ರಾಜ್ಯದಲ್ಲಿ ನಿಲ್ಲದ ಕೊರೊನಾ ಹಾವಳಿ: ಇಂದು 29,744 ಮಂದಿಗೆ ಸೋಂಕು, 201 ಜನರ ಸಾವು

ಬೆಂಗಳೂರು, ಏ 26-,ರಾಜ್ಯದಲ್ಲಿಂದು ಕೂಡ ಸೋಂಕಿನ ಅಬ್ಬರ ಮುಂದುವರೆದಿದೆ. ಒಟ್ಟು 29,744 ಮಂದಿಗೆ ಕೊರೊನಾ ಬಂದಿದ್ದು, ರಾಜ್ಯಾದ್ಯಂತ ಒಟ್ಟು 201 ಜನ ಕೊರೊನಾಗೆ ಬಲಿಯಾಗಿದ್ದಾರೆ. ‌ಜಿಲ್ಲೆ ಜಿಲ್ಲೆಗಳಲ್ಲೂ ಸೋಂಕಿನ ವೇಗ ತ್ವರಿತವಾಗಿ ಹೆಚ್ಚಳವಾಗುತ್ತಿರುವುದು ತೀವ್ರ ಆತಂಕ ಸೃಷ್ಟಿಸಿದೆ. ಆದರೆ ನಿನ್ನೆಗಿಂತ ಸೋಂಕು ತುಸು ಕಡಿಮೆಯಾಗಿದೆ.
ಬೆಂಗಳೂರಿನಲ್ಲಿ 16,545 ಮಂದಿಗೆ ಕೊರೊನಾ ದೃಢಪಟ್ಟಿದ್ದು, 105 ಮಂದಿ ಮೃತಪಟ್ಟಿದ್ದಾರೆ.
ಈ ಮೂಲಕ ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 2,81,042 ಕ್ಕೆ ಏರಿಕೆ ಕಂಡಿದೆ. ಇಂದು ರಾಜ್ಯದಲ್ಲಿ ಒಟ್ಟು 1,37,901 ಮಂದಿಗೆ ಲಸಿಕೆ ನೀಡಲಾಗಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 13,68,945 ಕ್ಕೆ ಏರಿಕೆ ಕಂಡಿದೆ. ಈ ಪೈಕಿ 10,73,257 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ತಿಳಿಸಿದೆ.
ಒಟ್ಟು ಇಲ್ಲಿಯವರೆಗೆ 14,627 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಸದ್ಯ 1815 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 10,792 ಆಂಟಿಜನ್ ಟೆಸ್ಟ್ 1,55,615 ಆರ್ ಟಿ ಪಿಸಿಆರ್ ಸೇರಿದಂತೆ ಒಟ್ಟು 1,66,407 ಕೊರೊನಾ ಪರೀಕ್ಷೆ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ಅಂಕಿ ಅಂಶ ನೀಡಿದೆ.
ಮೈಸೂರು 1563, ತುಮಕೂರು 1197, ಮಂಡ್ಯ 929, ಕಲಬುರಗಿ 872, ಹಾಸನ 747, ರಾಯಚೂರಿನ 609 ಮಂದಿಗೆ ಸೋಂಕು ಬಂದಿದೆ. ಒಟ್ಟು 1815 ಮಂದಿ ಐಸಿಯುನಲ್ಲಿದ್ದು, ಬೆಂಗಳೂರಿನಲ್ಲಿ 590, ಕಲಬುರಗಿ 265, ತುಮಕೂರು 149, ಧಾರವಾಡ 122 ಶಿವಮೊಗ್ಗ 87 ಮತ್ತು ದಾವಣಗೆರೆಯಲ್ಲಿ 86 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.