ರಾಜ್ಯದಲ್ಲಿ ತಗ್ಗಿದ ತೌಕ್ತೆ ಅಬ್ಬರ

ಬೆಂಗಳೂರು, ಮೇ ೧೭- ರಾಜ್ಯದಲ್ಲಿ ತೌಕ್ತೆ ಚಂಡಮಾರುತದ ಪರಿಣಾಮ ಕಡಿಮೆಯಾದರೂ ಇಂದು ರಾಜ್ಯದ ಕರಾವಳಿ ಜಿಲ್ಲೆಗಳು ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಉಳಿದೆಡೆ ಮೋಡ ಕವಿದ ವಾತಾವರಣವಿದ್ದು ಚದುರಿದ ಮಳೆಯಾಗಬಹುದಾಗಿದೆ ಮಳೆಯು ಇನ್ನೂ ಎರಡು ದಿನಗಳ ಮುಂದುವರೆಯಲಿದೆ ಎಂದು ರಾಜ್ಯ ಪ್ರಕೃತಿ ವಿಕೋಪ ಉಸ್ತುವಾರಿ ನಿರ್ವಹಣಾ ಕೇಂದ್ರ ಮುನ್ಸೂಚನೆ ನೀಡಿದೆ.
ರಾಜ್ಯದ್ಯಂತ ಈಗಾಗಲೇ ಮಳೆಯ ಪ್ರಮಾಣ ತಗ್ಗಿದ್ದು, ಮೇ ೨೦ ರವರೆಗೂ ಅಲ್ಲಲ್ಲಿ ಮಳೆಯಾಗಲಿದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಮೇ ೧೭ ರಿಂದ ೨೦ ರವರೆಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈ ನಡುವೆ ರಾಜ್ಯದಲ್ಲಿ ತೌಕ್ತೆ ಅಬ್ಬರ ಕಡಿಮೆಯಾಗುತ್ತಿದ್ದಂತೆ ನಿನ್ನೆ ಸಂಜೆ ಬಳಿಕ ಮಳೆಯ ಪ್ರಮಾಣ ಬಳಿಕ ತುಸು ಕಡಿಮೆಯಾಗಿದೆ.
ಚಂಡಮಾರುತದ ಪರಿಣಾಮ ಗಾಳಿಯಿಂದ ಕೂಡಿದ ಮಳೆಯಾಗಿದ್ದು, ಹಲವು ಜಿಲ್ಲೆಗಳಲ್ಲಿ ಹಾನಿಯಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು, ಚಿಕ್ಕಮಗಳೂರು, ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಹೆಚ್ಚಿನ ಹಾನಿ ಸಂಭವಿಸಿದೆ.
ಕಾರವಾರ, ಅಂಕೋಲಾ, ಭಟ್ಕಳ ಮತ್ತು ಮುರ್ಡೇಶ್ವರದಲ್ಲಿ ಸಮುದ್ರ ತೀರದಲ್ಲಿದ್ದ ದೋಣಿಗಳು, ಗೂಡಂಗಡಿಗಳು ಮತ್ತು ಮನೆಗಳಿಗೆ ಹಾನಿಯಾಗಿದೆ.
ಎರಡು ಶವ ಪತ್ತೆ:
ಮಂಗಳೂರಿನ ಬಳಿ ಹಡಗುಗಳಿಂದ ಕಚ್ಚಾ ತೈಲ ಇಳಿಸುವುದಕ್ಕಾಗಿ ಎಂಆರ್‌ಪಿಎಲ್ ಸಮುದ್ರದ ಅಡಿಯಲ್ಲಿ ಹಾಕಿರುವ ಕೊಳವೆ ಮಾರ್ಗಕ್ಕೆ ಸಂಪರ್ಕ ಕಲ್ಪಿಸುವ ಕೆಲಸ ಮಾಡುತ್ತಿದ್ದ ಎರಡು ಟಗ್‌ಗಳು ಲಂಗರು ಕಡಿದುಕೊಂಡು ಸಮುದ್ರದ ಪಾಲಾಗಿದ್ದವು. ಅದರಲ್ಲಿ ಹ್ಯಾಟ್ ಎಲ್‌ಐ ಹೆಸರಿನ ಟಗ್ ಸಮುದ್ರದಲ್ಲಿ ಮಗುಚಿ ಬಿದ್ದಿದ್ದು, ಇಬ್ಬರು ಕಾರ್ಮಿಕರ ಶವ ಪತ್ತೆಯಾಗಿದೆ.
ಮೂವರು ಕಾರ್ಮಿಕರನ್ನು ರಕ್ಷಿಸಲಾಗಿದೆ. ಇನ್ನೂ ಮೂವರು ನಾಪತ್ತೆಯಾಗಿದ್ದು ಅವರಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ.
