
ಪೀಣ್ಯದಾಸರಹಳ್ಳಿ, ಮಾ. ೯- ಬಿಜೆಪಿಯಿಂದ ಯಾವ ಕ್ಷೇತ್ರಕ್ಕೆ ಯಾವ ಅಭ್ಯರ್ಥಿಗೆ ಟಿಕೆಟ್ ಕೊಟ್ಟರೆ ಗೆಲ್ತಾರೆ ಎಂಬ ಸಮೀಕ್ಷೆ ನಮ್ಮ ಬಳಿ ಇದೆ.ಅದರ ಆಧಾರದ ಮೇಲೆ ಎಲ್ಲಾ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದ್ದೇವೆ. ಈ ಬಾರಿಯೂ ಬಿಜೆಪಿ ವಿಜಯ ದುಂದುಬಿ ಮೊಳಗಿಸುವುದು ನಿಶ್ಚಿತ. ನಮ್ಮ ಸಮೀಕ್ಷೆ ಪ್ರಕಾರ ಕಾಂಗ್ರೆಸ್ ೫೦ ಸೀಟು ಗೆಲ್ಲಬಹುದಷ್ಟೆ ಎಂದು ಕಂದಾಯ ಸಚಿವ ಹಾಗೂ ಬಿಜೆಪಿ ಮುಖಂಡ ಆರ್. ಅಶೋಕ್ ಹೇಳಿದ್ದಾರೆ.
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ಯಾತ್ರೆಗೂ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಅಶೋಕ್, ಭಾರತೀಯ ಜನತಾ ಪಕ್ಷ ಒಂದು ರಾಷ್ಟ್ರೀಯ ಪಕ್ಷ,ಕುಟುಂಬದ ಪಕ್ಷ ಅಲ್ಲ,ಯಾರೋ ತೀರ್ಮಾನಿಸಿ ಹೋಗು ನೀನೇ ಅಭ್ಯರ್ಥಿ ಎಂದು ಹೇಳಲು,ರಾಷ್ಟ್ರೀಯ ಪಕ್ಷದ ಮಾನದಂಡಗಳ ಮೇಲೆ ಮುಂಬರುವ ಚುನಾವಣೆಯಲ್ಲಿ ಯಾವ ಕ್ಷೇತ್ರಕ್ಕೆ ಯಾವ ಅಭ್ಯರ್ಥಿ ಹಾಕಬೇಕು ಎಂಬುದನ್ನು ಪಕ್ಷದ ಹೈಕಮಾಂಡ್ ತೀರ್ಮಾನಿಸುತ್ತದೆ ಎಂದರು.
ಕಾಂಗ್ರೆಸ್‌ನಲ್ಲಿ ರಾಷ್ಟ್ರೀಯ ನಾಯಕರೇ ಇಲ್ಲ. ಇರುವ ಕೆಲವು ನಾಯಕರು ಈಗಾಗಲೇ ಲಂಡನ್ ಗೆ ಹೋಗಿದ್ದಾರೆ,ರಾಜ್ಯದಲ್ಲಿ ಇರುವ ಇಬ್ಬರು ನಾಯಕರು ನಾನೊಂದು ತೀರ ನೀನೊಂದು ತೀರ ಎಂಬಂತೆ ವಿರೋಧ ಪಕ್ಷದ ನಾಯಕನ ಸೀಟಿಗೆ ಟವಲ್ ಹಾಕಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದ ಸಚಿವರು, ಮಾಡಾಳ್ ಲಂಚ ಪ್ರಕರಣ ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಬಹುದಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಶೋಕ್,ನಾವು ಇದ್ದಿದ್ದಕ್ಕೆ ಹಿಡಿದಿದ್ದೇವೆ,ಕಾಂಗ್ರೆಸ್ ಆಗಿದ್ದರೆ ಪ್ರಕರಣನೇ ಮುಚ್ಚಿ ಹಾಕಿಬಿಡ್ತಿದ್ದರು.ಲೋಕಾಯುಕ್ತವನ್ಮೇ ಮುಚ್ಚಿದ್ದರು,ನಾವು ಮತ್ತೆ ಲೋಕಾಯುಕ್ತಕ್ಕೆ ಚಾಲನೆ ನೀಡಿದ್ದೇವೆ ಎಂದರು.
