾರಿಯಿಲ್ಲ : ಸುಧಾಕರ್

ಬೆಂಗಳೂರು, ಜ. ೧೪- ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಲಾಕ್‌ಡೌನ್ ಜಾರಿ ಮಾಡಲಾಗುತ್ತದೆ ಎಂಬ ವರದಿಗಳನ್ನು ನಿರಾಕರಿಸಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್, ಲಾಕ್‌ಡೌನ್ ಜಾರಿ ಮಾಡುವ ಪ್ರಮೇಯವೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್‌ಡೌನ್ ಮೂಲಕ ಸೋಂಕು ನಿಯಂತ್ರಣ ಮಾಡಬಹುದು ಎಂಬುದು ಸರಿಯಲ್ಲ. ಜನ ಮಾರ್ಗಸೂಚಿಗಳನ್ನು ಪಾಲಿಸಿದರೆ ಲಾಕ್‌ಡೌನ್ ಜಾರಿ ಮಾಡದೆ ಕೊರೊನಾವನ್ನು ನಿಯಂತ್ರಿಸಬಹುದು ಎಂದರು.
ಪ್ರಧಾನಿ ಮೋದಿ ಅವರು ನಿನ್ನೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಕೊರೊನಾ ನಿಯಂತ್ರಣ ಸಂಬಂಧ ನಡೆಸಿದ ಸಭೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಲಾಕ್‌ಡೌನ್ ಒಂದೇ ಮಾರ್ಗವಲ್ಲ. ಜನರಿಗೆ ತೊಂದರೆಯಾಗದಂತೆ ಕಠಿಣ ಕ್ರಮಗಳನ್ನು ಜಾರಿಗೊಳಿಸಿ ಎಂದು ಹೇಳಿದ್ದಾರೆ. ಹಾಗಾಗಿ ಲಾಕ್‌ಡೌನ್ ಮಾಡಿ ಸೋಂಕು ನಿಯಂತ್ರಣ ಮಾಡುವ ಪ್ರಮೇಯವಿಲ್ಲ ಎಂದರು.
ಆರ್ಥಿಕ ನಷ್ಟವಾಗದಂತೆ ಕೊರೊನಾ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ ಎಂದು ಪ್ರಧಾನಿ ಮೋದಿ ಸೂಚನೆ ನೀಡಿದ್ದಾರೆ. ಹೀಗಾಗಿ ಲಾಕ್‌ಡೌನ್ ಜಾರಿ ಮಾಡದೆ ಅಗತ್ಯ ಕ್ರಮ ತೆಗೆದುಕೊಳ್ಳುವ ಕೆಲಸ ಮಾಡುತ್ತೇವೆ ಎಂದರು.
ಜನ ಜಂಗುಳಿಯನ್ನು ನಿಯಂತ್ರಿಸಿ ಸಭೆ, ಸಮಾರಂಭಗಳಲ್ಲಿ ಹೆಚ್ಚು ಜನ ಸೇರದಂತೆ ನೋಡಿಕೊಂಡರೆ ಲಾಕ್‌ಡೌನ್ ಅಗತ್ಯವಿಲ್ಲ. ಲಾಕ್‌ಡೌನ್ ಮೂಲಕ ಕೊರೊನಾ ನಿಯಂತ್ರಣ ಸಾಧ್ಯವಿಲ್ಲ ಎಂಬುದು ತಮ್ಮ ಅಭಿಪ್ರಾಯ ಎಂದರು.
ರಾಜ್ಯದಲ್ಲಿ ಸೋಂಕು ಹೆಚ್ಚಾಗುತ್ತಿದ್ದರೂ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಶೇ. ೫ ರಿಂದ ೬ ರಷ್ಟು ಮಾತ್ರ ಇದೆ ಎಂದು ಅವರು ಹೇಳಿದರು.
ಮಾರ್ಗಸೂಚಿ ಈ ತಿಂಗಳ ಅಂತ್ಯದವರೆಗೆ ಮುಂದುವರಿಕೆ
ಕೋವಿಡ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಜಾರಿ ಮಾಡಿರುವ ಮಾರ್ಗಸೂಚಿಗಳು ಈ ತಿಂಗಳ ಅಂತ್ಯದವರೆಗೂ ಮುಂದುವರೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರೇ ಹೇಳಿದ್ದಾರೆ ಹಾಗಾಗಿ ಈ ತಿಂಗಳ ಅಂತ್ಯದವರೆಗೆ ವಾರಾಂತ್ಯ ಕರ್ಫ್ಯೂ, ರಾತ್ರಿ ಕರ್ಫ್ಯೂ ಶೇ. ೫೦ ೫೦ ರಷ್ಟು ನಿಯಮಗಳು ಮುಂದುವರೆಯಲಿವೆ ಎಂದರು.
