ರಾಜ್ಯದಲ್ಲಿ ಪ್ರಜಾಪ್ರಭುತ್ವ ಹಬ್ಬ

ಬೆಂಗಳೂರು,ಏ,೩೦:ಮತದಾರರಿಗೆ ಮತದಾನದ ಮಹತ್ವ ಮತ್ತು ಮತಗಟ್ಟೆಯ ಕುರಿತು ಜಾಗೃತಿ ಮೂಡಿಸುವ ಅಂಗವಾಗಿ ರಾಜ್ಯ ಚುನಾವಣಾ ಆಯೋಗ ಇಂದು ರಾಜ್ಯಾದ್ಯಂತ ಪ್ರಜಾಪ್ರಭುತ್ವದ ಹಬ್ಬದ ಹೆಸರಿನಲ್ಲಿ ’ನಮ್ಮ ನಡೆ ಮತಗಟ್ಟೆ ಕಡೆ’ ಎಂಬ ವಿನೂತನ ಕಾರ್ಯಕ್ರಮವನ್ನು ನಡೆಸಿತು.
ಪ್ರಜಾಪ್ರಭುತ್ವದ ಹಬ್ಬ ಮೇ ೧೦ ಮತದಾನ ಎಂಬ ಘೋಷವಾಕ್ಯವನ್ನು ಒಳಗೊಂಡಿರುವ ಬಾವುಟದ ಧ್ವಜಾರೋಹಣವನ್ನು ಇಂದು ರಾಜ್ಯದ ಪ್ರತಿ ಮತಗಟ್ಟೆಯಲ್ಲೂ ನಡೆಸಲಾಯಿತು. ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮನೋಜ್‌ಕುಮಾರ್ ಮೀನಾ ಅವರು ತಮ್ಮ ನಿವಾಸದ ವ್ಯಾಪ್ತಿಯ ಜಕ್ಕೂರು ಮತಗಟ್ಟೆಯಲ್ಲಿ ನಡೆದ ನಮ್ಮ ನಡೆ ಮತಗಟ್ಟೆಯ ಕಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಧ್ವಜಾರೋಹಣ ನೆರವೇರಿಸಿದರು. ಹಾಗೆಯೇ ಮತದಾರರೊಂದಿಗೆ ಮತಗಟ್ಟೆಗೆ ಭೇಟಿ ನೀಡಿ ಜಾಥಾ ಕಾರ್ಯಕ್ರಮದಲ್ಲೂ ಭಾಗಿಯಾದರು.
ಈ ಕಾರ್ಯಕ್ರಮದಲ್ಲಿ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್, ಮತಗಟ್ಟೆ ಅಧಿಕಾರಿಗಳು ಭಾಗಿಯಾಗಿ ಮುಖ್ಯ ಚುನಾವಣಾಧಿಕಾರಿಗಳಿಗೆ ಸಾಥ್ ನೀಡಿದರು.
ಮತದಾರರನ್ನು ಮತಗಟ್ಟೆಯತ್ತ ಸೆಳೆಯುವ ನಮ್ಮ ನಡೆ ಮತಗಟ್ಟೆ ಕಡೆ ಈ ಪ್ರಜಾಪ್ರಭುತ್ವ ಹಬ್ಬವನ್ನು ರಾಜ್ಯದ ೫೮
ಸಾವಿರಕ್ಕೂ ಹೆಚ್ಚಿನ ಮತಗಟ್ಟೆಗಳಲ್ಲಿ ಏಕಕಾಲದಲ್ಲಿ ರಾಷ್ಟ್ರೀಯ ಹಬ್ಬದ ಮಾದರಿಯಲ್ಲಿ ಈ ಕಾರ್ಯಕ್ರಮವನ್ನು ನಡೆಸಲಾಯಿತು.
ನಮ್ಮ ನಡೆ ಮತಗಟ್ಟೆ ಕಡೆ ಕಾರ್ಯಕ್ರಮದಲ್ಲಿ ಬೀದಿ ನಾಟಕ, ಮತದಾನದ ಮಹತ್ವದ ಕುರಿತ ಹಾಡುಗಳ ಪ್ರಸ್ತುತಿ, ಕರಪತ್ರಗಳ ವಿತರಣೆ, ಎಲ್‌ಇಡಿ ವಾಹನಗಳ ಮೂಲಕ ಜನರಿಗೆ ಮತದಾನದ ಮಹತ್ವವನ್ನು ಪ್ರಚುರಪಡಿಸಲಾಯಿತು.
