ರಾಜ್ಯದಲ್ಲಿ ಚಳಿ, ಮಳೆ ಹೆಚ್ಚಳ

ಬೆಂಗಳೂರು, ನ. ೧೫- ವಾಯುಭಾರ ಕುಸಿಯದಿಂದಾಗಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಭಾರೀ ಮಳೆ ಜೊತೆಗೆ ಚಳಿ ವಾತಾವರಣ ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ರಾಜ್ಯದಲ್ಲಿ ಚಳಿ ಶುರುವಾದರೂ ಮಳೆರಾಯನ ಅಬ್ಬರ ಮಾತ್ರ ಕಡಿಮೆಯಾಗಿಲ್ಲ. ಬೆಂಗಳೂರು ನಗರ ಸೇರಿದಂತೆ ರಾಜ್ಯದ ೨೦ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ನವೆಂಬರ್ ೧೭ ರವರೆಗೆ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕೆಲ ದಿನಗಳಿಂದ ರಾಜ್ಯದಲ್ಲಿ ಹಗುರ ಮಳೆಯಾಗುತ್ತಿದ್ದು, ಹಿಂಗಾರು ಮಳೆ ಮುಗಿಯುವ ಲಕ್ಷಣಗಳಿತ್ತು. ಇದರ ನಡುವೆ ಚಳಿ ವಿಪರಿತವಾಗಿತ್ತು. ಆದರೆ, ಇದಕ್ಕೆ ವಿರುದ್ಧವಾಗಿ ವರದಿ ನೀಡಿರುವ ಹವಾಮಾನ ಇಲಾಖೆ ಇನ್ನು ಮೂರು ದಿನ ಭಾರೀ ಮಳೆಯಾಗಲಿದೆ ಎಂದು ಹೇಳಿದೆ.
ಶಿವಮೊಗ್ಗ, ಮಡಿಕೇರಿ, ಹಾಸನ, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಕೆಲ ಭಾಗಗಳಲ್ಲಿ ಸ್ವಲ್ಪ ಮಳೆಯಾಗುವ ಸಾಧ್ಯತೆಯಿದೆ. ಕೊಪ್ಪಳ, ರಾಯಚೂರು, ಯಾದಗಿರಿ, ವಿಜಯಪುರ, ಬೀದರ್, ಕಲಬುರಗಿ, ಬಾಗಲಕೋಟೆ ನಗರಗಳಲ್ಲಿ ಬಿಸಿಲಿನ ವಾತಾವರಣ ಹೆಚ್ಚಲಿದೆ. ಉಳಿದಂತೆ ರಾಜ್ಯಾದ್ಯಂತ ಮುಂಜಾನೆ ಹಾಗೂ ರಾತ್ರಿಯ ವೇಳೆ ಚಳಿಯ ವಾತಾವರಣ ಏರಿಕೆಯಾಗಲಿದೆ.
ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು, ಮುಂಜಾನೆ ಮಂಜು ಮುಸುಕಿದ ವಾತಾವರಣವಿರುತ್ತದೆ. ಸಂಜೆಯ ವೇಳೆಗೆ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ. ತಮಿಳುನಾಡಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ರಾಜ್ಯದಲ್ಲಿಯೂ ಅದರಲ್ಲೂ ತಮಿಳುನಾಡು ಗಡಿಗೆ ಸಮೀಪದಲ್ಲಿರುವ ಬೆಂಗಳೂರಿನ ಮೇಲೂ ಪರಿಣಾಮ ಬೀರುತ್ತಿದೆ.
ಬೆಂಗಳೂರಿನಲ್ಲಿ ಇಂದು ಗರಿಷ್ಠ ತಾಪಮಾನ ೨೬ ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ ೧೮ ಡಿಗ್ರಿ ಸೆಲ್ಸಿಯಸ್ ಇರಲಿದೆ. ಬಾಗಲಕೋಟೆಯಲ್ಲಿ ಗರಿಷ್ಠ ತಾಪಮಾನ ೩೩ ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ ೧೯ ಡಿಗ್ರಿ ಸೆಲ್ಸಿಯಸ್ ಇರಲಿದೆ.