ಕಲಬುರಗಿ.ಏ.5: ಜಾತ್ಯಾತೀತ ಜನತಾದಳದ ಹಿರಿಯ ಮುಖಂಡರೂ ಹಾಗೂ ರೈತ ಹೋರಾಟಗಾರರಾದ ಕೇದಾರಲಿಂಗಯ್ಯ ಹಿರೇಮಠ್ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದರಿಂದ ಪಕ್ಷಕ್ಕೆ ಮತ್ತಷ್ಟು ಬಲ ಬಂದಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಜೆಡಿಎಸ್ ನಾಯಕ ಕೇದಾರಲಿಂಗಯ್ಯ ಹಿರೇಮಠ್ ಹಾಗೂ ಬೆಂಬಲಿಗರನ್ನು ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿದ ಅವರು, ನಾನು ಸ್ವತ: ಕೇದಾರಲಿಂಗಯ್ಯ ಹಿರೇಮಠ್ ಅವರ ಪ್ರಖರ ಹೋರಾಟಗಳನ್ನು ನೋಡಿದ್ದೇನೆ. ಅಂತಹ ಹೋರಾಟಗಾರರು ಪಕ್ಷಕ್ಕೆ ಸೇರಿದ್ದು ಸಂತೋಷ ತಂದಿದೆ ಎಂದರು.
ದಿ. ಎನ್. ಧರ್ಮಸಿಂಗ್ ಅವರು ಮುಖ್ಯಮಂತ್ರಿಯಾಗಿದ್ದರು. ಆ ಸಂದರ್ಭದಲ್ಲಿ ನೀರಾವರಿ ಯೋಜನೆಗಾಗಿ ಅನೇಕ ಸ್ವಾಮೀಜಿಗಳು ಜೇವರ್ಗಿಯಲ್ಲಿ ಸತ್ಯಾಗ್ರಹ ಮಾಡುತ್ತಿದ್ದರು. ಅಂತಹ ಹೋರಾಟದಲ್ಲಿ ಕೇದಾರಲಿಂಗಯ್ಯ ಹಿರೇಮಠ್ ಅವರು ಮುಂಚೂಣಿಯಲ್ಲಿದ್ದರು. ಧರ್ಮಸಿಂಗ್ ಅವರು ಹೋರಾಟಗಾರರೊಂದಿಗೆ ಮಾತನಾಡಲು ನನಗೆ ಕಳಿಸಿದ್ದರು. ಆಗಲೇ ಕೇದಾರಲಿಂಗಯ್ಯ ಹಿರೇಮಠ್ ಅವರ ಹೋರಾಟದ ಕುರಿತು ನನಗೆ ಪರಿಚಯ ಆಗಿತ್ತು ಎಂದು ಅವರು ತಿಳಿಸಿದರು.
ಇನ್ನು ರಾಜ್ಯದಲ್ಲಿ ಬಿಜೆಪಿ ಪಕ್ಷದ ಭ್ರಷ್ಟಾಚಾರ, ಸ್ವಜನಪಕ್ಷಪಾತ ಹಾಗೂ ಆಂತರಿಕ ಕಲಹಗಳಿಂದಾಗಿ ಬಿಜೆಪಿಯ ಅನೇಕ ಶಾಸಕರು ಹಾಗೂ ಮುಖಂಡರು ಕಾಂಗ್ರೆಸ್ ಪಕ್ಷವನ್ನು ಸೇರುತ್ತಿದ್ದಾರೆ. ಕೇದಾರಲಿಂಗಯ್ಯ ಹಿರೇಮಠ್ ಅವರಂತಹ ಹೋರಾಟಗಾರರು ಸಹ ಪಕ್ಷಕ್ಕೆ ಬರುತ್ತಿದ್ದಾರೆ. ಹಳೆಯ ಮೈಸೂರು ಭಾಗದಲ್ಲಿ ಜೆಡಿಎಸ್ ಕುರಿತು ಈ ಬಾರಿ ಅಷ್ಟೊಂದು ಒಳ್ಳೆಯ ಅಭಿಪ್ರಾಯ ಇಲ್ಲ. ಜೆಡಿಎಸ್ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರದು ಎಂಬ ಕಾರಣಕ್ಕೆ ಜೆಡಿಎಸ್‍ನವರೂ ಸಹ ಕಾಂಗ್ರೆಸ್ ಸೇರುತ್ತಿದ್ದಾರೆ ಎಂದು ಅವರು ಹೇಳಿದರು.
ಬಿಜೆಪಿಯಲ್ಲಿನ ಆಂತರಿಕ ಕಲಹ ಹಾಗೂ ಭ್ರಷ್ಟಾಚಾರದಿಂದಾಗಿ ಆ ಪಕ್ಷದ ಶಾಸಕರೇ ಬೇಸತ್ತಿದ್ದಾರೆ. ಆ ಕಾರಣಕ್ಕೆ ಆ ಪಕ್ಷವನ್ನು ಬಿಟ್ಟು ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಇನ್ನೂ ಹಲವರು ಸೇರಲಿದ್ದಾರೆ ಎಂದು ತಿಳಿಸಿದ ಅವರು, ಕಲ್ಯಾಣ ಕರ್ನಾಟಕದಲ್ಲಿ ಯಾರು ಕಾಂಗ್ರೆಸ್ ಸೇರುತ್ತಾರೆ ಎಂಬುದು ಸ್ಥಳೀಯರಿಗೆ ಗೊತ್ತಿದೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸುಭದ್ರ ಹಾಗೂ ಜನಪರ ಆಡಳಿತ ಸಾಧ್ಯ ಎಂಬುದು ಜನತೆಗೆ ಗೊತ್ತಿದೆ. ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗುವ ಸಾಮಥ್ರ್ಯ ಕೇವಲ ಕಾಂಗ್ರೆಸ್ ಪಕ್ಷಕ್ಕಿದೆ. ಹಾಗಾಗಿ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಪಡೆದು ಸರ್ಕಾರ ರಚಿಸುವ ಎಲ್ಲ ಲಕ್ಷಣಗಳಿವೆ ಎಂದು ಅವರು ಹೇಳಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಲಿಂಗಾರೆಡ್ಡಿ ಅವರು, ಈ ಬಾರಿ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರ ಹಿಡಿಯುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಎಂ.ವೈ. ಪಾಟೀಲ್, ಡಾ. ಅಜಯಸಿಂಗ್, ಶ್ರೀಮತಿ ಕನೀಜ್ ಫಾತಿಮಾ, ಶರಣಬಸಪ್ಪ ದರ್ಶನಾಪೂರ್, ರಾಜ್ಯ ವಿಧಾನ ಪರಿಷತ್ ಮಾಜಿ ಸದಸ್ಯರಾದ ಅಲ್ಲಮಪ್ರಭು ಪಾಟೀಲ್, ತಿಪ್ಪಣ್ಣಪ್ಪ ಕಮಕನೂರ್, ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಜಗದೇವ್ ಗುತ್ತೇದಾರ್ ಕಾಳಗಿ ಮುಂತಾದವರು ಉಪಸ್ಥಿತರಿದ್ದರು.