ನವ ಮಂಗಳೂರು ಬಂದರಿನಲ್ಲಿ ಲಂಗರು ಹಾಕಿದ್ದ ಕೋರಮಂಡಲ್ ಸಪೋರ್ಟರ್ ಹೆಸರಿನ ಮತ್ತೊಂದು ಟಗ್ ಲಂಗರು ಕಡಿದುಕೊಂಡು ಸಮುದ್ರದಲ್ಲಿ ಹೋಗಿದ್ದು, ಮೂಲ್ಕಿ ಬಳಿ ಬಂಡೆಗಳ ನಡುವೆ ಸಿಲುಕಿಕೊಂಡಿದೆ.
ಹೆಲಿಕಾಪ್ಟರ್ ನಿಂದ ರಕ್ಷಣೆ:
ಟಗ್‌ನಲ್ಲಿರುವ ಒಂಬತ್ತು ಕಾರ್ಮಿಕರು ರಕ್ಷಣೆಗಾಗಿ ಮೊರೆ ಇಡುತ್ತಿದ್ದು ಅವರನ್ನು ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ.
‘ನೌಕಾ ಪಡೆಯ ಐಎನ್‌ಎಸ್ ವರಾಹ ಹಡಗು ಟಗ್ ಸಮೀಪದಲ್ಲೇ ಇದೆ. ಆದರೆ, ಪ್ರತಿಕೂಲ ಹವಾಮಾನದಿಂದ ರಕ್ಷಣಾ ಕಾರ್ಯಾಚರಣೆ ನಡೆಸಲು ಸಾಧ್ಯವಾಗುತ್ತಿಲ್ಲ. ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಲು ನೌಕಾಪಡೆ ಒಪ್ಪಿಗೆ ಸೂಚಿಸಿದ ಬೆನ್ನಲ್ಲೇ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ಗೋಡೆ ಕುಸಿದು ಸಾವು:
ಬೆಳಗಾವಿ ಜಿಲ್ಲೆಯಲ್ಲಿ ನಿನ್ನೆ ದಿನವಿಡೀ ಜೋರು ಗಾಳಿ ಮಳೆಯಾಗಿದೆ. ಖಾನಾಪುರ ತಾಲ್ಲೂಕಿನ ಇಟಗಿ ಗ್ರಾಮದಲ್ಲಿ ಮಳೆಯಿಂದ ಮನೆಯ ಗೋಡೆ ಕುಸಿದು ದೊಡ್ಡವ್ವ ರುದ್ರಪ್ಪ ಪಟ್ಟೇದ (೫೫) ಮತ್ತು ಅವರ ಮೊಮ್ಮಗ ಅಭಿಷೇಕ ಸುರೇಶ ಪಟ್ಟೇದ (೩) ಮೃತಪಟ್ಟಿದ್ದಾರೆ.
ತೌಕ್ತೆ ಚಂಡಮಾರುತದಿಂದಾಗಿ ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ ಎಂದು ಕಂದಾಯ ಇಲಾಖೆ ವರದಿ ತಿಳಿಸಿದೆ.
ಮನೆಗಳಿಗೆ ಹೆಚ್ಚು ಹಾನಿ:
ಉತ್ತರ ಕನ್ನಡ ಜಿಲ್ಲೆಯ ೩೧, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ತಲಾ ೨೮, ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ತಲಾ ೫ ಹಾಗೂ ಹಾಸನ ಜಿಲ್ಲೆಯ ಒಂದು ಗ್ರಾಮದಲ್ಲಿ ಚಂಡಮಾರುತದಿಂದ ಹೆಚ್ಚು ಹಾನಿ ಸಂಭವಿಸಿದೆ.
ಗೋಡೆ ಕುಸಿತ, ಚಾವಣಿ ಹಾರಿ ಹೋಗಿರುವುದು ಸೇರಿದಂತೆ ೨೨೦ ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.
ಕರಾವಳಿಯ ಮೂರು ಜಿಲ್ಲೆಗಳಲ್ಲಿ ಅಪಾಯದ ಸ್ಥಳಗಳಲ್ಲಿದ್ದ ೫೧೬ ಜನರನ್ನು ಸ್ಥಳಾಂತರ ಮಾಡಲಾಗಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ೧೦ ಪರಿಹಾರ ಕೇಂದ್ರಗಳನ್ನು ತೆರೆದಿದ್ದು, ೨೫೩ ಜನರಿಗೆ ಅಲ್ಲಿ ಆಶ್ರಯ ಕಲ್ಪಿಸಲಾಗಿದೆ’ ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
ಸುಮಾರು ೫೦೦ ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ೨೭ ವಿದ್ಯುತ್ ಪರಿವರ್ತಕಗಳೂ ಹಾಳಾಗಿದ್ದು, ೩,೦೦೦ ಮೀಟರ್‌ಗಳಷ್ಟು ಉದ್ದದ ವಿದ್ಯುತ್ ಪೂರೈಕೆ ಮಾರ್ಗಗಳಿಗೆ ಹಾನಿ ಸಂಭವಿಸಿದೆ.
