ರಾಜ್ಯದಲ್ಲಿ ಭಾಗಶ: ಲಾಕ್‌ಡೌನ್ ನಾಳೆ, ನಾಳಿದ್ದು ಜನಜೀವನ ಸ್ತಬ್ಧ

ಬೆಂಗಳೂರು,ಏ.೨೩- ರಾಜ್ಯದಲ್ಲಿ ಇಂದು ರಾತ್ರಿಯಿಂದಲೇ ವಾರಾಂತ್ಯ ಕರ್ಫ್ಯೂ ಜಾರಿಯಾಗಲಿದ್ದು, ನಾಳೆ ಮತ್ತು ನಾಡಿದ್ದು ರಾಜ್ಯಾದ್ಯಂತ ಅಘೋಷಿತ ಬಂದ್ ಇರಲಿದೆ.
ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕನ್ನು ನಿಯಂತ್ರಿಸಲು ಸರ್ಕಾರ ಏ. ೨೧ ರಿಂದ ಮೇ ೪ರವರೆಗೂ ರಾತ್ರಿ ಕರ್ಫ್ಯೂ ಜಾರಿಮಾಡಿದ್ದು, ಹಗಲುಹೊತ್ತು ಅವಶ್ಯ ಸೇವೆಯನ್ನು ಹೊರತುಪಡಿಸಿ ಉಳಿದ ಅಂಗಡಿ ಮುಂಗಟ್ಟುಗಳು ಬಂದ್ ಆಗಿ ಭಾಗಶಃ ಲಾಕ್‌ಡೌನ್‌ನ್ನು ಜಾರಿ ಮಾಡಲಾಗಿದೆ. ಇಂದು ರಾತ್ರಿಯಿಂದ ವಾರಾಂತ್ಯ ಕರ್ಫ್ಯೂ ಜಾರಿಯಾಗಲಿದ್ದು, ಸೋಮವಾರ ಬೆಳಿಗ್ಗೆ ೬ರವರೆಗೂ ವಾರಾಂತ್ಯ ಕರ್ಫ್ಯೂ ಇರಲಿದೆ.
ಈ ವಾರಾಂತ್ಯ ಕರ್ಫ್ಯೂ ಸಂದರ್ಭದಲ್ಲಿ ಜನರ ಅನಗತ್ಯ ಓಡಾಟಕ್ಕೆ ನಿರ್ಬಧ ಹೇರಲಾಗಿದ್ದು, ಸುಖಾಸುಮ್ಮನೆ ಜನ ಬೀದಿಗಿಳಿದರೆ ಕಾನೂನಿನ ಕ್ರಮ ಎದುರಿಸಬೇಕಾಗುತ್ತದೆ.
ವಾರಾಂತ್ಯ ಕರ್ಫ್ಯೂ ಸಂದರ್ಭದಲ್ಲಿ ಸಾರ್ವಜನಿಕ ಸಾರಿಗೆ ವಾಹನಗಳ ಓಡಾಟ ಹೊರತುಪಡಿಸಿ ಉಳಿದೆಲ್ಲ ಖಾಸಗಿ ವಾಹನಗಳ ಓಡಾಟಗಳನ್ನೂ ನಿರ್ಬಂಧಿಸಲಾಗಿದೆ. ದ್ವಿಚಕ್ರ ವಾಹನ, ಕಾರು ಸೇರಿದಂತೆ ಯಾವುದೇ ಖಾಸಗಿ ವಾಹನಗಳು ರಸ್ತೆಗಿಳಿದರೆ ಪೊಲೀಸರು ಸೀಜ್ ಮಾಡುವರು.
ಅವಶ್ಯ ಸೇವೆಗಳನ್ನೊರತುಪಡಿಸಿ ಉಳಿದೆಲ್ಲ ಅಂಗಡಿ ಮುಂಗಟ್ಟುಗಳನ್ನು ವಾರಾಂತ್ಯ ಕರ್ಫ್ಯೂ ಸಂದರ್ಭದಲ್ಲಿ ಬಂದ್ ಮಾಡಲಾಗಿದ್ದು, ಅವಶ್ಯ ವಸ್ತುಗಳನ್ನು ಕೊಳ್ಳಲು ಬೆಳಿಗ್ಗೆ ೬ ರಿಂದ ೧೦ರವರೆಗೆ ಅವಕಾಶ ನೀಡಲಾಗಿದೆ.
