ರಾಜ್ಯದಲ್ಲಿ ನಿಲ್ಲದ ಮಳೆ ರಗಳೆ

(ಮುಕುಂದ ಬೆಳಗಲಿ)
ಬೆಂಗಳೂರು ನ. ೨೨: ನಿರಂತರವಾಗಿ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದಾಗಿ ಬೆಂಗಳೂರು ಸೇರಿದಂತೆ, ರಾಜ್ಯದಲ್ಲಿ ಒಂದೆಡೆ ಕೆರೆ-ಕಟ್ಟೆಗಳು ಒಡೆಯುತ್ತಿದ್ದಾರೆ, ಇದರಿಂದ ಸೃಷ್ಟಿಯಾದ ಅವಾಂತರಗಳಿಂದ ಜನಸಾಮಾನ್ಯರ ಸಹನೆ ಕಟ್ಟೆ ಒಡೆದಿದೆ.
ಬೆಂಗಳೂರಿನಲ್ಲಿ ರಸ್ತೆ ಉದ್ದಕ್ಕೂ ನೀರು ಮನೆಯಲ್ಲಿ ನೀರು ಅಂಗಡಿ ಮುಂಗಟ್ಟುಗಳಲ್ಲಿ ನೀರು ಅಪಾರ್ಟ್ಮೆಂಟ್ ಗಳಲ್ಲಿ ನೀರು ಹೀಗೆ ಹಗಲಿರುಳು ನೀರಿನಲ್ಲೇ ಕಾಲ ಕಳೆಯುವ ಅನಿವಾರ್ಯತೆ ಸೃಷ್ಟಿಯಾಗಿದ್ದು ನಿನ್ನೆ ಸಂಜೆಯಿಂದ ಸುರಿದ ಮಳೆಯಂತೂ ನಗರದ ಜನರ ಬದುಕನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ.

