ರಾಜ್ಯದಲ್ಲಿ ಲವ್ ಜಿಹಾದ್ ನಿಷೇದ ಕಾಯ್ದೆ ಜಾರಿ ಸರ್ಕಾರದ ಮುಂದಿಲ್ಲ:ಸಿಎಂ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜ.04: ರಾಜ್ಯದಲ್ಲಿ ಲವ್ ಜಿಹಾದ್ ನಿಷೇದ ಕಾಯ್ದೆ ಜಾರಿ ವಿಚಾರ ಸರ್ಕಾರದ ಮುಂದೆ ಇಲ್ಲ ಎಂದು ಮುಖ್ಯ ಮಂತ್ರಿ ಬಸವರಾಜ್ ಹೇಳಿದ್ದಾರೆ.
ಬಳ್ಳಾರಿ ನಗರದಲ್ಲಿ ನಿರ್ಮಿಸಿರುವ ನೂತನ ಜಿಲ್ಲಾಡಳಿತ ಭವನವನ್ನು ಉದ್ಘಾಟಿಸಿ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿದ್ದರು.
ಇದು ಪಕ್ಷದ‌ ಹಂತದಲ್ಲಿ  ಚರ್ಚೆಯಿದೆ. ನಳೀನ್ ಕುಮಾರ್ ಕಟೀಲ್ ಜೊತೆ ಚರ್ಚೆ ಮಾಡುವೆ. ಸದ್ಯಕ್ಕೆ ಸರ್ಕಾರದ ಮುಂದೆ ಕಾಯ್ದೆ ಜಾರಿ ವಿಚಾರ ಇಲ್ಲ. ಆ ಬಗ್ಗೆ ಚರ್ಚೆ ಮಾಡಿ ಮುಂದುವರೆಯಲಿದೆಂದರು
ತುಂಗಭದ್ರಾ ಜಲಾಶಯಕ್ಕೆ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಈಗಾಗಲೇ 20 ಕೋಟಿ ರೂ ನೀಡಿ ಡಿಪಿಆರ್ ಸಿದ್ದಪಡಿಸಿದೆ. ತುಂಗಭದ್ರಾ ಜಲಾಶಯ ಮೂರು  ರಾಜ್ಯಕ್ಕೆ ಸಂಬಂಧಿಸಿದ್ದು ಹೀಗಾಗಿ ಆಂಧ್ರ, ತೆಲಂಗಾಣ ರಾಜ್ಯದ  ಸಿಎಂ ಅವರುಗಳ  ಜೊತೆಗೆ ಮಾತನಾಡಿದ್ದೇನೆ. ಆ ರಾಜ್ಯಗಳ ಅಧಿಕಾರಿಗಳು ಬಂದು‌ ಪರಿಶೀಲನೆ ಮಾಡಿದ್ದಾರೆ. ರಾಜ್ಯದ ಹಿತಾಸಕ್ತಿ ಧಕ್ಕೆ ಬರದ ರೀತಿಯಲ್ಲಿ ಯೋಜನೆ ಅನುಷ್ಟಾನಕ್ಕೆ ತರುವ ಚಿಂತನೆ ಇದೆಂದರು. ರಾಜ್ಯದ ಆಲಮಟ್ಟಿ, ತುಂಗಭದ್ರ, ನಾರಾಯಣಪುರ ಮೊದಲಾದ ಜಲಾಶಯಗಳಿಂದ ಕಾರ್ಖಾನೆಗಳಿಗೆ  ಹಂಚಿಕೆಯಾದ ನೀರಿನ‌ ಸದ್ಭಳಕೆ ಬಗ್ಗೆ  ಆಡಿಟ್ ಮಾಡಿಸಲಾಗುತ್ತದೆ. ಅದೇ ರೀತಿ  ಬಳ್ಳಾರಿ ಜಿಲ್ಲೆಯಲ್ಲಿ ಲಕ್ಷ್ಮೀ ಮಿತ್ತಲ್ ಸೇರಿದಂತೆ ಅನೇಕ ಕಂಪನಿಗಳು ಉಕ್ಕಿನ ಕಾರ್ಖಾನೆ ಸ್ಥಾಪಿಸಲು ಹತ್ತು ಸಾವಿರಕ್ಕೂ ಹೆಚ್ಚು ಜಮೀನನ್ನು ಪಡೆದು ಹತ್ತು ವರ್ಷ ಕಳೆದಿದೆ.‌ ಕಾರ್ಖಾನೆ ಸ್ಥಾಪನೆ ಮಾಡದಿರುವ ಬಗ್ಗೆ ಅವರಿಗೆ ನೋಟೀಸ್ ನೀಡಿದೆ. ಅವರಿಂದ ಪರ್ಯಾಯ ಬಳಕೆಗೆ ಕೋರಿಕೆ ಇದ್ದು ಅದಕ್ಕೆ ಸರ್ಕಾರ ಒಪ್ಪಿಲ್ಲ. ಅವರಿಂದ ಜಮೀನು ಹಿಂಪಡೆದು ಅದೇ ಉದ್ದೇಶಕ್ಕೆ ಬೇರೆಯರಿಗೆ ನೀಡಲು ಕ್ರಮ ಜರುಗಿಸಲಿದೆಂದರು. ಅದಕ್ಕಾಗಿ ರಾಜ್ಯದಲ್ಲಿ ಕಾರ್ಖಾನೆಗಳ ಸ್ಥಾಪಿಸಲು ಪಡೆದ ಜಮೀನಿನ ಬಳಕೆ  ಬಗ್ಗೆ ಸಹ ಆಡಿಟ್ ಮಾಡಲು ಸರ್ಕಾರ ನಿರ್ಧರಿಸಿದೆಂದು ಹೇಳಿದರು. ಬಳ್ಳಾರಿಯ ಸುಧಾ ಸರ್ಕಲ್ ಬಳಿ ಪ್ಲೈವೋರ್ ಮಾಡೋ ಬಗ್ಗೆ ಪ್ರಸ್ತಾವನೆ ಇದೆ. ಅದಕ್ಕೆ ಅಗತ್ಯವಾದ ಹಣಕಾಸಿನ ನೆರವನ್ನು ನೀಡಲಿದೆಂದರು.