ರಾಜ್ಯದಲ್ಲಿ ಬಿಜೆಪಿ ೧೭, ಕಾಂಗ್ರೆಸ್ ೯, ಜೆಡಿಎಸ್‌ಗೆ ೨ ಸ್ಥಾನ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಜೂ.೪:ರಾಜ್ಯದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕಳೆದ ಬಾರಿಗಿಂತ ಕಡಿಮೆಸ್ಥಾನ ಗಳಿಸಿದ್ದು, ಕಾಂಗ್ರೆಸ್‌ನ ಗಳಿಕೆ ಕಳೆದ ಬಾರಿಗಿಂತ ಹೆಚ್ಚಿದೆ. ಜೆಡಿಎಸ್ ಸಹ ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನ ಗಳಿಸಿದೆ.
ಕಳೆದ ಲೋಕಸಭಾ ಚುನಾವಣೆಂiiಲ್ಲಿ ೨೫ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದ್ದ ಬಿಜೆಪಿ,ಈ ಬಾರಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡು ಮೂರು ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದು, ಬಿಜೆಪಿ ಸ್ಪರ್ಧಿಸಿದ್ದ ೨೫ ಕ್ಷೇತ್ರಗಳ ಪೈಕಿ ೧೭ ರಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ ಪಕ್ಷ ಕಳೆದ ಲೋಕಸಭಾ ಕ್ಷೇತ್ರದಲ್ಲಿ ೧ ಕ್ಷೇತ್ರದಲ್ಲಿ ಮಾತ್ರ ಗೆದ್ದಿತ್ತು. ಆದರೆ, ಈ ಬಾರಿ ೯ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿ ತನ್ನ ಬಲವನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿದೆ. ಜೆಡಿಎಸ್ ೨ ಕ್ಷೇತ್ರಗಳಲ್ಲಿ ಗೆದ್ದಿದೆ.
ಈ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ ಕುಮಾರಸ್ವಾಮಿ, ಜಗದೀಶ್‌ಶೆಟ್ಟರ್, ಬಸವರಾಜ ಬೊಮ್ಮಾಯಿ ಈ ಮೂವರು ಜಯಗಳಿಸಿದ್ದು, ಮಾಜಿ ಸಚಿವರಾದ ವಿ.ಸೋಮಣ್ಣ, ಗೋವಿಂದ ಕಾರಜೋಳ, ಡಾ. ಕೆ. ಸುಧಾಕರ್ ಇವರುಗಳು ಸಹ ಗೆದ್ದು ಬೀಗಿದ್ದಾರೆ.
ಕೇಂದ್ರ ಸಚಿವ ಭಗವಾನ್‌ಕೂಬಾ ಬೀದರ್‌ನಲ್ಲಿ ಸೋಲನುಭವಿಸಿದ್ದು, ಇಲ್ಲಿ ಅರಣ್ಯ ಸಚಿವ ಈಶ್ವರ್‌ಖಂಡ್ರೆ ಪುತ್ರ ಸಾಗರ್‌ಖಂಡ್ರೆ ಗೆದ್ದಿದ್ದಾರೆ.