ರಾಜ್ಯದಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆ ತಕ್ಷಣಕ್ಕೆ ನಿಲ್ಲುವ ಸಾಧ್ಯತೆಗಳು ಗೋಚರಿಸುತ್ತಿಲ್ಲ. ಈಗಾಗಲೇ ಮಳೆ ಹಾಗೂ ನೆರೆಹಾವಳಿಯಿಂದ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದು ನಿಂತ ಬೆಳೆ ಸಂಪೂರ್ಣ ನಾಶವಾಗಿದೆ. ಹೀಗಾಗಿ ತರಕಾರಿ ಬೆಲೆಗಳು ಗಗನಕ್ಕೇರಿವೆ. ಈ ತಿಂಗಳ ೨೯ರವರೆಗೂ ಮಳೆ ಮುಂದುವರಿಯಲಿದೆ.
ನ. ೨೯ ರಾಜ್ಯಕ್ಕೆ ಮತ್ತೊಂದು ಚಂಡಮಾರುತದ ಭೀತಿ ಎದುರಾಗಿರುವ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಚಂಡಮಾರುತವಾಗಿ ರೂಪಾಂತರಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಒಳನಾಡಿನ ಬಹುತೇಕ ಕಡೆ ಇನ್ನೂ ಮೂರ್ನಾಲ್ಕು ದಿನಗಳ ಕಾಲ ಮಳೆ ಬೀಳುವ ಸಾಧ್ಯತೆಯಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರು, ಮೈಸೂರು, ಚಾಮರಾಜನಗರ, ತುಮಕೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಪ್ರಸ್ತುತ ಸುರಿಯುತ್ತಿರುವ ಮಳೆ ನ. ೨೫ರವರೆಗೆ ಕ್ಷೀಣಿಸಲಿದ್ದು, ರಾಜ್ಯಕ್ಕೆ ಮತ್ತೊಂದು ಚಂಡಮಾರುತ ಅಪ್ಪಳಿಸುವ ಸಾಧ್ಯತೆಯಿದೆ.
ರಾಜ್ಯದ ಹಲವೆಡೆ ಸುರಿದ ಮಳೆಯಿಂದಾಗಿ ಇದುವರೆಗೆ ೨೪ ಮಂದಿ ಸಾವನ್ನಪ್ಪಿದ್ದಾರೆ. ೧೬೦೦ಕ್ಕೂ ಹೆಚ್ಚು ಮನೆಗಳು ಹಾನಿಗೀಡಾಗಿವೆ. ಚಿಕ್ಕಬಳ್ಳಾಪುರ, ಕೋಲಾರ, ಮೈಸೂರು, ರಾಮನಗರ, ಮತ್ತಿತರರ ಜಿಲ್ಲೆಗಳಲ್ಲಿ ಲಕ್ಷಾಂತರ ಪ್ರದೇಶದಲ್ಲಿ ಬೆಳೆಯಲಾದ ಬೆಳೆಗಳು ನೀರು ಪಾಲಾಗಿವೆ. ಇದರಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
೨೨೦೦ ಕಿಮೀ ರಸ್ತೆಗಳು ಹಾನಿಗೀಡಾಗಿವೆ. ೧೨೫ ಶಾಲಾ ಕಟ್ಟಡಗಳು, ೩೯ ಸಾರ್ವಜನಿಕ ಕೇಂದ್ರಗಳು ಹಾನಿಗೀಡಾಗಿವೆ. ೬೫೮ ಮನೆಗಳು ಸಂಪೂರ್ಣವಾಗಿ ಕುಸಿದು ಬಿದ್ದಿವೆ. ೮೪೯೫ ಮನೆಗಳಿಗೆ ಭಾಗಶಃ ಹಾನಿಯಾಗಿದೆ.
ವಾಯುಭಾರ ಕುಸಿತದ ಪರಿಣಾಮ ಹುಬ್ಬಳ್ಳಿ, ಗದಗ, ಧಾರವಾಡ, ಕೊಪ್ಪಳ, ಬಾಗಲಕೋಟೆ, ವಿಜಯಪುರ, ರಾಯಚೂರು, ಬೀದರ್, ಬಳ್ಳಾರಿ ಜಿಲ್ಲೆಗಳಲ್ಲೂ ಇಂದು ಕೂಡ ಮೋಡ ಕವಿದ ವಾತಾವರಣವಿದ್ದು, ಕೆಲವು ಭಾಗಗಳಲ್ಲಿ ಮಳೆಯಾಗಿದೆ. ಕರಾವಳಿ ಮತ್ತು ಒಳನಾಡಿನಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಶಿವಮೊಗ್ಗ, ಉಡುಪಿ ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ರಾಮನಗರ, ಕೊಡಗು, ಮಂಡ್ಯದಲ್ಲೂ ಮಳೆ ಮುಂದುವರಿಯಲಿದೆ.
ಕಳೆದ ೧೦ ದಿನಗಳಿಂದ ರಾಜ್ಯದಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ೨ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ಅಂದಾಜು ಮಾಡಲಾಗಿದೆ.
ಕೋಲಾರಕ್ಕೆ ಸಿಎಂ ಭೇಟಿ
ಈ ಮಧ್ಯೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಳೆಯಿಂದಾಗಿ ಹಾನಿಗೀಡಾದ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಂದು ಹೊಸಕೋಟೆ, ಕೋಲಾರ ಜಿಲ್ಲೆಗೆ ಭೇಟಿ ನೀಡಿ ಮಳೆ ಅನಾಹುತವನ್ನು ಪರಿಶೀಲಿಸಲಿದ್ದಾರೆ.
ಜಿಲ್ಲೆಯಲ್ಲಿ ಅಕಾಲಿಕ ಮಳೆಯಿಂದಾಗಿ ಬೆಳೆಗಳು ನಾಶವಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಂದರ್ಭದಲ್ಲಿ ಸರ್ಕಾರ ನೆರವು ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ.

ಪ್ರಮುಖವಾಗಿ ಯಲಹಂಕ ವ್ಯಾಪ್ತಿಯಲ್ಲಿ ನಿನ್ನೆ ಸಂಜೆ ಸುರಿದ ಭಾರಿ ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಜನರು ಪರದಾಡುವಂತಾಗಿದೆ. ಭಾರಿ ಮಳೆಯಿಂದಾಗಿ ಅಲ್ಲಾಳಸಂದ್ರ ಕೆರೆ ಕೋಡಿ ಒಡೆದ ಪರಿಣಾಮ ಪಕ್ಕದ ಕೇಂದ್ರೀಯ ವಿಹಾರ ಅಪಾರ್ಟ್?ಮೆಂಟ್? ಸಂಪೂರ್ಣ ಜಲಾವೃತವಾಗಿದೆ.

ಸುಮಾರು ೩ ಸಾವಿರಕ್ಕೂ ಅಧಿಕ ಮಂದಿ ವಾಸವಿರುವ ಕೇಂದ್ರೀಯ ವಿಹಾರದಲ್ಲಿ ೪ ರಿಂದ ೫ ಅಡಿ ನೀರು ನಿಂತಿದ್ದು, ವಿದ್ಯುತ್ ಕಡಿತಗೊಳಿಸಿ ಬೋಟ್ ಮೂಲಕ ಜನರನ್ನು ರಕ್ಷಣೆ ಮಾಡಲಾಗುತ್ತಿದೆ.