ಇಂದು ರಾತ್ರಿಯಿಂದಲೇ ವಾರಾಂತ್ಯ ಕರ್ಫ್ಯೂವನ್ನು ಜಾರಿಗೊಳಿಸಲು ಪೊಲೀಸ್ ಇಲಾಖೆ ಸಿದ್ಧತೆ ನಡೆಸಿದ್ದು, ವಾರಾಂತ್ಯ
ಕರ್ಫ್ಯೂ ಸಂದರ್ಭದಲ್ಲಿ ಎಲ್ಲ ಮೇಲ್ಸೇತುವೆಗಳನ್ನು ಬಂದ್ ಮಾಡಲಾಗುತ್ತಿದ್ದು, ಇಲ್ಲಿ ವಾಹನಗಳ ಓಡಾಟಕ್ಕೆ ನಿರ್ಬಂಧ ಹೇರಲಾಗಿದೆ.
ಜನರ ಅನಗತ್ಯ ಗುಂಪುಗೂಡುವಿಕೆಗೆ ಕಡಿವಾಣ ಹಾಕಲು ಬೆಂಗಳೂರಿನಲ್ಲಿ ಸೆಕ್ಷೆನ್ ೧೪೪ ಅಡಿಯಲ್ಲಿ ನಿಷೇಧಾಜ್ಞೆ,ಯನ್ನು ಜಾರಿ ಮಾಡಲಾಗಿದೆ.
ಸಿಎಂ ಮನವಿ
ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಕೊರೊನಾ ಸೋಂಕನ್ನು ನಿಯಂತ್ರಿಸಲು ರಾಜ್ಯಸರ್ಕಾರ ವಾರಾಂತ್ಯ ಕರ್ಫ್ಯೂ ಜಾರಿ ಮಾಡಿದೆ. ಜನ ನಿಯಮಗಳನ್ನು ಪಾಲಿಸಿ ಸಹಕರಿಸಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.
ಏನಿರುತ್ತೆ
ಬಸ್, ಆಟೊ, ಓಲಾ, ಊಬರ್ ಸೇವೆ ಅಬಾಧಿತ,
ದಿನಸಿ ಅಂಗಡಿ, ನ್ಯಾಯಬೆಲೆ ಅಂಗಡಿ, ಹಾಲು ಮಾರಾಟ ಮಳಿಗೆ, ಮಾಂಸ ಮತ್ತು ಮೀನು ಮಾರಾಟ ಅಂಗಡಿ, ಆಸ್ಪತ್ರೆ, ಔಷಧಿ, ತರಕಾರಿ, ಹಣ್ಣು, ಸಲೂನ್, ಬ್ಯೂಟಿ ಪಾರ್ಲರ್‌ಗಳಿಗೆ ಅವಕಾಶ.
ಹೋಟೆಲ್ ಮತ್ತು ಮದ್ಯದಂಗಡಿಗಳಲ್ಲಿ ಪಾರ್ಸಲ್‌ಗೆ ಅವಕಾಶ. ಲಾಡ್ಜ್, ಬ್ಮಾಂಕ್, ವಿಮಾ ಕಚೇರಿ, ಪೆಟ್ರೋಲ್ ಬಂಕ್, ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳು ಮತ್ತು ಇ-ಕಾಮರ್ಸ್ ಸೇವೆಗೆ ಅವಶ್ಯಕ. ಕಟ್ಟಡ ನಿರ್ಮಾಣ ಸಾಮಾಗ್ರಗಳ ಅಂಗಡಿ ತೆರೆಯಲು ಅನುಮತಿ.
ಏನಿರಲ್ಲ
ಚಿತ್ರಮಂದಿರ, ಶಾಪಿಂಗ್‌ಮಾಲ್, ಪುಸ್ತಕ, ಎಲೆಕ್ಟ್ರಾನಿಕ್, ಬಟ್ಟೆ, ಅಂಗಡಿಗಳು ಸಂಪೂರ್ಣ ಬಂದ್.
ಬಾರ್, ಪಬ್, ಜಿಮ್,, ರೆಸ್ಟೋರೆಂಟ್, ಈಜುಕೊಳ ಬಂದ್. ಖಾಸಗಿ ವಾಹನಗಳ ಓಡಾಟಕ್ಕೆ ನಿಬಂಧ,