ರಾಜ್ಯದ ಹಲವೆಡೆ ಸೋಂಕು ಹೆಚ್ಚಾಗುತ್ತಿದೆ. ಜನ ನಿರ್ಲಕ್ಷ್ಯ ಮಾಡದೆ ಪರೀಕ್ಷೆಗೆ ಒಳಪಡಬೇಕು. ಸ್ವಯಂ ಪ್ರೇರಿತರಾಗಿ ಸುರಕ್ಷಾ ಕ್ರಮಗಳನ್ನು ಪಾಲಿಸಬೇಕು ಎಂದು ಅವರು ಹೇಳಿದರು.
ಯಾರೂ ಸೋಂಕನ್ನು ನಿರ್ಲಕ್ಷ್ಯ ಮಾಡಬಾರದು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ೨ನೇ ಡೋಸ್ ಬಾಕಿ ಇರುವವರು ಲಸಿಕೆ ತೆಗೆದುಕೊಳ್ಳಬೇಕು. ಮೂರನೇ ಡೋಸ್‌ಗೆ ಯಾರೆಲ್ಲಾ ಅರ್ಹರಿದ್ದಾರೋ ಅವರೆಲ್ಲಾ ಬೂಸ್ಟರ್ ಡೋಸ್ ತೆಗೆದುಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ಫೆಬ್ರವರಿ ಅಂತ್ಯದಲ್ಲಿ ಕಡಿಮೆ
ರಾಜ್ಯದಲ್ಲಿ ಈಗ ಹೆಚ್ಚಾಗುತ್ತಿರುವ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು ಇನ್ನೂ ಗರಿಷ್ಠ ಮಟ್ಟಕ್ಕೆ ತಲುಪಿಲ್ಲ. ಜನವರಿ ಇಲ್ಲವೆ ಫೆಬ್ರವರಿ ಮೊದಲ ವಾರದಲ್ಲಿ ಗರಿಷ್ಠ ಮಟ್ಟ ತಲುಪಲಿದೆ. ಫೆ. ೪ನೇ ವಾರದಿಂದ ಸೋಂಕು ಇಳಿಮುಖವಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ ಎಂದು ಸಚಿವ ಸುಧಾಕರ್ ತಿಳಿಸಿದರು.
ರಾಜ್ಯದಲ್ಲಿ ವಾರಾಂತ್ಯ ಕರ್ಫ್ಯೂ ಜಾರಿ ಮಾಡಿದ್ದರೂ ಸೋಂಕು ಕಡಿಮೆಯಾಗಿಲ್ಲ ಎಂಬ ವರದಿಗಳಿಗೆ ಪ್ರತಿಕ್ರಿಯಿಸಿದ ಅವರು, ಕಳೆದ ವಾರದಿಂದ ವಾರಾಂತ್ಯ ಕರ್ಫ್ಯೂ ಮಾಡಿದ್ದೇವೆ. ೭ ದಿನಕ್ಕೆ ಸೋಂಕು ಕಡಿಮೆಯಾಗಲ್ಲ. ಕೊರೊನಾ ಮೊದಲ ಹಾಗೂ ಎರಡನೆ ಅಲೆಯಲ್ಲಿ ೧೪ ದಿನಗಳ ಚೈನ್ ಇತ್ತು. ಈ ಅಲೆಯಲ್ಲಿ ಸ್ವಲ್ಪ ಕಡಿಮೆ ಇದೆ. ಸೋಂಕು ೫-೬ ಪಟ್ಟು ವೇಗವಾಗಿ ಹರಡುತ್ತಿದೆ. ಇನ್ನು ಸ್ವಲ್ಪ ದಿನ ಹೋದ ಮೇಲೆ ವಾರಾಂತ್ಯ ಕರ್ಫ್ಯೂ ಜಾರಿಗೆ ಫಲ ಸಿಗಲಿದೆ ಎಂದರು.
ಜನ ಲಸಿಕೆ ತೆಗೆದುಕೊಂಡು ಮಾರ್ಗಸೂಚಿಗಳನ್ನು ಪಾಲಿಸಿ ಮುಂದಿನ ಒಂದೂವರೆ ತಿಂಗಳು ಎಚ್ಚರಿಕೆಯಿಂದ ಇರಬೇಕು ಎಂದು ಅವರು ಮನವಿ ಮಾಡಿದರು.