ಅಲ್ಲದೆ, ನವೆಂಬರ್ ೧೮ರಂದು ಅಪಾರ್ಟ್?ಮೆಂಟ್?ಗೆ ನುಗ್ಗಿದ್ದ ನೀರನ್ನು ೨ ದಿನ ಹರಸಾಹಸಪಟ್ಟು ಹೊರಗೆ ಹಾಕಲಾಗಿತ್ತು. ಇದೀಗ ರಾತ್ರಿ ಸುರಿದ ಮಳೆಗೆ ಮತ್ತೆ ನೀರು ನುಗ್ಗಿದೆ.

ಇನ್ನು, ಯಲಹಂಕ ಕೆರೆಕೋಡಿ ಒಡೆದಿದ್ದರಿಂದ ಕೋಗಿಲು ಸರ್ಕಲ್?ನಲ್ಲಿ ಮೂರು ಅಡಿ ನೀರು ನಿಂತಿದೆ. ಹೀಗಾಗಿ ಕೋಗಿಲು ಸರ್ಕಲ್?ನ ಚೌಡೇಶ್ವರಿ ದೇವಸ್ಥಾನ ರಸ್ತೆಯನ್ನು ಬಂದ್ ಮಾಡಲಾಗಿದೆ. ಇದು ದೇವನಹಳ್ಳಿ , ಏರ್?ಪೋರ್ಟ್?, ಯಲಹಂಕ, ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ.

ಇಲ್ಲಿನ ಸಿಂಗಾಪುರ, ವಿದ್ಯಾರಣ್ಯಪುರದ ವಿಎಸ್ ಲೇಔಟ್?ನಲ್ಲಿ ಮನೆಗೆ ಮಳೆ ನೀರು ನುಗ್ಗಿ ವೃದ್ಧೆ ಪರದಾಡುತ್ತಿದ್ದಾರೆ. ಹಾಸಿಗೆ, ಬಟ್ಟೆ ಸೇರಿದಂತೆ ಎಲ್ಲಾ ವಸ್ತುಗಳು ನೀರುಪಾಲಾಗಿದ್ದು, ಮನೆಯಿಂದ ನೀರು ಹೊರಹಾಕಲು ವೃದ್ಧೆ ಪರದಾಡುತ್ತಿದ್ದ ದೃಶ್ಯ ಕಂಡಿತು.

ಹಾನಿ:ಮಳೆ ನೀರಿನಿಂದ ಮನೆಗಳಿಗೆ ನೀರು ನುಗ್ಗಿ ಪರಿಣಾಮ ಅಪಾರ ಪ್ರಮಾಣದ ವಸ್ತುಗಳು,ಅಕ್ಕಿ, ಬೇಳೆ, ಟಿವಿ, ಫ್ರಿಡ್ಜ್ ಸೇರಿ ಹಲವು ವಸ್ತುಗಳು ನೀರುಪಾಲಾಗಿವೆ. ಮಳೆಯಿಂದಾಗಿ ಸುಮಾರು ೨೫ಕ್ಕೂ ಹೆಚ್ಚು ವಾಹನಗಳಿಗೆ ಹಾನಿಯಾಗಿವೆ. ಇನ್ನೂ, ಪೆಟ್ರೋಲ್ ಬಂಕ್, ಅಂಗಡಿ, ಶೋ ರೂಮ್ ಜಲಾವೃತವಾಗಿವೆ. ಅದೇ ರೀತಿ, ಯಶವಂತಪುರದ ಮೋಹನ್‌ಕುಮಾರ್ ನಗರದಲ್ಲಿ ಕಾಂಪೌಂಡ್ ಗೋಡೆ ಕುಸಿದು ಎರಡು ಆಟೋ, ಬೈಕ್ ಜಖಂಗೊಂಡಿದೆ.

ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಶಾಸಕ ಎಸ್.ಆರ್.ವಿಶ್ವನಾಥ್, ಕಳೆದ ೩ ದಿನಗಳ ಹಿಂದೆ ಮಳೆಯಾಗಿತ್ತು. ಆಗ ತಾತ್ಕಾಲಿಕ ಕ್ರಮ ವಹಿಸಲಾಗಿತ್ತು. ಪರಿಣಾಮ ಒಂದು ದಿನದಲ್ಲೇ ನೀರು ಹರಿಯುವಂತೆ ಆಗಿತ್ತು. ನಿನ್ನೆ ರಾತ್ರಿ ೧೩೮ ಮಿಮಿ ಮಳೆಯಾಗಿದೆ. ಇಷ್ಟು ಮಳೆಯಾಗಲಿದೆ ಎಂದು ನಿರೀಕ್ಷೆ ಇರಲಿಲ್ಲ.

