ರಾಜ್ಯದಲ್ಲಿ ತುಂತುರು ಮಳೆ

ಬೆಂಗಳೂರು, ನ. ೨೮- ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯಭಾರ ಕುಸಿತದಿಂದಾಗಿ ಇಂದು ರಾಜ್ಯದ ವಿವಿಧೆಡೆ ತುಂತುರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಳೆಯ ಜೊತೆ ಮೋಡ ಕವಿದ ವಾತಾವರಣ ಸಹ ನಿರ್ಮಾಣಗೊಳ್ಳಲಿದ್ದು. ಚಳಿಯ ಪ್ರಮಾಣವೂ ಏರಿಕೆಯಾಗಲಿದೆ. ಶ್ರೀಲಂಕಾ ಭಾಗದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಕಾರಣದಿಂದಾಗಿ ವಿವಿಧ ಜಿಲ್ಲೆಗಳಲ್ಲಿ ಇಂದು ಭಾರೀ ಮಳೆ ಬೀಳಲಿದೆ.
೫ ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದೆ. ಇಂದು ತುಮಕೂರು, ರಾಮನಗರ, ಮೈಸೂರು, ಮಂಡ್ಯ, ಕೊಡಗು ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಸಹಿತ ಭಾರೀ ಮಳೆ ಮುನ್ಸೂಚನೆ ನೀಡಲಾಗಿದೆ. ಈ ಐದು ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದ್ದು, ಉಳಿದ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.
ಸೋಮವಾರ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆ ಇದೆ. ಇದರಿಂದಾಗಿ ಆಂಧ್ರ ಪ್ರದೇಶ, ರಾಯಲಸೀಮಾ, ಕರ್ನಾಟಕದ ದಕ್ಷಿಣ ಒಳನಾಡು, ಕೇರಳ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ಇಂದು ಬೆಂಗಳೂರು, ದಕ್ಷಿಣ ಒಳನಾಡಿನಲ್ಲಿ ಮಳೆಯಾಗಲಿದೆ. ಹಾಸನ. ದಾವಣಗೆರೆ, ಚಿಕ್ಕಬಳ್ಳಾಪುರ, ಮೈಸೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಗಳಿವೆ. ಇನ್ನುಳಿದಂತೆ ಚಳಿ ಸಹ ರಾಜ್ಯದಲ್ಲಿ ಆರಂಭವಾಗಲಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಚಳಿ ಮತ್ತು ಸುಳಿ ಗಾಳಿಯ ಜೊತೆ ಒಣ ಹವೆ ಇರಲಿದೆ.
ಬೆಂಗಳೂರು, ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಇಂದು ಮಳೆಯಾಗು ಸಾಧ್ಯತೆ ಇದೆ. ತಮಿಳುನಾಡಿನಲ್ಲಿ ನವೆಂಬರ್ ೩೦ರ ತನಕ ಮಳೆ ಮುಂದುವರೆಯುವ ಸಾಧ್ಯತೆ ಇದೆ. ಆಂಧ್ರ ಪ್ರದೇಶದಲ್ಲೂ ಮಳೆಯ ಅಬ್ಬರ ಮುಂದುವರೆದಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ಅಬ್ಬರ ಕಡಿಮೆಯಾಗಿದೆ. ಆದರೆ ತಾಪಮಾನ ಕುಸಿತವಾಗಿದೆ.