ರಾಜ್ಯದಲ್ಲಿ ಪುನ: ಬಿಜೆಪಿ ಅಧಿಕಾರಕ್ಕೆ ಬರುವುದು ಶತಸಿದ್ಧ: ಗುತ್ತೇದಾರ್

ಅಫಜಲಪುರ:ಜ.3: 2023ರ ಚುನಾವಣೆಯಲ್ಲಿ ಪುನ: ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುವುದು ಶತಸಿದ್ಧ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚು ಸ್ಥಾನಗಳನ್ನು ಬಿಜೆಪಿ ಪಕ್ಷದ ಅಭ್ಯರ್ಥಿಗಳು ಜಯ ಗಳಿಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ಅವರು ವಿಶ್ವಾಸ ವ್ಯಕ್ತಪಡಿಸಿದರು.
ತಾಲ್ಲೂಕಿನ ಗೊಬ್ಬೂರ್(ಬಿ) ಗ್ರಾಮದಲ್ಲಿ ಮಹಾಶಕ್ತಿ ಕೇಂದ್ರದ ಬೂತ್ ನಂಬರ್ 101ರಲ್ಲಿ ಬೂತ್ ವಿಜಯ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಭಾರತ್ ಜೋಡೋ ಪಾದಯಾತ್ರೆ ಮಾಡುವುದು ಅರ್ಥವಿಲ್ಲ. ರಾಹುಲ್‍ಗಾಂಧಿ ಅವರು ಮೊದಲು ಪಕ್ಷದಲ್ಲಿರುವ ನಾಯಕರ ಮನಸ್ಸುಗಳನ್ನು ಜೋಡೋ ಮಾಡಲಿ. ನಂತರ ಭಾರತ್ ಜೋಡೋಗೆ ಪ್ರಯತ್ನ ಮಾಡಲಿ ಎಂದು ಟೀಕಿಸಿದರು.
ಬಿಜೆಪಿ ಸಂಘಟನೆಯ ವ್ಯವಸ್ಥೆಯನ್ನು ಕಟ್ಟಕಡೆಯ ಮತಗಟ್ಟೆಯಲ್ಲಿಯೂ ಸಶಕ್ತಗೊಳಿಸಲು ಬೂತ್ ವಿಜಯ ಅಭಿಯಾನವನ್ನು ಪ್ರತಿ ಮತಗಟ್ಟೆಯಲ್ಲಿ ಅಭಿಯಾನವನ್ನು ಭಾನುವಾರದಿಂದ ಹಮ್ಮಿಕೊಳ್ಳಲಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾರ್ಯಕರ್ತರ ಮನೆಯ ಮೇಲೆ ಬಿಜೆಪಿ ಧ್ವಜ ಹಾರಿಸುವುದರೊಂದಿಗೆ ಮುಂಬರುವ ಚುನಾವಣೆಯ ವಿಜಯದ ಕಡೆಗೆ ಸದೃಢ ಹೆಜ್ಜೆಗಳನ್ನು ಇಡೋಣ. ಹೀಗಾಗಿ ಪ್ರಾರಂಭಗೊoಡ ಬೂತ್ ವಿಜಯ ಅಭಿಯಾನದಲ್ಲಿ ನಾವೆಲ್ಲರೂ ಪಾಲ್ಗೊಂಡು ಮುಂಬರುವ ಚುನಾವಣೆಯಲ್ಲಿ ಪ್ರಚಂಡ ಬಹುಮತ ಪಡೆಯಲು ನಮ್ಮ ಮನೆಯ ಮೇಲೆ ಬಿಜೆಪಿ ವಿಜಯ ಧ್ವಜ ಹಾರಿಸೋಣ ಎಂದು ಅವರು ಹೇಳಿದರು.