ರಾಜ್ಯದ ಪ್ರತಿ ಮತಗಟ್ಟಯಲ್ಲೂ ಮತಗಟ್ಟೆ ಅಧಿಕಾರಿಗಳು ಸ್ಥಳೀಯ ಮತದಾರರನ್ನು ಒಟ್ಟುಗೂಡಿಸಿ ದ್ವಜಾರೋಹಣ ನೆರವೇರಿಸಿ ಮತದಾನದ ಮಹತ್ವದ ಬಗ್ಗೆ ಜನರಿಗೆ ಧ್ವನಿವರ್ಧಕದ ಮೂಲಕ ಕೆಲ ಜಾಗೃತಿ ಮಾತುಗಳನ್ನು ಹೇಳಿದರು.
ಮತದಾರರನ್ನು ಸೆಳೆಯಲು ಪ್ರತಿ ಮತಗಟ್ಟೆ ವ್ಯಾಪ್ತಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಕಾಲ್ನಡಿಗೆಯ ಜಾಥಾ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮವನ್ನು ನಡೆಸಲಾಯಿತು.
ಪ್ರಾಥಮಿಕ ಮತಗಟ್ಟೆ ಹಂತದಲ್ಲಿ, ಪ್ರತಿ ಮತಗಟ್ಟೆ ಅಧಿಕಾರಿಗಳ ನೇತೃತ್ವದಲ್ಲಿ ಗ್ರಾಮ ಪಂಚಾಯ್ತಿ ಮಟ್ಟಿದಲ್ಲಿ, ಪಿಡಿಓ ನೇತೃತ್ವದಲ್ಲಿ, ತಾಲ್ಲೂಕು ಮಟ್ಟದಲ್ಲಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳ ನೇತೃತ್ವದಲ್ಲಿ ಹಾಗೂ ಅದೇ ರೀತಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಚುನಾವಣಾ ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆದವು.
ಜವಾಬ್ದಾರಿ-ಹೊಣೆಗಾರಿಕೆ
ಮತದಾನದಲ್ಲಿ ಭಾಗವಹಿಸುವುದು ಎಲ್ಲ ಮತದಾರರ ಸಾಮಾಜಿಕ ಹೊಣೆಗಾರಿಕೆ ಪ್ರತಿ ಮತದಾರನೂ ತನ್ನ ಮತದ ಮೌಲ್ಯವನ್ನರಿತು ಪ್ರಜಾಪ್ರಭುತ್ವದ ಈ ಪವಿತ್ರ ಹಬ್ಬದಲ್ಲಿ ಪಾಲ್ಗೊಳ್ಳುವ ಮೂಲಕ ಸದೃಢ ಹಾಗೂ ಬಲಿಷ್ಠ ದೇಶ ಕಟ್ಟುವಂತಾಗಲಿ ಎಂಬ ಸದಾಆಶಯದೊಂದಿಗೆ ಚುನಾವಣಾ ಆಯೋಗ ಈ ಕಾರ್ಯಕ್ರಮ ನಡೆಸಿದೆ ಎಂದು ಮುಖ್ಯಚುನಾವಣಾಧಿಕಾರಿ ಮನೋಜ್‌ಕುಮಾರ್ ಮೀನಾ ಹೇಳಿದರು.
ಸಾರ್ವಜನಿಕರನ್ನು ಮತದಾನಕ್ಕೆ ಪ್ರೇರೇಪಿಸಲು ಹತ್ತು ಹಲವು ಜಾಗೃತಿ ಕಾರ್ಯಕ್ರಮಗಳನ್ನು ಚುನಾವಣಾ ಆಯೋಗ ಹಮ್ಮಿಕೊಂಡು ಬಂದಿದೆ. ಇದೇ ಹಾದಿಯಲ್ಲಿ ಮತ್ತೊಂದು ಪ್ರಯತ್ನ ನಮ್ಮ ನಡೆ ಮತಗಟ್ಟೆ ಕಡೆ ಕಾರ್ಯಕ್ರಮ ಎಂದು ಅವರು ಹೇಳಿದರು.
ಚುನಾವಣಾ ಆಯೋಗ ಮತದಾರರಿಗಾಗಿ ಹೊರ ತಂದಿರುವ ಕೆವೈಸಿ ಚುನಾವಣೆ, ಸಕ್ಷಮ್ ಆಪ್, ಸಹಾಯವಾಣಿ, ೧೯೫೦ ಬಗ್ಗೆಯೂ ಜನರಿಗೆ ಈ ಕಾರ್ಯಕ್ರಮದ ಮೂಲಕ ಮಾಹಿತಿ ನೀಡಲಾಯಿತು ಎಂದು ಅವರು ಹೇಳಿದರು.