ರಾಜ್ಯದಲ್ಲಿ ತುರ್ತು ಆರೋಗ್ಯ ಪರಿಸ್ಥಿತಿ ಘೋಷಿಸಿ: ಶೋಭಾ

ಉಡುಪಿ, ಎ.೨೬- ರಾಜ್ಯದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿ, ಖಾಸಗಿ ಆಸ್ಪತ್ರೆಗಳಲ್ಲಿ ಶೇ.50ರಷ್ಟು ಹಾಸಿಗೆ ಪಡೆಯುವುದು ಹಾಗೂ ಇದನ್ನು ನಡೆಸಲು ಕಾರ್ಯಪಡೆಯೊಂದನ್ನು ರಚಿಸಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಅವರು ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದ್ದಾರೆ.

ಈ ಬಗ್ಗೆ ಸಿಎಂ ಬಿಎಸ್‌ವೈ ಅವರಿಗೆ ಪತ್ರ ಬರೆದಿರುವ ಶೋಭಾ ಕರಂದ್ಲಾಜೆ, “ಇತರ ರಾಜ್ಯಗಳಿಂದ ಕೊರೊನಾ ಪೀಡಿತರು ರಾಜ್ಯಕ್ಕೆ ಬರುತ್ತಿರುವ ಕಾರಣ ಕೊರೊನ ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಇಲ್ಲಿಂದ ಕೊರೊನಾ ಸೋಂಕಿತರು ಇತರ ರಾಜ್ಯಗಳಿಗೆ ಹೋಗಿ ಸೋಂಕು ಹರಡುವ ಸಾಧ್ಯತೆಯೂ ಕೂಡಾ ಇದೆ. ಇಂತಹ ಪರಿಸ್ಥಿತಿಯಿಂದ ಜನರು ಆತಂಕಕ್ಕೊಳಗಾಗಿದ್ದಾರೆ. ಈ ಪರಿಸ್ಥಿತಿಯನ್ನು ನಿಯಂತ್ರಿಸಲು ಸೂಕ್ತವಾದ ಕ್ರಮ ಕೈಗೊಳ್ಳಿ” ಎಂದು ಹೇಳಿದ್ದಾರೆ. ಸಹಾಯವಣಿ ಮಾರ್ಗಗಳನ್ನು 30 ರಿಂದ 100ಕ್ಕೆ ಹೆಚ್ಚಿಸಿ ಹಾಗೂ 24 ಗಂಟೆಯೂ ಮೂರು ಪಾಳಿಗಳಲ್ಲಿ ವೃತ್ತಿಪರರಿಗೆ ಕೆಲಸ ಹಂಚಿಕೆ ಮಾಡಬೇಕು. ಬೆಂಗಳೂರಿನಲ್ಲಿ ಹೆಚ್ಚುವರಿಯಾಗಿ ಒಂದು ಸಾವಿರ ಹಗೂ ರಾಜ್ಯದ ಇತರೆ ಭಾಗದಲ್ಲಿ ಒಂದು ಸಾವಿರದಷ್ಟು ವೆಂಟಿಲೇಟರ್‌ಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಸಣ್ಣ ಆಸ್ಪತ್ರೆಗಳನ್ನು ಗುರುತಿಸಿ ವೆಂಟಿಲೇಟರ್‌ ಸಂಖ್ಯೆಯನ್ನು ಹೆಚ್ಚಿಸಬೇಕು” ಎಂದು ಸಲಹೆ ನೀಡಿದ್ದಾರೆ. ಮೈಸೂರಿನಲ್ಲಿರುವ ಸನ್ರೆ ಎಂಬ ವೆಂಟಿಲೇಟರ್ ಕಂಪೆನಿಯು ಒಂದು ವರ್ಷದಲ್ಲಿ 30.000 ಕ್ಕೂ ಹೆಚ್ಚು ವೆಂಟಿಲೇಟರ್‌ಗಳನ್ನು ಕೇಂದ್ರಕ್ಕೆ ಸರಬರಾಜು ಮಾಡಿದೆ. ಆದರೆ ಒಂದು ಸಾವಿರ ವೆಂಟಿಲೇಟರ್‌ಗಳಿಗೆ ಬೇಡಿಕೆ ಇಟ್ಟಿರುವ ರಾಜ್ಯ ಸರ್ಕಾರವು ಕೇವಲ 130 ಅನ್ನು ಮಾತ್ರ ಸಂಗ್ರಹಿಸಿದೆ. ಆರೋಗ್ಯ ಇಲಾಖೆ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಳ್ಳಬೇಕು. ವೆಂಟಿಲೇಟರ್‌, ಆಮ್ಲಜನಕ ಉತ್ಪಾದಿಸುವ ಉದ್ಯಮಿಗಳಿಗೆ ಮುಂಗಡ ಹಣ ನೀಡಿ ವೆಂಟಿಲೇಟರ್‌ಗಳನ್ನು ತುರ್ತಾಗಿ ನಿರ್ಮಿಸಿಕೊಡುವಂತೆ ತಿಳಿಸಿ” ಎಂದಿದ್ದಾರೆ. ಆರೋಗ್ಯ ಇಲಾಖೆಯು ಪ್ರತಿದಿನ ರೆಮ್ಡಿಸಿವರ್ ಮತ್ತು ಆಮ್ಲಜನಕದ ಲಭ್ಯತೆಯನ್ನು ಪ್ರಕಟಿಸಬೇಕು. ಔಷಧಿಗಳ ಲಭ್ಯತೆಯ ಬಗ್ಗೆಯೂ ಪ್ರಕಟಿಸಬೇಕು. ಕೊರೊನಾ ಸೋಂಕಿನಿಂದ ಮೃತಪಟ್ಟವನ್ನು ಶವಾಗಾರದಲ್ಲಿ ಇಟ್ಟು ಟೋಕನ್‌‌‌ ವ್ಯವಸ್ಥೆಯ ಮೂಲಕ ಸಂಬಂಧಿಸಿದ ಚಿತಾಗಾರದಲ್ಲಿ ನಿಗದಿತ ಸಮಯದಲ್ಲಿ ಹೋಗುವ ರೀತಿಯಲ್ಲಿ ವ್ಯವಸ್ಥೆ ಮಾಡಬೇಕು” ಎಂದು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಹಾಸಿಗೆ, ವೆಂಟಿಲೇಟರ್‌ಗಳ ಅಗತ್ಯ ಇರುವ ಕಾರಣ ಈಗಿನಿಂದಲೇ ಶಾಲಾ-ಕಾಲೇಜು, ಹಾಸ್ಟೆಲ್‌‌‌‌‌‌ಗಳನ್ನು ಕೊರೊನಾ ಆರೈಕೆ ಕೇಂದ್ರಗಳಾಗಿ ಪರಿವರ್ತಿಸಬೇಕು. ಕೊರೊನಾ ಪ್ಲಾಸ್ಮಾಗೆ ಸಾಕಷ್ಟು ಬೇಡಿಕೆ ಇರುವುದರಿಂದ ಪ್ಲಾಸ್ಮಾ ಸಂಗ್ರಹ ಸೌಲಭ್ಯಗಳನ್ನು ಹೆಚ್ಚಿಸಬೇಕು” ಎಂದು ಪತ್ರದಲ್ಲಿ ತಿಳಿಸಿದ್ದಾರೆ.