ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದು ಖಚಿತ – ಸಿ.ಎಂ.ಇಬ್ರಾಹಿಂ ಭವಿಷ್ಯ

ಕೋಲಾರ, ಮಾ.೮- ಕರ್ನಾಟಕದ ವಜ್ರದಂತಿರುವ ಮಾಜಿ ಪ್ರಧಾನಿ ದೇವೇಗೌಡ ಉತ್ತಮವಾಗಿ ಸಾಧನೆ ಮಾಡಿರುವುದರ ಜತೆಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ದಿನನಿತ್ಯವೂ ರೈತರ ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ಪಂಚರತ್ನ ಯೋಜನೆಯ ಮೂಲಕ ಓಡಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುತ್ತದೆ ಎನ್ನುವುಕ್ಕೆ ಎಲ್ಲೆಡೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿರುವುದೇ ಸಾಕ್ಷಿಯಾಗಿದೆ ಎಂದು ಜೆಡಿಎಸ್ ಪಕ್ಷದ ರಾಜ್ಯ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಭವಿಷ್ಯ ನುಡಿದರು,
ತಾಲೂಕಿನ ಅಮ್ಮನಲ್ಲೂರು ಗ್ರಾಪಂ ವ್ಯಾಪ್ತಿಯ ರಾಮಾಪುರದಲ್ಲಿ ಭಾನುವಾರ ಜೆಡಿಎಸ್ ಪಕ್ಷದ ಸಂಘಟನಾ ಸಮಾವೇಶ ಉದ್ಘಾಟಿಸಿ ಮಾತನಾಡಿ, ರಾಜ್ಯಕ್ಕೆ ಪದೇಪದೇ ಮೋದಿ, ಅಮಿತ್ ಶಾ ಬರುತ್ತಿದ್ದಾರೆಂದರೆ, ರಾಜ್ಯಾದ್ಯಂತ ಮಾಜಿ ಸಿಎಂ ಸಿದ್ದರಾಮಯ್ಯ ಹೆಚ್ಚು ಓಡಾಡುತ್ತಿದ್ದಾರೆಂದರೆ ಜೆಡಿಎಸ್ ಪಕ್ಷಕ್ಕೆ ಹೆಚ್ಚಿನ ಶಕ್ತಿ ಬಂದಿರುವುದೇ ಕಾರಣ ಎಂದು ತಿಳಿಸಿದರು.
ಚಾಮುಂಡೇಶ್ವರಿ ಉಪಚುನಾವಣೆಯಲ್ಲಿ ಹಾಗೂ ಕಳೆದ ಚುನಾವಣೆಯಲ್ಲಿ ಬಾದಾಮಿಗೆ ಕರೆದುಕೊಂಡು ಹೋಗಿ ಸಿದ್ದರಾಮಯ್ಯರಿಗೆ ರಾಜಕೀಯ ಜೀವನ ನೀಡಿದ್ದು, ನಾನು. ನಾನಲ್ಲ ಎಂದು ನಿನಗೆ ಧೈರ್ಯವಿದ್ದರೆ ಬಂದು ಹೇಳು. ಕಳೆದ ಚುನಾವಣೆಯಲ್ಲಿ ಸೋಲುತ್ತೀಯ ಎಂದು ಮೊದಲೇ ಹೇಳಿದ್ದೆ. ಜತೆಗೆ ಮೈಸೂರಿನಿಂದ ಬೆಂಗಳೂರುವರೆಗೆ ಒಂದು ಸ್ಥಾನವೂ ಬರಲ್ಲ ಎಂದಿದ್ದೆ. ಸಾಬರ ಆಡಿದ ಮಾತು ತಪ್ಪಲ್ಲ ಎನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ ಸಿದ್ದರಾಮಯ್ಯ ಎಂದು ಪ್ರಶ್ನಿಸಿದರು.
ಕೋಲಾರ ಶಾಸಕ ಕೆ.ಶ್ರೀನಿವಾಸಗೌಡರಿಗೆ ೧೯೯೪ರಲ್ಲಿ ಟಿಕೆಟ್ ನೀಡಿ ಶಾಸಕರನ್ನಾಗಿ ಮಾಡಿದ್ದು ದೇವೇಗೌಡರು ಅದನ್ನೆಲ್ಲಾ ಮರೆತು ಕಾಂಗ್ರೆಸ್ ಜತೆ ಸೇರಿ ನೀನು ಹಾಳಾಗುವುದಲ್ಲದೆ ನಿನ್ನ ಮಗನ ಭವಿಷ್ಯ ಹಾಳು ಮಾಡುತ್ತಿದ್ದೀಯ.
ಈ ಬಾರಿ ಕುಮಾರಸ್ವಾಮಿ ಅವರು ಸಿಎಂ ಆಗುವುದು ಶತಃಸಿದ್ಧ. ಒಂದು ವೇಳೆ ಸಿಎಂ ಆಗದಿದ್ದರೆ ನಾನೇ ನಿನಗೆ ೨೫ ಕೋಟಿ ಕೊಡುತ್ತೇನೆ. ಆದರೆ ಬಿಜೆಪಿಯವರ ಬಳಿ ನೀನು ಪಡೆದಿರುವ ೫ ಕೋಟಿ ಹಣವನ್ನು ನನಗೆ ತಂದು ಕೊಡಬೇಕು ಎಂದು ಷರತ್ತು ಹಾಕಿದರು.
ಎಂಎಲ್ಸಿ ಇಂಚರ ಗೋವಿಂದರಾಜು ಮಾತನಾಡಿ, ಜೆಡಿಎಸ್ ಕಾರ್ಯಕರ್ತರು ಕಷ್ಟ ಪಟ್ಟು ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರನ್ನು ಆಯ್ಕೆ ಮಾಡಿದ್ದೆವು. ಆದರೆ ಕಾರ್ಯಕರ್ತರ ನಂಬಿಕೆಯನ್ನು ಆ ಶಾಸಕ ಉಳಿಸಿಕೊಳ್ಳಲಿಲ್ಲ. ರಾಜ್ಯದಲ್ಲಿ ಕುಮಾರಸ್ವಾಮಿ ಅವರ ಪಂಚರತ್ನ ಯೋಜನೆಗಳ ಜತೆಗೆ ಕೋವಿಡ್ ಸಂದರ್ಭದಲ್ಲಿ ಸಿಎಂಆರ್ ಶ್ರೀನಾಥ್‌ರೊಂದಿಗೆ ಮನೆ ಮನೆಗೆ ಭೇಟಿ ನೀಡಿ ಸೇವೆ ಮಾಡಿದ್ದೇವೆ. ಎಚ್ಡಿಕೆ ಸಿಎಂ ಆಗಲು ಹಾಗೂ ಜಿಲ್ಲೆಯ ಅಭಿವೃದ್ಧಿಗಾಗಿ ಜೆಡಿಎಸ್ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಮಾತನಾಡಿ, ದಿ.ಬೈರೇಗೌಡರ ಆಡಳಿತದ ಕ್ಷೇತ್ರದಲ್ಲಿ ನಾವೇ ಮಾಡಿದ ಸ್ವಯಂ ಅಪರಾಧದಿಂದ ರಾಜಕಾರಣ ಕಲುಷಿತವಾಗಿದ್ದು, ಬೈರೇಗೌಡರ ಸಿದ್ಧಾಂತ ಗತವೈಭವ ಮತ್ತೆ ಮರುಕಳಿಸಲು ಕ್ಷೇತ್ರದ ಜನರು ನೆಮ್ಮದಿ ಹಾಗೂ ಗೌರವಯುತವಾಗಿ ಬದುಕಲು ಜೆಡಿಎಸ್ ಪಕ್ಷವನ್ನು ಬೆಂಬಲಿಸಬೇಕೆಂದು ಕೋರಿದರು.
ಇದೇ ವೇಳೆ ರಾಜ್ಯ ಜೆಡಿಎಸ್ ಹಿಂದುಳಿದ ವರ್ಗಗಳ ಘಟಕಕ್ಕೆ ರಾಜ್ಯ ಕಾರ್ಯದರ್ಶಿಯಾಗಿ ಜೆಟ್ ಅಶೋಕ್, ಜಿಲ್ಲಾಧ್ಯಕ್ಷರಾಗಿ ಶಬರೀಶ್, ಕಾರ್ಯಾಧ್ಯಕ್ಷರಾಗಿ ರೋಟರಿ ಸುಧಾಕರ್, ಜಿಲ್ಲಾ ಕಾರ್ಯದರ್ಶಿಯಾಗಿ ಬಲಿಜ ಸಂಘದ ಅಶೋಕ್, ರಾಜ್ಯ ಎಸ್ಸಿ ಮೋರ್ಚಾ ಕಾರ್ಯದರ್ಶಿಯಾಗಿ ತಿರುಮಲೇಶ್ ಆಯ್ಕೆಯಾಗಿದ್ದು, ಆದೇಶ ಪತ್ರಗಳನ್ನು ವಿತರಿಸಲಾಯಿತು.
ಜೆಡಿಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ಜಮೀರ್ ಅಹಮದ್, ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್, ಜಿಪಂ ಮಾಜಿ ಸದಸ್ಯ ಬಾಲಾಜಿ ಚನ್ನಯ್ಯ, ನಗರಸಭೆ ಸದಸ್ಯ ಮಂಜುನಾಥ್, ಮುಖಂಡರಾದ ಸಿಎಂಆರ್ ಹರೀಶ್, ವಕ್ಕಲೇರಿ ರಾಮು, ಬಾಬು ಮೌನಿ, ಖಾಜಿಕಲ್ಲಹಳ್ಳಿ ಹರೀಶ್, ಕಲಾ ರಮೇಶ್, ಡಾಬಾ ಶಂಕರ್, ಲೋಕೇಶ್ ಮರಿಯಪ್ಪ, ಜಯರಾಮ್, ಗ್ರಾಪಂ ಅಧ್ಯಕ್ಷ ವೆಂಕಟೇಶ್, ಮದನಹಳ್ಳಿ ಶಶಿ ಇದ್ದರು.