ಶಿವಮೊಗ್ಗದಲ್ಲಿ ಬಿಜೆಪಿಯಲ್ಲಿ ಬಂಡಾಯವೆದ್ದು ಪಕ್ಷೇತರರಾಗಿ ಕಣಕ್ಕಿಳಿದಿದ್ದ ಈಶ್ವರಪ್ಪ ಅವರಿಗೆ ಸೋಲಾಗಿದೆ. ಬಳ್ಳಾರಿಯಿಂದ ಬಿಜೆಪಿ ಅಭ್ಯರ್ಥಿಯಾಗಿದ್ದ ಮಾಜಿ ಸಚಿವ ಶ್ರೀರಾಮುಲು ಸಹ ಸೋತಿದ್ದಾರೆ.ಈ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರದ ಸಚಿವರ ಪುತ್ರ, ಪುತ್ರಿ, ಪತ್ನಿಕಣಕ್ಕಿಳಿದಿದ್ದು, ಈ ಪೈಕಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಅವರ ಪತ್ನಿಡಾ.ಪ್ರಭಾ ಮಲ್ಲಿಕಾರ್ಜುನ್ ದಾವಣಗೆರೆಯಿಂದ ಗೆದ್ದಿದ್ದು, ಚಾಮರಾಜನಗರದಿಂದ ಕಣಕ್ಕಿಳಿದಿದ್ದ ಸಚಿವ ಡಾ.ಹೆಚ್.ಸಿ ಮಹದೇವಪ್ಪ ಪುತ್ರ ಸುನಿಲ್‌ಬೋಸ್ ಗೆದ್ದಿದ್ದು, ಚಿಕ್ಕೋಡಿಯಿಂದ ಸಚಿವ ಸತೀಶ್‌ಜಾರಕಿಹೊಳಿ ಪುತ್ರಿ ಪ್ರಿಯಾಂಕ ಜಾರಕಿಹೊಳಿ ಜಯಭೇರಿ ಬಾರಿಸಿದ್ದಾರೆ. ಹಾಗೆಯೇ ಬೀದರ್‌ನಿಂದ ಸ್ಪರ್ಧಿಸಿದ್ದ ಸಚಿವ ಈಶ್ವರ್‌ಖಂಡ್ರೆ ಪುತ್ರ ಸಾಗರ್‌ಖಂಡ್ರೆ ಗೆಲುವು ಸಾಧಿಸಿದ್ದಾರೆ.ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ದೊಡ್ಡ ಅಂತರದಲ್ಲಿ ಗೆಲ್ಲುವ ಮೂಲಕ ಮಂಡ್ಯವನ್ನು ಜೆಡಿಎಸ್‌ನ ತೆಕ್ಕೆಗೆ ತೆಗೆದುಕೊಂಡು ಮಂಡ್ಯ ಜೆಡಿಎಸ್‌ನ ಭದ್ರಕೋಟೆ ಎಂಬುದನ್ನು ಸಾಬೀತು ಮಾಡಿದ್ದಾರೆ. ಹಾಗೆಯೇ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಬಿಜೆಪಿಯ ಡಾ. ಸಿ.ಎನ್ ಮಂಜುನಾಥ್ ಅವರು ಗೆಲ್ಲುವ ಮೂಲಕ ಉಪಮುಖ್ಯಮಂತ್ರಿ ಕಾಂಗ್ರೆಸ್‌ನ ಡಿ.P ಶಿವಕುಮಾರ್ ಹಾಗೂ ಸಂಸದ ಡಿ.ಕೆ ಸುರೇಶ್ ಅವರ ಭದ್ರಕೋಟೆಯನ್ನು ಭೇದಿಸಿ ಕಮಲ ಅರಳಿಸಿದ್ದಾರೆ.ಕಳೆದ ೨೫ ವರ್ಷಗಳಿಂದ ಜೆಡಿಎಸ್‌ನ ಭದ್ರ ಕೋಟೆಯಾಗಿದ್ದ ಹಾಸನ ಕೈ ತೆಕ್ಕೆಗೆ ಹೋಗಿದೆ.ಇಲ್ಲಿ ಕಾಂಗ್ರೆಸ್‌ನ ಶ್ರೇಯಸ್‌ಪಟೇಲ್ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯಾಗಿರುವ ಜೆಡಿಎಸ್‌ನ ಪ್ರಜ್ವಲ್‌ರೇವಣ್ಣ ಅವರನ್ನು ಸೋಲಿಸಿದ್ದಾರೆ.ಪ್ರಜ್ವಲ್‌ರೇವಣ್ಣ ಅವರ ಸೋಲು ಜೆಡಿಎಸ್‌ಗೆ ಮರ್ಮಾಘಾತ ನೀಡಿದೆ.ಶಿವಮೊಗ್ಗದಲ್ಲಿ ಬಿ.ವೈ ರಾಘವೇಂದ್ರ ೪ನೇ ಬಾರಿಗೆ ಗೆದ್ದು ಲೋಕಸಭಾ ಪ್ರವೇಶಿಸಿದ್ದಾರೆ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ನಟ ಶಿವರಾಜ್‌ಕುಮಾರ್ ಪತ್ನಿ ಗೀತಾಶಿವರಾಜ್‌ಕುಮಾರ್ ಅವರಿಗೆ ಸೋಲಾಗಿದೆ. ಹಾಗೆಯೇ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿದ್ದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಸೋತು ಮುಖಭಂಗ ಅನುಭವಿಸಿದ್ದಾರೆ. ಚಿತ್ರದುರ್ಗ ಬಿಜೆಪಿ ತೆಕ್ಕೆಯಲ್ಲಿ ಉಳಿದಿದ್ದು, ಇಲ್ಲಿ ಬಿಜೆಪಿಯ ಗೋವಿಂದಕಾರಜೋಳ ಕಾಂಗ್ರೆಸ್‌ನ ಚಂದ್ರಪ್ಪ ವಿರುದ್ಧ ಗೆದ್ದಿದ್ದಾರೆ.
ತುಮಕೂರಿನಲ್ಲೂ ಮಾಜಿ ಸಚಿವ ಬಿಜೆಪಿಯ ವಿ.ಸೋಮಣ್ಣ ಭರ್ಜರಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಮುದ್ದಹನುಮೇಗೌಡ ಸೋಲನುಭವಿಸಿದ್ದಾರೆ.
ಬಳ್ಳಾರಿಯಲ್ಲಿ ಬಿಜೆಪಿಯ ಮಾಜಿ ಸಚಿವ ಶ್ರೀರಾಮುಲು ಸೋಲನುಭವಿಸಿದ್ದು, ಇಲ್ಲಿ ಕಾಂಗ್ರೆಸ್‌ನ ಶಾಸಕ ತುಕಾರಾಮ್ ಗೆಲುವು ಸಾಧಿಸಿದ್ದಾರೆ.ಚಿಕ್ಕಬಳ್ಳಾಪುರದಲ್ಲಿ ಬಿಜೆಪಿಯ ಮಾಜಿ ಸಚಿವ ಡಾ.ಕೆ. ಸುಧಾಕರ್ ಗೆಲುವು ಸಾಧಿಸಿದ್ದು, ಕಾಂಗ್ರೆಸ್‌ನ ರಕ್ಷಾರಾಮಯ್ಯ ಸೋಲನುಭವಿಸಿದ್ದಾರೆ. ಧಾರವಾಡ ಕ್ಷೇತ್ರದಿಂದ ಕೇಂದ್ರ ಸಚಿವ ಪ್ರಲ್ಹಾದ್‌ಜೋಷಿ ಭರ್ಜರಿಯಾಗಿ ಗೆದ್ದಿದ್ದಾರೆ.ಬೆಳಗಾವಿಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್‌ಶೆಟ್ಟರ್ ಗೆಲುವು ಸಾಧಿಸಿದ್ದು, ಇಲ್ಲಿ ಸಚಿವೆ ಲಕ್ಷ್ಮಿಹಾಬ್ಬಾಳ್ಕರ್ ಪುತ್ರ ಮೃಣಾಲ್‌ಹೆಬ್ಬಾಳ್ಕರ್ ಪರಾಜಯ ಹೊಂದಿದ್ದಾರೆ.
ಬಾಗಲಕೋಟೆಯಲ್ಲಿ ಹಾಲಿ ಸಂಸದ ಪಿ.ಸಿ ಗದ್ದಿಗೌಡರ್ ಗೆಲುವು ಸಾಧಿಸಿದ್ದು,ಸಚಿವ ಶಿವಾನಂದ ಪಾಟೀಲ್ ಪುತ್ರಿ ಕೈ ಅಭ್ಯರ್ಥಿ ಸಂಯುಕ್ತಾ ಪಾಟೀಲ್ ಪರಾಜಯಗೊಂಡಿದ್ದಾರೆ. ಚಾಮರಾಜನಗರದಲ್ಲಿ ಕೈ ಅಭ್ಯರ್ಥಿ ಸಚಿವ ಡಾ. ಹೆಚ್.ಸಿ ಮಹದೇವಪ್ಪ ಅವರ ಪುತ್ರ ಸುನಿಲ್‌ಬೋಸ್ ಗೆದ್ದಿದ್ದು, ಬಿಜೆಪಿ ಅಭ್ಯರ್ಥಿ ಬಾಲ್‌ರಾಜ್ ಅವರಿಗೆ ಸೋಲಾಗಿದೆ. ದಾವಣಗೆರೆಯಲ್ಲಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಪತ್ನಿ ಡಾ.ಪ್ರಭಾಮಲ್ಲಿಕಾರ್ಜುನ್ ಗೆದ್ದಿದ್ದು, ಇಲ್ಲಿ ಹಾಲಿ ಸಂಸದ ಸಿದ್ದೇಶ್ವರ್ ಪತ್ನಿ ಗಾಯತ್ರಿ ಸಿದ್ದೇಶ್ವರ್ ಸೋತಿದ್ದಾರೆ.ಕೊಪ್ಪಳದಲ್ಲಿ ಕಾಂಗ್ರೆಸ್‌ನ ರಾಜಶೇಖರ ಹಿಟ್ನಾಳ್ ಗೆದ್ದಿದ್ದು, ಬಿಜೆಪಿಯ ಡಾ.ಬಸವರಾಜುಕ್ಯಾವಟೂರು ಸೋತಿದ್ದಾರೆ.
ಕೋಲಾರದಲ್ಲಿ ಜೆಡಿಎಸ್‌ನ ಮಲ್ಲೇಶ್‌ಬಾಬು, ಕಾಂಗ್ರೆಸ್‌ನ ಕೆ.ವಿ ಗೌತಮ್ ಅವರನ್ನು ಸೋಲಿಸಿ ವಿಜಯದ ನಗೆ ಬೀರಿದ್ದಾರೆ. ಕಲಬುರಗಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಳಿಯ ರಾಧಾಕೃಷ್ಣ ದೊಡ್ಡಮನಿ ಗೆದ್ದಿದ್ದು ಹಾಲಿ ಸಂಸದ ಉಮೇಶ್‌ಜಾಧವ್ ಸೋತಿದ್ದಾರೆ.
ಉತ್ತರ ಕನ್ನಡ ಕ್ಷೇತ್ರದಲ್ಲಿ ವಿಧಾನಸಭೆಯ ಮಾಜಿ ಅಧ್ಯಕ್ಷ ವಿಶ್ವೇಶ್ವರಹೆಗಡೆ ಕಾಗೇರಿ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಅವರನ್ನು ಸೋಲಿಸಿ ಸಂಸತ್ ಪ್ರವೇಶಿಸಿದ್ದಾರೆ.ರಾಯಚೂರಿನಲ್ಲಿ ಕೈ ಅಭ್ಯರ್ಥಿ ಕುಮಾರನಾಯಕ್ ಮುನ್ನಡೆಯಲ್ಲಿದ್ದಾರೆ. ಉಡುಪಿ,ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿ ಹಾಗೂ ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಕೋಟಾಶ್ರೀನಿವಾಸಪೂಜಾರಿ ಗೆಲುವು ಸಾಧಿಸಿದ್ದಾರೆ. ದಕ್ಷಿಣ ಕನ್ನಡದಲ್ಲಿ ಬಿಜೆಪಿ ಅಭ್ಯರ್ಥಿ ಬ್ರಿಜೇಶ್‌ಚೌಟ ಮುನ್ನಡೆಯಲ್ಲಿದ್ದಾರೆ.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ರಾಜವಂಶಸ್ಥ ಯಧುವೀರ್‌ಒಡೆಯರ್ ಮುನ್ನಡೆಯಲ್ಲಿದ್ದಾರೆ. ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರ ಸಚಿವ ಭಗವಾನ್‌ಕೂಬಾ ಹಿನ್ನಡೆ ಅನುಭವಿಸಿದ್ದು, ಇಲ್ಲಿ ಸಚಿವ ಈಶ್ವರ್‌ಖಂಡ್ರೆ ಪುತ್ರ ಸಾಗರ್‌ಖಂಡ್ರೆ ಗೆಲುವು ಸಾಧಿಸಿದ್ದಾರೆ.