೬.೪ ಸೆಂ.ಮೀ. ಮಳೆ:
ಮೇ.೧೫ರ ಬೆಳಿಗ್ಗೆ ೮.೩೦ರಿಂದ ನಿನ್ನೆ ಬೆಳಿಗ್ಗೆ ೮.೩೦ರವರೆಗಿನ ೨೪ ಗಂಟೆಗಳ ಅವಧಿಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳ ೩೧೩ ಮಳೆ ಮಾಪನ ಕೇಂದ್ರಗಳಲ್ಲಿ ೬.೪ ಸೆಂ.ಮೀ. ಮಳೆ ಬಿದ್ದಿರುವುದು ದಾಖಲಾಗಿದೆ.
ಸಮುದ್ರದಲ್ಲಿ ಸಿಲುಕಿದ್ದ
೯ ಮಂದಿ ರಕ್ಷಣೆ
ಮಂಗಳೂರು, ಮೇ ೧೭- ತೌಕ್ತೆ ಚಂಡಮಾರುತದ ಹೊಡೆತಕ್ಕೆ ಸಿಲುಕಿ ಕಾಪುಲೈಟ್ ಹೌಸ್ ಗಿಂತ ೧೫ ಕಿ.ಮೀ ದೂರದಲ್ಲಿ ಬಂಡೆಗೆ ಸಿಲುಕಿ ಅಪಘಾತಕ್ಕೀಡಾದ ಕೋರಮಂಡಲ ಎಕ್ಸ್‌ಪ್ರೆಸ್ ಪ್ರೆಸ್ ವೆಸೆಲ್ ಟಗ್ ನಲ್ಲಿ ಸಿಲುಕಿರುವ ೯ ಮಂದಿ ಸಿಬ್ಬಂದಿಗಳನ್ನು ರಕ್ಷಿಸಲಾಗಿದೆ.
ನೌಕಾಪಡಯ ಹೆಲಿಕಾಪ್ಟರ್ ಮೂಲಕ ಎಲ್ಲರನ್ನೂ ಏರ್ ಲಿಫ್ಟ್ ಮಾಡಿ, ಕೋಸ್ಟ್ ಗಾರ್ಡ್ ನ ವರಾಹ ನೌಕೆಯ ಮೂಲಕ ದಡಕ್ಕೆ ಕರೆತರಲಾಗಿದೆ ಎಂದು ಕರಾವಳಿ ಕಾವಲು ಪಡೆಯ ಕಮಾಂಡರ್ ವೆಂಕಟೇಶ್ ತಿಳಿಸಿದ್ದಾರೆ.
ರಕ್ಷಿಸಿದ ಎಲ್ಲಾ ಒಂಬತ್ತು ಮಂದಿ ಕಾರ್ಮಿಕರನ್ನು ಎನ್ ಎಂಪಿಟಿ ಬಂದರಿಗೆ ಕರೆತಂದು ಆರೋಗ್ಯದ ತಪಾಸಣೆ ನಡೆಸಲಾಗಿದೆ
ಎನ್‌ಎಂಪಿಟಿ ಬಂದರಿನ ಹೊರವಲಯದ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಚಂಡಮಾರುತದ ಪರಿಣಾಮ ಆ?ಯಂಕರ್ ತುಂಡಾಗಿ ತೇಲಿ ಬಂದು, ಕಾಪು ಬಳಿಯಲ್ಲಿ ಅಪಘಾತಕ್ಕೊಳಗಾದ ಕೋರಮಂಡಲ ಎಕ್ಸ್ ಪ್ರೆಸ್ ವೆಸೆಲ್ ಟಗ್ ನಲ್ಲಿ ಒಂಬತ್ತು ಮಂದಿ ಸಿಬ್ಬಂದಿಗಳಿದ್ದರು.
ಕಳೆದ ಮೇ.೧೪ರ ಬೆಳಗ್ಗೆ೧೧.೩೦ ರಿಂದ ಕಡಲಲ್ಲಿ ತೇಲುತ್ತಿರುವ ಕೋರಮಂಡಲ ಎಕ್ಸ್‌ಪ್ರೆಸ್ ಟಗ್ ಮರುದಿನ ಬೆಳಗ್ಗೆ ೮.೩೦ ಕ್ಕೆ ಕಾಪು ಲೈಟ್ ಬಳಿಯಿಂದ ಸುಮಾರು ಹದಿನೈದು ಕಿಲೋ ಮೀಟರ್ ದೂರದ ಕಾಪು ಪಾರ್ ಬಳಿ ಬಂಡೆಗೆ ಢಿಕ್ಕಿ ಹೊಡೆದು ನಿಂತಿರುವುದು ಪತ್ತೆಯಾಗಿತ್ತು.
ಟಗ್ ನಲ್ಲಿ ಇರುವ ೯ ಮಂದಿ ಸಿಬಂದಿಗಳು ತಮ್ಮ ಜೀವನದ ಅತ್ಯಮೂಲ್ಯವಾದ ಸುಮಾರು ೪೪ ಗಂಟೆಗಳನ್ನು ಈಗಾಗಲೇ ಸಮುದ್ರ ಮಧ್ಯದಲ್ಲೇ ಕಳೆದಿದ್ದರು.