ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಸಿದ್ದು ಆಗ್ರಹ

ಶಿವಮೊಗ್ಗ, ಡಿ. ೪: ಸರ್ಕಾರಿ ಕಾಮಗಾರಿಗಳಲ್ಲಿ ಶೇ. ೪೦ ರಷ್ಟು ಕಮೀಷನ್ ನೀಡಬೇಕಾಗಿದೆ ಎಂದು ಆರೋಪಿಸಿ, ರಾಜ್ಯ ಗುತ್ತಿಗೆದಾರರ ಸಂಘ ಪ್ರಧಾನಮಂತ್ರಿಗೆ ಪತ್ರ ಬರೆದಿದೆ. ಇದು ಲಂಚ ಹೊಡೆಯುವ ಭ್ರಷ್ಟ ಸರ್ಕಾರವಾಗಿದೆ. ತಕ್ಷಣವೇ ಸರ್ಕಾರ ವಜಾಗೊಳಿಸಬೇಕು.
ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಶನಿವಾರ ನಗರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ಆರೋಪದ ಬಗ್ಗೆ ನ್ಯಾಯಾಂಗ ತನಿಖೆ ನಡೆಸುವಂತೆ ರಾಜ್ಯಪಾಲರಿಗೆ ಪತ್ರ ಬರೆದಿದ್ದೇನೆ ಎಂದು ಹೇಳಿದರು.
ರಾಜ್ಯದಲ್ಲಿ ಅಕಾಲಿಕ ಮಳೆಯಿಂದ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಆದರೆ ರೈತರ ನೆರವಿಗೆ ಧಾವಿಸುವ ಕಿಂಚಿತ್ತೂ ಕೆಲಸ ಸರ್ಕಾರ ಮಾಡಿಲ್ಲ. ರೈತ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಯಾವುದೇ ಅಭಿವೃದ್ದಿ ಕಾರ್ಯ ನಡೆಸಿಲ್ಲ. ಜನರು ಶಾಪ ಹಾಕುತ್ತಿದ್ದಾರೆ. ರಾಜಕೀಯ ಧೃವೀಕರಣ ಆರಂಭವಾಗಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಂದ ಹಲವರು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ ಎಂದರು.
ಸಚಿವ ಕೆ.ಎಸ್.ಈಶ್ವರಪ್ಪರವರು ತಮ್ಮನ್ನು ಟೀಕಿಸಿದರೆ, ಲೀಡರ್ ಆಗುವ ಭ್ರಮೆಯಲಿದ್ದಾರೆ. ಜನಾಶೀರ್ವಾದವಿದ್ದರೆ ಮಾತ್ರ ಜನನಾಯಕನಾಗಲು ಸಾಧ್ಯ ಎಂದು ವಾಗ್ದಾಳಿ ನಡೆಸಿದರು.
ಸಿಎಂ ಬದಲಾವಣೆ ಕುರಿತಂತೆ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ. ಹಾಲಿ ಸಿಎಂ ಮೇಲೆ ಅವರಿಗೆ ನಂಬಿಕೆಯಿಲ್ಲವಾಗಿದೆ. ಈ ಕಾರಣದಿಂದ ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಭ್ರಷ್ಟಾಚಾರದಲ್ಲಿ ಮುಳುಗಿರುವ ಸರ್ಕಾರ

‘ರಾಜ್ಯ ಸರ್ಕಾರ ಸಂಪೂರ್ಣ ಭ್ರಷ್ಟಮಯವಾಗಿದೆ. ಜನತೆ ಮಾತ್ರವಲ್ಲ, ಅಧಿಕಾರಿಗಳು ಕೂಡ ಈ ಸರ್ಕಾರ ಬದಲಾವಣೆ ಬಯಸುತ್ತಿದ್ದಾರೆ. ಇಂತಹ ಭ್ರಷ್ಟ ಸರ್ಕಾರ ಮುಂದುವರಿಯಬೇಕಾ’ ಎಂದು ರಾಜ್ಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.
ಶನಿವಾರ ನಗರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ನಡೆಯುತ್ತಿರುವ ಚುನಾವಣೆಯಲ್ಲಿ ಕನಿಷ್ಠ ೧೫ ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷ ಜಯ ಸಾಧಿಸಲಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿರುವ ಅವರು, ಸ್ಥಳೀಯ ಸಂಸ್ಥೆಗಳ ಮತದಾರರು ಅತ್ಯಂತ ಜವಾಬ್ದಾರಿಯಿಂದ ಮತ ಚಲಾಯಿಸಲಿದ್ದಾರೆ ಎಂದರು.
ಡಿ. ೧೧ ರಂದು ರಾಜ್ಯ ಸರ್ಕಾರದ ಭ್ರಷ್ಟಾಚಾರದ ವಿರುದ್ದ ಬೃಹತ್ ಪ್ರತಿಭಟನೆಯನ್ನು ಪಕ್ಷ ಹಮ್ಮಿಕೊಂಡಿದೆ. ವಿಧಾನ ಮಂಡಲ ಅಧಿವೇಶನದಲ್ಲಿಯೂ ಸರ್ಕಾರದ ಆಡಳಿತ ವೈಫಲ್ಯ, ಭ್ರಷ್ಟಾಚಾರ, ಹಗರಣಗಳ ಕುರಿತಂತೆ ಪ್ರಸ್ತಾಪಿಸಲಾಗುವುದು ಎಂದು ಹೇಳಿದರು.