ಬೆಂಗಳೂರು,ಏ.೩-ರಾಜ್ಯದಲ್ಲಿ ಸುಡು ಬಿಸಿಲಿನಿಂದ ಜನರು ತತ್ತರಿಸಿ ಹೋಗಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ಬಿಸಿ ಗಾಳಿ ಅಲೆ ಎದುರಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರ ಜೊತೆಗೆ ಆರೋಗ್ಯದ ಬಗ್ಗೆ ಜನರು ಎಚ್ಚರಿಕೆ ವಹಿಸುವಂತೆಯೂ ಸೂಚಿಸಿದೆ.
ಬಿಸಿಲ ಝಳಕ್ಕೆ ರಾಜ್ಯದ ಜನರು ಪರಿತಪಿಸುವಂತಾಗಿದೆ ಮುಂಬರುವ ದಿನಗಳಲ್ಲಿ ಉಷ್ಣಾಂಶ ಇನ್ನಷ್ಟು ಏರಿಕೆಯಾಗುವ ಭೀತಿ ಎದುರಾಗಿದೆ. ಬಯಲು ಸೀಮೆ ಪ್ರದೇಶಗಳಲ್ಲಿ ಗರಿಷ್ಠ ತಾಪಮಾನ ೪೦ ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗಲಿದೆ. ಗುಡ್ಡಗಾಡು ಪ್ರದೇಶಗಳಲ್ಲಿ ೩೦ ಡಿಗ್ರಿ ಸೆಲ್ಸಿಯಸ್ ಇಲ್ಲವೇ ಅದಕ್ಕಿಂತ ಹೆಚ್ಚು ತಾಪಮಾನ ದಾಖಲಾದರೆ ಅದನ್ನು ಬಿಸಿ ಗಾಳಿ ಎಂದು ಕರೆಯಲಾಗುತ್ತದೆ.
ಗರಿಷ್ಠ ತಾಪಮಾನವು ೪.೫ ರಿಂದ ಮತ್ತು ೬ ಡಿಗ್ರಿ ನಡುವೆ ಇದ್ದಾಗ ಭಾರತೀಯ ಹವಾಮಾನ ಇಲಾಖೆ ಬಿಸಿ ಗಾಳಿ ಎಂದು ಘೋಷಿಸುತ್ತದೆ. ಉತ್ತರ ಕರ್ನಾಟಕ ದಕ್ಷಿಣ ಜಿಲ್ಲೆಗಳಲ್ಲೂ ದಿನದಿಂದ ದಿನಕ್ಕೆ ಉಷ್ಣಾಂಶ ಏರುಗತಿಯಲ್ಲಿ ಸಾಗಿದೆ. ಪ್ರಸ್ತುತ ೩೮-೩೯ ಡಿಗ್ರಿಯಷ್ಟು ಉಷ್ಣಾಂಶ ದಾಖಲಾಗುತ್ತಿದೆ. ಅದೇ ರೀತಿ ದಕ್ಷಿಣ ಕರ್ನಾಟಕ ಜಿಲ್ಲೆಗಳಲ್ಲೂ ೩೪ ರಿಂದ ೩೬ ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.
ಬೆಂಗಳೂರು ನಗರದಲ್ಲೂ ಸುಡು ಬಿಸಿಲಿನಿಂದ ಜನರು ಹೈರಾಣಾಗಿದ್ದಾರೆ ತಂಪು ಪಾನೀಯ, ಎಳನೀರು, ಐಸ್‌ಕ್ರೀಮ್ ಪಾರ್ಲರ್‌ಗಳಿಗೆ ಮೊರೆ ಹೋಗಿದ್ದಾರೆ. ಈಗ ಬೆಂಗಳೂರಿನಲ್ಲಿ ಉಷ್ಣಾಂಶ ೩೫ ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿದೆ. ಇದೇ ರೀತಿಯ ಉಷ್ಣಾಂಶ ಮುಂದಿನ ಜೂನ್‌ವರೆಗೂ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಆರೋಗ್ಯದ ಕಡೆ ಗಮನ ಹರಿಸಿ
ಸುಡು ಬಿಸಿಲು ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ಜನರು ಮನೆಯಿಂದ ಹೊರ ಹೋಗುವಾಗ ಸನ್ ಸ್ಕ್ರೀನ್ ಮುಲಾಮು ಹಚ್ಚಿಕೊಳ್ಳುವಂತೆ ಸೂಚಿಸಿರುವ ಹವಾಮಾನ ಇಲಾಖೆ ಹತ್ತಿ ಹಾಗೂ ಸಡಿಲ ಬಟ್ಟೆ ಧರಿಸಿ ನೀರು, ನೈಸರ್ಗಿಕ ಪಾನೀಯ ಹಾಗೂ ಹೆಚ್ಚು ದ್ರವಹಾರ ಸೇವಿಸಬೇಕು. ವಾಂತಿ ಭೇದಿಯಾದರೆ ಹಣ್ಣಿನ ರಸ, ಎಳನೀರು ಸೇವಿಸಬೇಕು. ಸಕ್ಕರೆ ಕಾಯಿಲೆ ಇರುವವರು ಮಜ್ಜಿಗೆ, ನೀರು, ಗಂಜಿ ಸೇವಿಸುವುದು ಒಳಿತು. ಮಕ್ಕಳು, ಗರ್ಭಿಣಿಯರು ಅನಗತ್ಯವಾಗಿ ಹೊರ ಹೋಗಬಾರದು. ಮನೆ ಸುತ್ತ ಮುತ್ತ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಹವಾಮಾನ ಇಲಾಖೆ ಸೂಚಿಸಿದೆ.
ಉತ್ತರದಿಂದ ದಕ್ಷಿಣದತ್ತ ಬಿಸಿ ಗಾಳಿ ಬೀಸುತ್ತಿದ್ದು, ವಾತಾವರಣದಲ್ಲಿ ತೇವಾಂಶವಿಲ್ಲ. ಹೀಗಾಗಿ ಹಲವು ಜಿಲ್ಲೆಗಳಲ್ಲಿ ಉಷ್ಣಾಂಶ ಏರಿಕೆಯಾಗುತ್ತಿದೆ. ಸಾಯಂಕಾಲ ೫ ಗಂಟೆಯವರೆಗೆ ಸೂರ್ಯನ ಪ್ರಕರತೆ ಹೆಚ್ಚಾಗಿರಲಿದೆ. ಮುಂಬರುವ ದಿನಗಳಲ್ಲಿ ಬಿಸಿಲಿನ ಝಳ ಇನ್ನಷ್ಟು ಗಂಭೀರ ಸ್ವರೂಪ ಪಡೆದುಕೊಳ್ಳಲಿದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸಬೇಕೇಂದು ಹವಾಮಾನ ಇಲಾಖೆ ಸೂಚಿಸಿದೆ.