ಸೋಮವಾರ ಲಸಿಕೆ ವಿತರಣೆ

ಬೆಂಗಳೂರು,ಜ.೮- ಕೊರೊನಾ ಲಸಿಕೆಯ ಅಭಿಯಾನಕ್ಕೆ ರಾಜ್ಯಸರ್ಕಾರ ಸರ್ವಸಜ್ಜುಗೊಂಡಿದ್ದು, ನಾಳೆ ಇಲ್ಲವೆ ನಾಡಿದ್ದು ರಾಜ್ಯಕ್ಕೆ ೧೩ ಲಕ್ಷ ೯೦ ಸಾವಿರ ಕೊರೊನಾ ಲಸಿಕೆ ಬರಲಿದ್ದು ಸೋಮವಾರದಿಂದ ವಿತರಣೆಯಾಗಲಿದೆ ಎಂದು ಆರೋಗ್ಯ ಮತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಇಂದು ನಡೆದಿರುವ ೨ನೇ ಹಂತದ ಕೊರೊನಾ ಲಸಿಕೆಯ ತಾಲೀಮನ್ನು ವೀಕ್ಷಿಸಲು ಹೆಬ್ಬಾಳದಲ್ಲಿರುವ ಆಸ್ಟರ್ ಆಸ್ಪತ್ರೆಗೆ ಭೇಟಿ ನೀಡಿ ತಾಲೀಮಿನ ಪ್ರಕ್ರಿಯೆಯನ್ನು ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದ ಆರೋಗ್ಯ ಸಚಿವಾಲಯದಿಂದ ಬಂದಿರುವ ಮಾಹಿತಿ ಪ್ರಕಾರ ಇಂದು ಇಲ್ಲವೆ ನಾಳೆ ರಾಜ್ಯಕ್ಕೆ ೧೩ ಲಕ್ಷ ೯೦ ಸಾವಿರ ಕೊರೊನಾ ಲಸಿಕೆ ಬರಲಿದೆ.ಇದಕ್ಕಿಂತ ದೊಡ್ಡ ಸುದ್ದಿ ಹಾಗೂ ಸಂತಸದ ವಿಚಾರ ಬೇರೊಂದಿಲ್ಲ ಎಂದರು.
ರಾಜ್ಯಕ್ಕೆ ಬರುವ ಕೊರೊನಾ ಲಸಿಕೆಯನ್ನು ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ನೀಡಲು ತೀರ್ಮಾನಿಸಲಾಗಿದೆ. ಅದರಂತೆ ಈಗಾಗಲೇ ೬ ಲಕ್ಷಕ್ಕೂ ಹೆಚ್ಚು ಆರೋಗ್ಯ ಕಾರ್ಯಕರ್ತರನ್ನು ಗುರುತಿಸಲಾಗಿದ್ದು, ಇವರೆಲ್ಲರಿಗೂ ಲಸಿಕೆಯನ್ನು ನೀಡಲಾಗುವುದು ಎಂದರು.
ಯಾವುದೇ ಅರೋಗ್ಯ ಕಾರ್ಯಕರ್ತರು ಲಸಿಕೆಯಿಂದ ಹೊರಗುಳಿಯಬಾರದು ಎಂಬುದು ಸರ್ಕಾರದ ಉದ್ದೇಶವಾಗಿದೆ. ಹಾಗಾಗಿ ಪ್ರತಿಯೊಬ್ಬ ಕಾರ್ಯಕರ್ತರು ಹೆಸರು ನೋಂದಾಯಿಸಿಕೊಂಡು ಲಸಿಕೆ ಪಡೆಯುವಂತೆ ಅವರು ಹೇಳಿದರು.
ಆರೋಗ್ಯ ಕಾರ್ಯಕರ್ತರ ನಂತರ ಕೊರೊನಾ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಕೊರೊನಾ ವಾರಿಯರ್‌ಗಳಾಗಿ ಕಾರ್ಯನಿರ್ವಹಿಸಿದ ಕಂದಾಯ ಇಲಾಖೆ ಸಿಬ್ಬಂದಿ, ಪೊಲೀಸ್ ಇಲಾಖೆ ಸಿಬ್ಬಂದಿ ಸೇರಿದಂತೆ ಎಲ್ಲ ಕೊರೊನಾ ವಾರಿಯರ್‌ಗಳಿಗೂ ಲಸಿಕೆ ನೀಡಲಾಗುವುದು ಎಂದರು.
ಕೊರೊನಾ ಲಸಿಕೆಯ ೨ನೇ ತಾಲೀಮು ಇಂದು ನಡೆದಿದ್ದು,ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ನೀಡಿಕೆಗೆ ಮಾಡಿಕೊಂಡಿರುವ ಸಿದ್ಧತೆಗಳನ್ನು ವೀಕ್ಷಿಸಲು ಆಸ್ಟರ್ ಆಸ್ಪತ್ರೆಗೆ ಭೇಟಿಕೊಟ್ಟಿದ್ದಾಗಿ ಅವರು ಹೇಳಿದರು.

Spread the love