ರಾತ್ರಿ ೨ ಗಂಟೆಯವರೆಗೂ ಪರಿಶೀಲನೆ ನಡೆಸಿದ್ದೇವೆ. ೪೪ ಕಿಮೀ ಚದರ ವ್ಯಾಪ್ತಿ ಇರೋ ಯಲಹಂಕ ಕೆರೆ, ವೆಂಕಟಾಲದಿಂದ ಹರಿಯುತ್ತಿರುವ ನೀರು ಇಲ್ಲಿಗೆ ಬಂದಿದೆ. ಒಳಹರಿವು ಹೊರ ಹರಿವು ಅಜಗಜಾಂತರ ಆಗಿದೆ ಎಂದು ತಿಳಿಸಿದರು.

ಅಲ್ಲದೆ, ಸದ್ಯದ ಪರಿಸ್ಥಿತಿ ಕುರಿತು ಜಿಲ್ಲಾಧಿಕಾರಿ ಬಿಬಿಎಂಪಿ ಆಯುಕ್ತ ಮಾಹಿತಿ ನೀಡಿದ್ದೇವೆ. ಎನ್‌ಡಿಆರ್‌ಎಫ್ ಮೂಲಕ ಬೋಟ್ ತರೆಸಲಾಗುತ್ತಿದ್ದು, ನಿವಾಸಿಗಳಿಗೆ ಕುಡಿಯುವ ನೀರು, ಆಹಾರ ಸಾಮಾಗ್ರಿ ಕೊಡುತ್ತೇವೆ ಎಂದು ಹೇಳಿದರು.

ಎಲ್ಲೆಲ್ಲಿ ಎಷ್ಟು ಮಳೆ?:

ರಾಜರಾಜೇಶ್ವರಿನಗರ ೨೭ ಮಿ.ಮೀ, ಕೆಂಗೇರಿ ೩೦ ಮಿ.ಮೀ, ಹಂಪಿನಗರ ೨೯ ಮಿ.ಮೀ, ಜ್ಞಾನಭಾರತಿ ೨೧ ಮಿ.ಮೀ, ಬೆನ್ನಿಗಾನಹಳ್ಳಿ ೧೮ ಮಿ.ಮೀ, ನಾಗಧಿಪುರ ೨೧ ಮಿ.ಮೀ, ಹೆಗ್ಗನಹಳ್ಳಿ ೨೦ ಮಿ.ಮೀ, ಯಲಹಂಕ ೩೦ ಮಿ.ಮೀ, ಜಕ್ಕೂರು ೩೩ ಮಿ.ಮೀ, ಹೊರಮಾವು ೩೧ ಮಿ.ಮೀ, ಕೊಧಿಡಿಧಿಗೇಹಳ್ಳಿ ೩೨ ಮಿ.ಮೀ, ಬಾಗಲಕುಂಟೆ ೩೬ ಮಿ.ಮೀ, ದೊಡ್ಡಬೊಮ್ಮಸಂದ್ರ ೩೧ ಮಿ.ಮೀ, ಚೌಡೇಶ್ವರಿನಗರ ೩೨ ಮಿ.ಮೀ, ಯಲಹಂಕ ಕೆಎಸ್‌ಎನ್‌ಡಿಎಂಸಿ ೫೩ ಮಿ.ಮೀ ಮಳೆಯಾಗಿದೆ.

ಸಂಚಾರ ದಟ್ಟಣೆ..!

ಯಲಹಂಕ ಕೋಗಿಲು ಬಳಿ ಬೆಳಗ್ಗೆಯಾದರೂ ರಸ್ತೆಯ ಮೇಲೆ ನೀರು ನಿಂತಿತ್ತು. ಸುಮಾರು ನಾಲ್ಕು ಅಡಿಯಷ್ಟು ನೀರು ನಿಂತಿದ್ದರಿಂದ ರಸ್ತೆ ಮಧ್ಯೆ ಹೆಚ್ಚಿನ ವಾಹನಗಳು ಕಟ್ಟು ನಿಂತಿದ್ದವು.