ಬಿಜಾಪುರ ಕ್ಷೇತ್ರದಿಂದ ಹಾಲಿ ಸಂಸದ ರಮೇಶ್‌ಜಿಗಜಿಣಗಿ ಗೆಲುವು ಸಾಧಿಸಿದ್ದು, ಇಲ್ಲಿ ಕಾಂಗ್ರೆಸ್‌ನ ರಾಜು ಅಲಗೂರು ಸೋಲನುಭವಿಸಿದ್ದಾರೆ.

ಬೆಂಗಳೂರು ೩ ಕ್ಷೇತ್ರಗಳಲ್ಲೂ ಬಿಜೆಪಿ
ಬೆಂಗಳೂರಿನ ೩ ಲೋಕಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಮುನ್ನಡೆ ಸಾಧಿಸಿದೆ. ಬೆಂಗಳೂರು ಉತ್ತರದಲ್ಲಿ ಕೇಂದ್ರ ಸಚಿವೆ ಶೋಭಾಕರಂದ್ಲಾಜೆ ಕಾಂಗ್ರೆಸ್ ಅಭ್ಯರ್ಥಿ ರಾಜೀವ್‌ಗೌಡ ಅವರಿಗಿಂತ ಹೆಚ್ಚಿನ ಮತ ಪಡೆದು ಮುನ್ನಡೆಯಲ್ಲಿದ್ದಾರೆ. ಬೆಂಗಳೂರು ದಕ್ಷ್ಷಿಣದಲ್ಲಿ ಹಾಲಿ ಸಂಸದ ತೇಜಸ್ವಿಸೂರ್ಯ ಮುನ್ನಡೆಯಲ್ಲಿದ್ದು, ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ ಕೈ ಅಭ್ಯರ್ಥಿ ಸೌಮ್ಯರೆಡ್ಡಿ ಅವರಿಗೆ ಹಿನ್ನಡೆಯಾಗಿದೆ. ಬೆಂಗಳೂರು ಕೇಂದ್ರದಲ್ಲಿ . ಇಲ್ಲಿ ಹಾಲಿ ಸಂಸದ ಬಿಜೆಪಿಯ ಪಿ.ಸಿ ಮೋಹನ್ ಜಯಗಳಿಸಿದ್ದಾರೆ. ಕಾಂಗ್ರೆಸ್‌ನ ಮನ್ಸೂರ್‌ಅಲಿಖಾನ್ ಸೋಲು ಅನುಭವಿಸಿದ್ದಾರೆ.

ಸುರಪುರ ಉಪ ಚುನಾವಣೆ ’ಕೈ’ ಗೆಲುವು
ಲೋಕಸಭಾ ಚುನಾವಣೆ ಜತೆಗೆ ನಡೆದಿದ್ದ ಸುರಪುರ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿ ಸುರಪುರ ಕ್ಷೇತ್ರವನ್ನು ಉಳಿಸಿಕೊಂಡಿದೆ. ಇಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿಯಾಗಿದ್ದ ದಿವಂಗತ ಶಾಸಕ ರಾಜಾವೆಂಕಟಪ್ಪ ನಾಯಕ್ ಅವರ ಪುತ್ರ ವೇಣುಗೋಪಾಲನಾಯಕ ಬಿಜೆಪಿಯ ರಾಜುಗೌಡ ಅವರನ್ನು ಪರಾಭವಗೊಳಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದಾರೆ.