ರಾಜ್ಯದಲ್ಲಿ ಮಂಕಿಪಾಕ್ಸ್ ಪತ್ತೆಯಿಲ್ಲ

ಬೆಂಗಳೂರು,ಆ.೬- ರಾಜ್ಯದಲ್ಲಿ ಇದುವರೆಗೂ ಯಾವುದೇ ಮಂಕಿ ಪಾಕ್ಸ್ ಪ್ರಕರಣಗಳು ವರದಿಯಾಗಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದರು.
ವಿಶ್ವ ವ್ಯಾಸ್ಕೂಲರ್ ದಿನದ ಅಂಗವಾಗಿ ಟೌನ್‌ಹಾಲ್‌ನಿಂದ ಕಂಠೀರವ ಕ್ರೀಡಾಂಗಣದವರೆಗೆ ಆಯೋಜಿಸಿದ್ದ ವಾಕಥಾನ್‌ಗೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಇಥೀಯೋಪಿಯಾದಿಂದ ಬಂದಿದ್ದ ವ್ಯಕ್ತಿಯೊಬ್ಬರಲ್ಲಿ ಮಂಕಿಪಾಕ್ಸ್‌ನ ರೋಗ ಲಕ್ಷಣಗಳು ಕಾಣಿಸಿಕೊಂಡಿದ್ದವು. ಅವರ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ವರದಿ ನೆಗೆಟೀವ್ ಬಂದಿದ್ದು, ಮಂಕಿ ಪಾಕ್ಸ್ ಇಲ್ಲ. ಆದರೆ, ಸ್ಮಾಲ್ ಪಾಕ್ಸ್ ದೃಢಪಟ್ಟಿದೆ ಎಂದರು.
ರಾಜ್ಯಸರ್ಕಾರ ಮಂಕಿಪಾಕ್ಸ್ ನಿಯಂತ್ರಣಕ್ಕೆ ಬಿಗಿಕ್ರಮವನ್ನು ಕೈಗೊಂಡಿದೆ. ರಾಜ್ಯದ ಗಡಿಗಳಲ್ಲಿ ಕಟ್ಟೆಚ್ಚರ ವಹಿಸಿದ್ದೇವೆ. ವಿಮಾನನಿಲ್ದಾಣ ಮತ್ತು ಬಂದರುಗಳಲ್ಲಿಯೂ ವಿದೇಶಿ ಪ್ರಯಾಣಿಕರ ಮೇಲೆ ನಿಗಾ ಇಟ್ಟು ತಪಾಸಣೆ ನಡೆಸಿದ್ದೇವೆ ಎಂದರು.
ವಿಮಾನ ನಿಲ್ದಾಣ ಮತ್ತು ಬಂದರುಗಳಲ್ಲಿ ದಿನದ ೨೪ ಗಂಟೆಯೂ ವೈದ್ಯರು ಪಾಳಿ ಮೇಲೆ ಕರ್ತವ್ಯ ನಿರ್ವಹಿಸಿ ಪ್ರಯಾಣಿಕರ ತಪಾಸಣೆ ನಡೆಸಿದ್ದಾರೆ. ಈ ಎಲ್ಲ ಕ್ರಮಗಳಿಂದ ಹೆಚ್ಚು ಅಂತಾರಾಷ್ಟ್ರೀಯ ಪ್ರಯಾಣಿಕರು ಬರುವ ರಾಜ್ಯದಲ್ಲಿ ಒಂದೇ ಒಂದು ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿಲ್ಲ ಎಂದರು.
ಒಂದು ವೇಳೆ ಮಂಕಿಪಾಕ್ಸ್ ಪತ್ತೆಯಾದರೆ, ಅಂತಹ ವ್ಯಕ್ತಿಗಳ ಚಿಕಿತ್ಸೆಗೂ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಮಾಡಿದ್ದೇವೆ ಎಂದು ಅವರು ಹೇಳಿದರು.

ವಿಶ್ವ ವ್ಯಾಸ್ಕೂಲರ್ ದಿನಾಚರಣೆ ಅಂಗವಾಗಿ ಬೆಂಗಳೂರಿನ ಪುರಭವನದಿಂದ ಕಂಠೀರವ ಕ್ರೀಡಾಂಗಣದವರೆಗೂ ನಡೆದ ವಾಕಥಾನ್‌ಗೆ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಚಾಲನೆ ನೀಡಿದರು. ನಟರಾದ ಪ್ರೇಮ್, ಪ್ರಜ್ವಲ್ ದೇವರಾಜ್ ಮತ್ತಿತರರಿದ್ದಾರೆ.
ಇಂದು ವಿಶ್ವ ವ್ಯಾಸ್ಕೂಲರ್ ದಿನಾಚರಣೆ ಕಾಲಿನ ರಕ್ತನಾಳ ಸಂಬಂಧಿ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ವಿಶ್ವದಲ್ಲಿ ಪ್ರತಿ ೬ ಸೆಕೆಂಡ್‌ಗೆ ಒಬ್ಬರು ವ್ಯಾಸ್ಕೂಲರ್ ಸಮಸ್ಯೆಗಳಿಂದ ಕಾಲನ್ನು ಕಳೆದುಕೊಳ್ಳುತ್ತಿದ್ದಾರೆ. ಹಾಗಾಗಿ. ಈ ರೋಗದ ಬಗ್ಗೆ ಹೆಚ್ಚಿನ ಜಾಗೃತಿ ಅಗತ್ಯ ಎಂದರು.
ಅತೀ ಹೆಚ್ಚು ಹೊತ್ತು ನಿಂತು ಕೆಲಸ ಮಾಡುವ ವೈದ್ಯರು, ಪೊಲೀಸರು ಮತ್ತಿತರರಲ್ಲಿ ಈ ಸಮಸ್ಯೆಗಳು ಹೆಚ್ಚು. ಈ ಬಗ್ಗೆ ಜಾಗೃತಿ ಮೂಡಿದಷ್ಟು ಕಾಯಿಲೆಯನ್ನು ನಿಯಂತ್ರಿಸಬಹುದು ಎಂದರು.
ಈ ವಾಕಥಾನ್‌ನಲ್ಲಿ ಕನ್ನಡ ಚಿತ್ರರಂಗದ ನಾಯಕ ನಟರಾದ ಪ್ರೇಮ್, ಪ್ರಜ್ವಲ್ ದೇವರಾಜ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.