ಸೋಮವಾರ ಹೆಚ್ಚಿನ ಜನದಟ್ಟಣೆ ಈ ರಸ್ತೆಯಲ್ಲಿ ಇದ್ದರಿಂದ ಸಹ ಟ್ರಾಪಿಕ್ ಜಾಮ್‌ಗೆ ಕಾರಣವಾಯಿತು. ಇನ್ನು ಯಲಹಂಕ ಫ್ಳೈ ಓವರ್ ಕೆಳಗೂ ಸಹ ವಾಹನಗಳು ಮುಳುಗುವಷ್ಟು ನೀರು ನಿಂತಿದ್ದ ಪರಿಣಾಮ ಕೆಲ ವಾಹನಗಳು ಸಾಲು ಸಾಲಾಗಿ ನಿಂತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಸ್ಥಳೀಯರ ಆಕ್ರೋಶ

ಪ್ರತಿ ಬಾರಿ ಮಳೆ ಬಂದಾಗಲೂ ಇದೇ ರೀತಿ ಸಮಸ್ಯೆಯಾಗುತ್ತದೆ. ಆದರೆ, ಬಿಬಿಎಂಪಿ ಅಧಿಕಾರಿಗಳು, ಶಾಸಕರು ಮಾತ್ರ ಇತ್ತ ಗಮನ ಹರಿಸುತ್ತಿಲ್ಲ, ನಮ್ಮ ಬೇಡಿಕೆಗಳಿಗೆ ಕ್ಯಾರೆ ಎನ್ನುತ್ತಿಲ್ಲ ಎಂದು ವೆಂಕಟಸ್ವಾಮಪ್ಪ ಹಾಗೂ ಬಸವ ಸಮಿತಿ ಲೇಔಟ್ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.

ಮಳೆ ಬಂದಾಗ ಮನೆಗೆ ನೀರು ನುಗ್ಗಿ ರಾತ್ರಿ ಇಡೀ ಜಾಗರಣೆ ಮಾಡುವುದು ಕಳೆದ ಮೂರು ವರ್ಷಗಳಿಂದ ನಡೆಯುತ್ತಿದೆ. ಜನಪ್ರತಿನಿಧಿಗಳು ಎನಿಸಿಕೊಂಡವರು ಕೇವಲ ಓಟು ಕೇಳುವುದಕ್ಕೆ ಮಾತ್ರ ನಮ್ಮ ಲೇಔಟ್‌ಗೆ ಬರುತ್ತಾರೆ. ಮಳೆಯಿಂದ ನಮಗೆ ಸಮಸ್ಯೆಯಾಗುತ್ತಿದೆ, ಶಾಶ್ವತ ಪರಿಹಾರ ರೂಪಿಸಿ ಎಂದು ಕೇಳಿದಾಗ ಯಾರೂ ಇತ್ತ ನೋಡುತ್ತಿಲ್ಲ ಎಂದು ದೂರಿದರು.

ಇಲ್ಲಿನ ದಾಸರಹಳ್ಳಿ ಕ್ಷೇತ್ರದಲ್ಲೂ ಮಳೆಯ ಅಬ್ಬರ ಹೆಚ್ಚಾಗಿತ್ತು. ಮಳೆ ನೀರಿನಿಂದ ನಾಗಸಂದ್ರ ಕಾಲೋನಿಯ ಮನೆಗಳಿಗೆ ನೀರು ನುಗ್ಗಿ, ಮನೆಯಲ್ಲಿದ್ದ ವಸ್ತುಗಳು ಸಂಪೂರ್ಣ ಜಲಾವೃತವಾಗಿದ್ದವು.

ರುಕ್ಮಿಣಿ ಬಡಾವಣೆ, ಗುಂಡಪ್ಪ ಬಡಾವಣೆ, ಬೆಲ್ಮರ್ ಬಡಾವಣೆ, ರಾಯಲ್ ಎನ್‌ಕ್ಲೇವ್, ಬಿಟಿಎಸ್ ಬಡಾವಣೆ ಸುತ್ತಮುತ್ತ ರಾಜಕಾಲುವೆ ಒತ್ತುವರಿ ಮಾಡಿದ್ದರಿಂದ ಮನೆಗಳಿಗೆ ನೀರು ನುಗ್ಗಿ ಉದ್ಯಾನ, ಮೈದಾನ, ಖಾಲಿ ಸೈಟ್?ಗಳಲ್ಲಿ ನೀರು ನಿಂತು ಕೆರೆಯಂತಾಗಿದ್ದವು.

ಆಯುಕ್ತರ ಭೇಟಿ

ಮಳೆಯಿಂದಾಗಿ ಹಾನಿಗೀಡಾದ ಬಡಾವಣೆಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತ್ವರಿತವಾಗಿ ನೀರು ಹರಿಯುವಂತೆ ಕ್ರಮ ಕೈಗೊಳ್ಳಬೇಕು.ಹಾನಿ ಆಗಿರುವ ಆಸ್ತಿಪಾಸ್ತಿಯ ಕುರಿತು ವರದಿ ಸಲ್ಲಿಸುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದರು.