
ಬೆಂಗಳೂರು/ಚಿತ್ರದುರ್ಗ.ಮಾ.4- ರಾಜ್ಯದಲ್ಲಿ ಪಿಯುಸಿ ಯಿಂದ ಪದವಿ ವರೆಗೆ ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನೀಡುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದಿಲ್ಲಿ ಹೇಳಿದ್ಧಾರೆ.ಯುವಕರಿಗಾಗಿ ಐಟಿಐ ತರಬೇತಿ ನೀಡಿ 1,500 ರೂ. ಭತ್ಯೆ ನೀಡುವ ಯೋಜನೆ ರೂಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.ಚಿತ್ರದುರ್ಗದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಫಲಾನುಭವಿಗಳ ಸಮ್ಮೇಳನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಭೂಸಿರಿ ಯೋಜನೆಯಡಿ ರೈತರಿಗೆ ಬೀಜಗೊಬ್ಬರ ಖರೀದಿಗಾಗಿ 10 ಸಾವಿರ ರೂ. ನೀಡುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.ರೈತರ ಸಾಲದ ಮಿತಿಯನ್ನು 5 ಲಕ್ಷಕ್ಕೆ ಏರಿಸಲಾಗಿದೆ. ಗೊಲ್ಲರಹಟ್ಟಿ ,ಕುರುಬರಹಟ್ಟಿ, ಬಂಜಾರ ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಿ ಮನೆಗಳಿಗೆ ಹಕ್ಕುಪತ್ರ ನೀಡಲಾಗುತ್ತಿದೆ ಎಂದರು.ಇದೇ ತಿಂಗಳಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಗೊಲ್ಲರಹಟ್ಟಿ ,ಕುರುಬರಹಟ್ಟಿ, ಬಂಜಾರ ತಾಂಡಾಗಳ 1 ಲಕ್ಷ ಜನರ ಮನೆಗಳಿಗೆ ಹಕ್ಕುಪತ್ರ ವಿತರಿಸುವ ಯೋಜನೆ ರೂಪಿಸಲಾಗಿದ್ದು. ಇದು ಕ್ರಾಂತಿಕಾರಿ ಕಾರ್ಯಕ್ರಮವಾಗಿದೆ ಎಂದರು.ರಾಜ್ಯದ ಜನ ಶ್ರೀಮಂತರಾದರೆ, ರಾಜ್ಯವೂ ಶ್ರೀಮಂತವಾಗುತ್ತದೆ. ಆದ್ದರಿಂದ ಎಲ್ಲ ಜನಪರ, ಜನಕಲ್ಯಾಣದ ಯೋಜನೆಗಳನ್ನು ಹಮ್ಮಿಕೊಂಡು ಸಮಾಜದ ಕಟ್ಟಕಡೆಯ ವ್ಯಕ್ತಿಯ ಅಭಿವೃದ್ದಿ ಸಾಧ್ಯ. ಸರ್ಕಾರದ ಕಾರ್ಯಕ್ರಮಗಳ ಲಾಭ ಪಡೆದು ಜನರ ಜೀವನಮಟ್ಟ ಸುಧಾರಿಸುವುದೇ ಸರ್ಕಾರದ ಗುರಿಯಾಗಿದೆ ಎಂದು ತಿಳಿಸಿದ್ಧಾರೆ.ರಾಜ್ಯದ ಯೋಜನೆಗಳ ಫಲಾನುಭವಿಗಳಿಗೆ ನೇರವಾಗಿ ಧನಸಹಾಯ ತಲುಪಿಸಲು ಫಲಾನುಭವಿಗಳ ಸಮ್ಮೇಳನವನ್ನು ನಡೆಸಲಾಗಿದೆ. ಇಂತಹ ಸಮ್ಮೇಳನಗಳಿಂದ ಜನರ ಆತ್ಮವಿಶ್ವಾಸ ಹೆಚ್ಚುತ್ತದೆ ಎಂದರು.