ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ರಚನೆ ಖಚಿತ: ಲಾಡ್


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.30: ಮಾಜಿ ಶಾಸಕ, ನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅನಿಲ್ ಹೆಚ್.ಲಾಡ್ ಅವರು ನಿನ್ನೆ ಸಂಜೆ ಇಲ್ಲಿನ ಬಾಪುಜಿ ನಗರದಲ್ಲಿ ಚುನಾವಣಾ ಪ್ರಚಾರ ನಡೆಸಿದರು.
ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಆಗಲಿ, ಬಿಜೆಪಿಗೆ ಆಗಲಿ ಸ್ಪಷ್ಟ ಬಹುಮತ ಬರಲ್ಲ,
ಜನಪರವಾದ, ರೈತಪರವಾದ   ಜೆಡಿಎಸ್ ನ್ನು  ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ತರಲು ಮತದಾರ ನಿರ್ಧರಿಸಿದ್ದಾನೆ. ಇದರಿಂದ ಹೆಚ್.ಡಿ.ಕುಮಾರಸ್ವಾಮಿ ಅವರು  ಮತ್ತೆ ಮುಖ್ಯ ಮಂತ್ರಿಗಳಾಗಲಿದ್ದಾರೆ. ಸರ್ವ ಸಮುದಾಯಕ್ಕೆ ಅನುಕೂಲವಾದ ಯೋಜನೆಗಳನ್ನು ಅನುಷ್ಟಾನಕ್ಕೆ ತರಲಿದ್ದಾರೆಂದರು.
ತಾವು ಶಾಸಕರಾಗಿದ್ದಾಗ ನಗರದಲ್ಲಿ  ಕುಡಿಯುವ ನೀರಿನ‌ ಸಮಸ್ಯೆ ನೀಗಿಸಲು ಮಾಡಿದ ಪ್ರಯತ್ನವನ್ನು ತಿಳಿಸಿದರು.
ಈ ಬಾರಿ ನಗರದಲ್ಲಿ ಶಾಸಕರಾಗಬೇಕೆಂದು ಬಯಸಿ ಬಂದಿರುವ ಹೊಸ ಮುಖಗಳೂ ಕೇವಲ ಹಣದಿಂದ ಜನರ ಮತವನ್ನು ಗಳಿಸಬಹುದು ಎಂದುಕೊಂಡಿದ್ದಾರೆ. ಇವರು ಸಮಾಜಕ್ಕೆ ನೀಡಿರುವ ಕೊಡುಗೆ ಏನು.
ಕಳೆದ 20 ವರ್ಷದಿಂದ ನಾನು‌ ಸಾರ್ವಜನಿಕ ಜೀವನದಲ್ಲಿದ್ದೇನೆ ಬಡವರ ಸಂಕಷ್ಟ ಏನೆಂದು ಗೊತ್ತಿದೆ. ನಿಮ್ಮ ನೋವಿಗೆ ಸ್ಪಂದಿಸುವ ನನಗೆ ಮತ ನೀಡಿ.  ನನ್ನ ಚಿನ್ಹೆ ಭತ್ತದ ಹುಲ್ಲಿನ ಹೊರೆ ಹೊತ್ತ ಮಹಿಳೆ ಎಂದು ತಿಳಿಸಿದರು.
ಲಾಡ್ ಅವರ ಮಾತುಗಳನ್ನು ಆಸಿದ ಜನತೆ ಕಳೆದಬಾರಿಯೂ ನಿಮಗೆ ಮತ ನೀಡಿತ್ತು ಎಂದು ಕೆಲವರು ಹೇಳಿದಾಗ. ನೀವಷ್ಟೇ ಹಾಕಿದರೆ ಸಾಲದು ಎಲ್ಲರೂ ಹಾಕಬೇಕೆಂದು‌ಮನವಿ‌ ಮಾಡಿದರು.
ಪಕ್ಷದ ಜಿಲ್ಲಾ ಅಧ್ಯಕ್ಷ ಪಿ.ಎಸ್.ಸೋಮಲಿಂಗನಗೌಡ ಮೊದಲಾದವರು ಇದ್ದರು.