ರಾಜ್ಯದಲ್ಲಿ ಲಾಕ್‌ಡೌನ್ ಇಲ್ಲ


ಬೆಂಗಳೂರು, ನ. ೨೯- ದೇಶದೆಲ್ಲೆಡೆ ರೂಪಾಂತರಿ ವೈರಸ್ ಒಮಿಕ್ರಾನ್ ಭೀತಿ ಉಂಟಾಗಿದ್ದು, ರಾಜ್ಯದಲ್ಲಿ ಲಾಕ್‌ಡೌನ್ ಜಾರಿ ಮಾಡುವುದಿಲ್ಲ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದ್ದಾರೆ.
ದ.ಆಫ್ರಿಕಾದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿರುವ ರೂಪಾಂತರಿ ವೈರಸ್ ಒಮಿಕ್ರಾನ್ ವಿವಿಧ ದೇಶಗಳಲ್ಲಿ ಹಬ್ಬುತ್ತಿದೆ. ರಾಜ್ಯದಲ್ಲಿ ಒಮಿಕ್ರಾನ್ ಹರಡದಂತೆ ಕಠಿಣ ನಿಯಮಗಳನ್ನು ಜಾರಿ ಮಾಡಲಾಗುತ್ತಿದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಹಬ್ಬುತ್ತಿರುವ ರಾಜ್ಯದಲ್ಲಿ ಲಾಕ್‌ಡೌನ್ ಎಂಬುದು ಸುಳ್ಳು ಸುದ್ಧಿ ಈ ಮೂಲಕ ಜನರಲ್ಲಿ ಗೊಂದಲ ಸೃಷ್ಟಿಸಲಾಗುತ್ತದೆ. ಜನತೆ ಆತಂಕಕ್ಕೀಡಾಗುವ ಅವಶ್ಯಕತೆಯಿಲ್ಲ.ರಾಜ್ಯದ ಜನತೆ ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಮನವಿ ಮಾಡಿದ್ದಾರೆ.
ಲಾಕ್‌ಡೌನ್ ಕುರಿತಂತೆ ಸುಳ್ಳು ಸುದ್ಧಿ ಹರಡುತ್ತಿರುವವರ ವಿರುದ್ಧ ಸೂಕ್ತಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಕೊರೊನಾ ಲಾಕ್‌ಡೌನ್‌ನಿಂದ ಸಾಕಷ್ಟು ಜನ ಉದ್ಯೋಗ ವಂಚಿತರಾಗಿದ್ದಾರೆ. ವ್ಯಾಪಾರ ವಾಣಿಜ್ಯ ವಹಿವಾಟುಗಳು ಚುರುಕುಗೊಳ್ಳುತ್ತವೆ.
ಈ ಸಂದರ್ಭದಲ್ಲಿ ಸುಳ್ಳು ಸುದ್ಧಿಗಳ ಮೂಲಕ ಜನರನ್ನು ಗೊಂದಕ್ಕೀಡು ಮಾಡುವುದು ಬೇಡ. ಒಮಿಕ್ರಾನ್ ಹೆಚ್ಚು ಪರಿಣಾಮಕಾರಿಯಲ್ಲ ಎನ್ನಲಾಗುತ್ತಿದೆ.
ಆದರೂ ಜನರು ಮೈ ಮರೆಯದೆ ಕೋವಿಡ್ ನಿಯಮಗಳನ್ನು ಎಚ್ಚರಿಕೆಯಿಂದ ಪಾಲಿಸಬೇಕೆಂದು ಸಚಿವ ಸುಧಾಕರ್ ಅವರು ತಿಳಿಸಿದ್ದಾರೆ.