ರಾಜ್ಯದಲ್ಲಿ ಮೂರು ದಿನ ಮಳೆ

ಬೆಂಗಳೂರು, ಜೂನ್ ೧೨-ರಾಜ್ಯದಲ್ಲಿ ಮಳೆ ಮುಂದುವರಿದಿದೆ. ಇನ್ನೆರಡು ಮೂರು ದಿನಗಳ ಕಾಲ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಈ ಬಾರಿ ಸುಮಾರು ೧೫ ದಿನ ತಡವಾಗಿ ರಾಜ್ಯಕ್ಕೆ ಮುಂಗಾರು ಪ್ರವೇಶಿಸಿದ್ದರೂ ಆರಂಭದಲ್ಲೇ ವೇಗ ಪಡೆಯದ ಕಾರಣ ಜಲಾಶಯಗಳು ಡೆಡ್ ಸ್ಟೋರೇಜ್ ಹಂತ ತಲುಪಿವೆ. ಇದೀಗ ಪಶ್ಚಿಮಘಟ್ಟ ಹಾಗೂ ಮಲೆನಾಡಿನಲ್ಲಿ ಮಳೆಯಿಂದಾಗಿ ನದಿಗಳಿಗೆ ನೀರು ಹರಿದು ಬರುತ್ತಿದೆ.
ಜುಲೈ ಮೊದಲ ವಾರದಿಂದ ಮಳೆ ಆರಂಭವಾಗಿದ್ದರೂ ಅದು ಕೇವಲ ಗುಡ್ಡಗಾಡು ಹಾಗೂ ಕರಾವಳಿ ಭಾಗಕ್ಕೆ ಮಾತ್ರ ಸೀಮಿತವಾಗಿತ್ತು. ದಕ್ಷಿಣ ಒಳನಾಡಿನಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಹಗುರ ಮಳೆಯಾಗುತ್ತಿದೆ. ಉತ್ತರ ಒಳನಾಡಿನ ಮೇಲಿನ ವರುಣನ ಮುನಿಸು ಇನ್ನೂ ಕಡಿಮೆ ಆಗಿಲ್ಲ.
ಮಳೆಯ ಮೇಲೆ ಅವಲಂಬಿತರಾಗಿರುವ ರೈತರು ಬೆಳೆ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.
ಪ್ರಸಕ್ತ ವರ್ಷದಲ್ಲಿ ಮುಂಗಾರು ಮಳೆ ಉತ್ತಮವಾಗಿ ಹೆಚ್ಚಿನ ಇಳುವರಿ ನೀಡಬಹುದು ಎಂಬ ನಿರೀಕ್ಷೆಯಲ್ಲಿ ಇದ್ದ ರೈತರಿಗೆ ಮುಂಗಾರು ಮಳೆ ಆಘಾತ ನೀಡಿದೆ.
ಬೆಳೆ ಉತ್ತಮ ಫಲ ನೀಡಬಹುದು ಎಂಬ ಆಸೆಯಲ್ಲಿ ಇದ್ದ ರೈತರ ಮುಖ ಕಳೆಗುಂದಿದೆ.
ಉತ್ತರ ಭಾರತದಲ್ಲಿ ಅನಿರೀಕ್ಷಿತ ಮಳೆಯಿಂದಾಗಿ ನೂರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ನಗರಗಳು ಜಲಾವೃತವಾಗಿದ್ದು, ಜನರು ಶಿಬಿರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲೂ ಮಳೆ ಕೊರತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಸಿಲಿಕಾನ್ ಸಿಟಿಯ ಬಹುತೇಕ ಭಾಗಗಳಲ್ಲಿ ಸಾಧಾರಣ ಮಳೆಯಾಗುತ್ತಿದೆ.