ಬಿಡುಗಡೆಯಾಗಿದ್ದ ಅನುದಾನವನ್ನು ಬಿಜೆಪಿ ಸರ್ಕಾರ ಕಿತ್ತುಕೊಂಡಿದೆ ಎಂಬ ದಾಸರಹಳ್ಳಿ ಹಾಲಿ ಶಾಸಕ ಆರ್ ಮಂಜುನಾಥ್ ಅವರ ಆರೋಪದ ಬಗ್ಗೆ ಮಾತನಾಡಿದ ಅಶೋಕ್,ಅನುದಾನ ತರೋಕಾಗಲ್ಲ,ಉಳಿಸಿಕೊಳ್ಳಲು ಶಕ್ತಿ ಇಲ್ಲ ಅಂದ ಮೇಲೆ ಯಾಕೆ ಶಾಸಕ ಆಗಬೇಕು,ಶಕ್ತಿ ಇರೋವರು ಶಾಸಕರಾಗಲಿ, ಆ ಉದಾರತನದಿಂದ ಮುಂದಿನ ಚುನಾವಣೆಯಲ್ಲಿ ಜನತೆ ತೀರ್ಮಾನ ಮಾಡ್ತಾರೆ ಎಂದು ಹೇಳಿದರು. ಹೆಚ್. ಡಿ. ಕುಮಾರಸ್ವಾಮಿ ಅವರು ಕಾಂಗ್ರೆಸ್ -ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗಿದ್ದದ್ದೇ ೧೬ ತಿಂಗಳು,ಆ ಸಮಯದಲ್ಲಿ ದಾಸರಹಳ್ಳಿ ಕ್ಷೇತ್ರಕ್ಕೆ ೩೦ ಕೋಟಿ ಕೊಟ್ಟಿದ್ದರು, ಅದು ರಿಲೀಸ್ ಆಗಿದೆ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಯಾವ್ಯಾವ ಕ್ಷೇತ್ರಕ್ಕೆ ಎಷ್ಟೆಷ್ಟು ಅನುಧಾಯನೀಡಿದ್ದಾರೆ ಎಂಬುದನ್ನು ತಿಳಿಸಲಿ ಎಂದು ಸವಾಲು ಹಾಕಿದ ಅಶೋಕ್,೫ ಲಕ್ಷ ಜನಸಂಖ್ಯೆ ಇರು ಬೊಮ್ಮನಹಳ್ಳಿ ಕ್ಷೇತ್ರಕ್ಕೆ ಒಂದು ರೂ ಬಿಡುಗಡೆ ಮಾಡಿರಲಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಕೇಂದ್ರ ಸಚಿವ ಎ. ನಾರಾಯಣ ಸ್ವಾಮಿ, ತೋಟಗಾರಿಕೆ ಸಚಿವ ಮುನಿರತ್ನ, ವಿಧಾನ ಪರಿಷತ್ ಸದಸ್ಯ ಚೆಲುವಾದಿ ನಾರಾಯಣ ಸ್ವಾಮಿ, ಸಂಸದ ಡಿ. ವಿ. ಸದಾನಂದಗೌಡ, ಮಾಜಿ ಶಾಸಕ ಎಸ್. ಮುನಿರಾಜು, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಬಿ. ನಾರಾಯಣಗೌಡ, ದಾಸರಹಳ್ಳಿ ಮಂಡಲ ಅಧ್ಯಕ್ಷ ಲೋಕೇಶ್, ಮುಖಂಡರಾದ ಭರತ್ ಸೌಂದರ್ಯ, ಪ್ರಕಾಶ್,ಗಂಗಾಧರ್ ಸಂಕಲ್ಪಯಾತ್ರೆಯ ಮುಂಚೂಣಿಯಲ್ಲಿದ್ದರು.