ಸಿದ್ದು ವರುಣಾದಿಂದ ಸ್ಪರ್ಧಿಸುವುದು ಸತ್ಯ:ಬಿಎಸ್‌ವೈ

ತುಮಕೂರು, ಮಾ. ೧೮- ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ೧೩೫ ರಿಂದ ೧೪೦ ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಮತ್ತೆ ಸರ್ಕಾರ ರಚನೆ ಮಾಡುವುದು ಖಚಿತ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದಿಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ತಿಪಟೂರಿನಲ್ಲಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಳ್ಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದೆಲ್ಲೆಡೆ ಬಿಜೆಪಿ ಪರ ವಾತಾವರಣ ಇದೆ. ನಮ್ಮ ನಿರೀಕ್ಷೆಗೆ ತಕ್ಕಂತೆ ಜನಸ್ಪಂದನೆ ಸಿಗುತ್ತಿದೆ. ಈ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು.
ಸಚಿವ ಸೋಮಣ್ಣ ಅಂತರ ಕಾಯ್ದುಕೊಂಡಿರುವ ವಿಚಾರದ ಬಗ್ಗೆ ಪತ್ರಕರ್ತರು ಪ್ರಸ್ತಾಪಿಸಿದಾಗ ನಮ್ಮ ನಡುವೆ ಏನೂ ಸಮಸ್ಯೆ ಇ,. ನಾವೆಲ್ಲಾ ಚೆನ್ನಾಗಿಯೇ ಇದ್ದೇವೆ ಎಂದು ಹೇಳಿದರು.
ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರು ಸಹ ಕಾಂಗ್ರೆಸ್‌ಗೆ ಹೋಗುತ್ತಾರೆ ಎಂಬ ವಿಚಾರದಲ್ಲಿ ಸತ್ಯಾಂಶವಿಲ್ಲ. ನನ್ನ ಪ್ರಕಾರ ಈ ವಿಚಾರ ಸುಳ್ಳು. ಇಂತಹ ಸುಳ್ಳು ವದಂತಿಗಳನ್ನು ವಿಪಕ್ಷದವರು ಹಬ್ಬಿಸಿ ಜನರಲ್ಲಿ ಗೊಂದಲ ಮೂಡಿಸುವ ಹುನ್ನಾರ ನಡೆಸಿದ್ದಾರೆ ಎಂದರು.
ವರುಣಾದಿಂದ ಸಿದ್ದು ಸ್ಪರ್ಧೆ ಒಳಿತು
ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯಗೆ ಈ ಹಿಂದೆ ನಾನು ಒಂದು ಮಾತು ಹೇಳಿದ್ದೆ. ಅನಗತ್ಯವಾಗಿ ಅಲ್ಲಿ ಇಲ್ಲಿ ಓಡಾಟ ಮಾಡುತ್ತಾ ಕಥೆ ಹೇಳುವುದು ಬೇಡ, ವರುಣಾದಿಂದಲೇ ಸ್ಪರ್ಧಿಸುವಂತೆ ಹೇಳಿದ್ದೆ. ಬಹುಶಃ ನನ್ನ ಮಾತು ಈಗ ನಿಜ ಆಗಬಹುದು ಅನಿಸುತ್ತಿದೆ ಎಂದರು.
ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾದ ಮೇಲೆ ಎಲ್ಲವೂ ಗೊತ್ತಾಗಲಿದೆ. ಅನಗತ್ಯವಾಗಿ ಕೋಲಾರ ಮತ್ತೊಂದು ಕ್ಷೇತ್ರ ಎಂದು ಹೇಳುವ ಅವಶ್ಯಕತೆ ಇರಲಿಲ್ಲ. ಏಕೆ ಈ ರೀತಿಯ ಗೊಂದಲ ಮಾಡಿಕೊಳ್ಳುತ್ತಿದ್ದಾರೋ ಗೊತ್ತಿಲ್ಲ ಎಂದು ಸಿದ್ದರಾಮಯ್ಯನವರ ಸ್ಪರ್ಧೆ ವಿಚಾರವನ್ನು ಪ್ರಸ್ತಾಪಿಸುತ್ತಾ ಅವರು ಹೇಳಿದರು.
ಒಟ್ಟಾರೆ ನನ್ನ ಪ್ರಕಾರ ಸಿದ್ದರಾಮಯ್ಯನವರು ವರುಣಾದಿಂದಲೇ ಸ್ಪರ್ಧಿಸುವುದು ಒಳಿತು ಎಂದು ಅವರು ಹೇಳಿದರು.