ರಾಜ್ಯದಲ್ಲಿ ನೆಲಕಚ್ಚಿದ ಶಾಂತಿ ಸುವ್ಯವಸ್ಥೆ ಹೆಚ್‌ಡಿಕೆ ಟೀಕೆ


ಬೆಂಗಳೂರು,ಜು.೨೯- ಕರಾವಳಿಯಲ್ಲಿ ೧೦ ದಿವಸದಲ್ಲಿ ಮೂರು ಕೊಲೆಯಾಗಿರುವುದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ, ಆಂತರಿಕ ಭದ್ರತೆ ಸಂಪೂರ್ಣವಾಗಿ ಕುಸಿದಿರುವುದಕ್ಕೆ ಸಾಕ್ಷಿ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಟೀಕಿಸಿದ್ದಾರೆ.
ಕರಾವಳಿಯಲ್ಲಿ ನಡೆದಿರುವ ಕೊಲೆಗಳ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ನಿನ್ನೆ ರಾತ್ರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳೂರಿನಲ್ಲಿ ಇದ್ದಾಗಲೇ ೩ನೇ ಕೊಲೆಯಾಗಿದೆ. ಅಷ್ಟರಲ್ಲಿ ಸಿಎಂ ಸಾಹೇಬರು ಜಿಲ್ಲೆಯಿಂದ ಕಾಲ್ಕಿತ್ತಿದ್ದಾರೆ. ಅಲ್ಲೇ ಉಳಿದು ಪರಿಸ್ಥಿತಿಯನ್ನು ಅವಲೋಕಿಸಿ ಕೊಲೆಗಡುಕರನ್ನು ಎಡೆಮುರಿಕಟ್ಟುವಂತೆ ಕಟ್ಟಾಜ್ಞೆ ಮಾಡುವ ಧೈರ್ಯವನ್ನೂ ತೋರಿಲ್ಲ.ಅವರ ಅಧೈರ್ಯಕ್ಕೆ ಕಾರಣವೇನು, ಕಾಣದ ಕೈಗಳ ಒತ್ತಡ ಏನಾದರು ಇದೆಯೇ ಎಂದು ಪ್ರಶ್ನಿಸಿದ್ದಾರೆ.
ಮುಖ್ಯಮಂತ್ರಿಗಳು ಇದ್ದಾಗಲೇ ಮಂಗಳೂರಿನಲ್ಲಿ ೩ನೇ ಕೊಲೆಯಾಗಿದೆ ಎಂದರೆ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ನೆಲ ಕಚ್ಚಿದೆ ಎನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೇ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಖಾರವಾಗಿ ಪ್ರಶ್ನಿಸಿದ್ದಾರೆ.
ಶಿಕ್ಷಣ, ಬ್ಯಾಂಕಿಂಗ್, ಕೈಗಾರಿಕೆ, ಸೃಜನಶೀಲನೆ, ಉದ್ಯಮಶೀಲತೆ ತವರು ಜಿಲ್ಲೆಯಾದ ಕರಾವಳಿ ಈಗ ಕೊಲೆಗಳ ಆಡೋಂಬಲವಾಗಿದೆ. ಇನ್ನಾದರೂ ಕರಾವಳಿಯಲ್ಲಿ ಶಾಂತಿ ನೆಲಸಲಿ ಎಂದು ಅವರು ಟ್ವಿಟರ್‌ನಲ್ಲಿ ಆಶಿಸಿದ್ದಾರೆ.
ಕೊಲೆಗಳ ಹಿಂದಿನ ಕಾರಣ ಭೇದಿಸಿ ಕೊಲೆಗಡುಕರನ್ನು ಹತ್ತಿಕ್ಕುವ ಕೆಲಸ ಮಾಡಬೇಕಿದ್ದ ರಾಜ್ಯ ಬಿಜೆಪಿ ಸರ್ಕಾರ, ಪ್ರತಿ ಕೊಲೆಗೂ ತಾನೇ ಮುಂದೆ ನಿಂತು ಹೊಸ ತಿರುವು ನೀಡುತ್ತಿದೆ. ಸರ್ಕಾರದ ಕೆಲಸ ಬಿಗಿ ಆಡಳಿತ ನಡೆಸುವುದೇ ಹೊರತು ಬೀದಿಯಲ್ಲಿ ನಿಂತು ಗಂಟಲು ಹರಿದುಕೊಳ್ಳುವುದಲ್ಲ. ಕರಾವಳಿಯಲ್ಲಿ ನೆಮ್ಮದಿ ನೆಲಸಬೇಕಾದರೆ ಪೊಲೀಸ್ ವ್ಯವಸ್ಥೆಗೆ ಶಕ್ತಿ ತುಂಬಬೇಕು. ಕಾಣದ ಕೈಗಳ ಸಂಕೋಲೆಯಿಂದ ಇಲಾಖೆಯನ್ನು ಮುಕ್ತಗೊಳಿಸಿ ಅಧಿಕಾರಿಗಳು ಸ್ವತಂತ್ರವಾಗಿ ಕರ್ತವ್ಯ ನಿರ್ವಹಿಸುವ ವಾತಾವರಣ ನಿರ್ಮಿಸಬೇಕು. ಇಲ್ಲವಾದರೆ ಡಬಲ್ ಇಂಜಿನ್ ಸರ್ಕಾರಕ್ಕೆ ಜನರೇ ಬೆಂಕಿ ಹಾಕುತ್ತಾರೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರಾವಳಿಯಲ್ಲಿ ನಡೆಯುತ್ತಿರುವ ಕೊಲೆಗಳನ್ನು ಹತ್ತಿಕ್ಕುವ ಬದಲು ಯುಪಿಯ ಬುಲ್ಡೋಜರ್ ಮಾದರಿಯ ಬಗ್ಗೆ ಮಾತನಾಡುತ್ತಿದ್ದಾರೆ. ಕರಾವಳಿ ಮತ್ತು ಕರ್ನಾಟಕವನ್ನು ಜಂಗಲ್ ರಾಜ್ ಮಾಡುವ ಹುನ್ನಾರವಿದು ಎಂದು ಅವರು ಟ್ವಿಟರ್‌ನಲ್ಲಿ ಕಿಡಿಕಾರಿದ್ದಾರೆ.