ಅಭಿಯಾನದಲ್ಲಿ ರಾಜ್ಯದ ಎಲ್ಲ ಕಾರ್ಯಕರ್ತರು ಪಾಲ್ಗೊಳ್ಳುವರು. ಜನವರಿ 1ರಂದು ರಾಷ್ಟ್ರೀಯ ಯುವ ದಿವಸ್ ಅಂಗವಾಗಿ ಜರುಗುವ ರಾಷ್ಟ್ರ
ಮಟ್ಟದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಳ್ಳುವರು. ಬೂತ್ ಸಮಿತಯ ರಚನೆ, ಪೇಜ್ ಪ್ರಮುಖರ ನಿಯುಕ್ತಿ, ವಾಟ್ಸಪ್ ಗ್ರೂಪ್‍ಗಳ ರಚನೆ ಹಾಗೂ ಮಂಡಲ, ಜಿಲ್ಲಾ ರಾಜ್ಯದೊಡನೆ ಜೋಡಣೆ, ಎಲ್ಲ ಮತಗಟ್ಟೆಗಳಲ್ಲಿ ಪ್ರಮುಖ ಕಾರ್ಯಕರ್ತರ ಉಪಸ್ಥಿತಿಯ ಜೊತೆಗೆ ಬೂತ್ ವಿಜಯ ಅಭಿಯಾನ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.
ಪಕ್ಷದ ವತಿಯಿಂದ ಜನವರಿ 2 ರಿಂದ 12 ರವರೆಗೆ ಬೂತ್ ವಿಜಯ ಅಭಿಯಾನ ನಡೆಸಲಿದ್ದು, ಇದು ಪಕ್ಷದ ಗೆಲುವಿಗೆ ಪೂರಕವಾಗಲಿದೆ. ರಾಜ್ಯಾದ್ಯಂತ ಒಟ್ಟು 50 ಲಕ್ಷ ಮನೆಗಳಲ್ಲಿ ಬಿಜೆಪಿ ಧ್ವಜ ಹಾರಿಸುವ ಅಭಿಯಾನ ಇದಾಗಿದೆ. ಬೂತ್‍ಗಳಲ್ಲಿ ಶೇಕಡಾ 100 ಮತದಾನ ಆಗುವ ರೀತಿಯಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸುವುದು, 20 ಲಕ್ಷ ಕಾರ್ಯಕರ್ತರನ್ನು ಅಭಿಯಾನದಲ್ಲಿ ಜೋಡಿಸಲಾಗುವುದು ಎಂದು ಅವರು ಹೇಳಿದರು.
ಕಲಬುರ್ಗ ಸಂಸದ ಡಾ. ಉಮೇಶ್ ಜಾಧವ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರಾಜು ಪಡಶೆಟ್ಟಿ, ಕಾರ್ಯದರ್ಶಿಗಳು, ಪ್ರಮುಖರು, ಪಕ್ಷದ ಹಿರಿಯ ಮುಖಂಡರು ಉಪಸ್ಥಿತರಿದ್ದರು.
ಲಕ್ಷ್ಮೀಪುರ ಮಂಡಲದ ಕೋಳಿ ಸಮಾಜ ಮತ್ತು ಪೂಜಾರಿ ಬಡಾವಣೆಯ ಬೂತ್ ನಂಬರ್ 168ಮತ್ತು 169ರಲ್ಲಿ ಬಿಜೆಪಿ ಬೂತ್ ವಿಜಯ ಅಭಿಯಾನ 25 ಮನೆಗಳ ಮೇಲೆ ಬಿಜೆಪಿ ಧ್ವಜ ಹಾರಿಸುವ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಅವ್ವಣ್ಣ ಮ್ಯಾಕೇರಿ, ಅಧ್ಯಕ್ಷ ಶೈಲೇಶ್ ಗುಣಾರಿ, ಶಂಕು ಮ್ಯಾಕೇರಿ, ರಾಚಯ್ಯಸ್ವಾಮಿ, ತುಕ್ಕಪ್ಪ ಭಂಗಿ, ಸೈದಪ್ಪ ಪೂಜಾರಿ, ಅಶೋಕ್ ದುದ್ದಗಿ
ಮುಂತಾದವರು ಉಪಸ್ಥಿತರಿದ್ದರು.