ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಕುಸಿತ: ಶಿವಶಂಕರರೆಡ್ಡಿ ಆರೋಪ

ಗೌರಿಬಿದನೂರು, ಜು.೩೦- ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಶಾಂತಿ ಮತ್ತು ಸೌಹಾರ್ಧಯುತವಾದ ವಾತಾವರಣ ಹಾಳಾಗಿದೆ ಎಂದು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರವು ಜನರ ಹಿತ ಕಾಪಾಡುವುದನ್ನು ಮರೆತು ತಮ್ಮ ಸಾಧನೆಯನ್ನು ಜನರ ಮುಂದೆ ಪ್ರದರ್ಶಿಸಲು ಮುಂದಾಗಿದ್ದಾರೆ ಎಂದು ಹೇಳಿದರು.
ಕಳೆದ ಬಾರಿಯ ಕಾಂಗ್ರೆಸ್ ಆಡಳಿತಾವಧಿಯಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ದಕ್ಷ ಮತ್ತು ಪ್ರಾಮಾಣಿಕವಾಗಿ ೫ ವರ್ಷಗಳ ಸಂಪೂರ್ಣ ಅಧಿಕಾರವನ್ನು ನಡೆಸಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಹಾಗೂ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ. ಅವರ ಅಭಿಮಾನಿಗಳು ೭೫ ನೇ ವರ್ಷದ ಜನ್ಮದಿನದ ಅಂಗವಾಗಿ ’ಸಿದ್ದರಾಮೋತ್ಸವ’ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಿದ್ದು, ಇದಕ್ಕಾಗಿ ತಾಲ್ಲೂಕಿನ ೩೧ ಗ್ರಾ.ಪಂ ವ್ಯಾಪ್ತಿಯಲ್ಲಿನ ಪಕ್ಷದ ಕಾರ್ಯಕರ್ತರು ಮತ್ತು ಅವರ ಅಭಿಮಾನಿಗಳು ಕಾರ್ಯಕ್ರಮಕ್ಕೆ ತೆರಳಲು ವಾಹನ ವ್ಯವಸ್ಥೆ ಮಾಡಲಾಗಿದೆ ಎಂದರು.
ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಕ್ಷೇತ್ರದಲ್ಲಿ ೧೫ ಕಿ.ಮೀ ಕಾಲ್ನಡಿಗೆಯಲ್ಲಿ ಜಾಥಾ ನಡೆಸಿ ೭೫ ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷದ ಸಾಧನೆಯನ್ನು ಸಾಮಾನ್ಯ ನಾಗರೀಕರಿಗೆ ತಿಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಇದರಿಂದಾಗಿ ಪಕ್ಷ ಸಂಘಟನೆಯ ಜತೆಗೆ ೭೫ ವರ್ಷಗಳ ಅವಧಿಯಲ್ಲಿ ದೇಶ ಹಾಗೂ ರಾಜ್ಯಕ್ಕೆ ಪಕ್ಷ ಕೊಟ್ಟಿರುವ ಕೊಡುಗೆಗಳನ್ನು ಸ್ಮರಿಸಲಾಗುವುದು.
ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಕುಸಿದಿದ್ದು ಬಿಜೆಪಿ ಸರ್ಕಾರದಲ್ಲಿ ಮೋದಿ ಮತ್ತು ಅಮಿತ್ ಷಾ ರವರು ಇಟ್ಲರ್ ನೀತಿ ಪಾಲಿಸುತ್ತಿದ್ದಾರೆ. ಸಂಸತ್ತನ್ನು ತಮ್ಮ ಮುಷ್ಟಿಯಲ್ಲಿರಿಸಿಕೊಂಡು ಯಾವ ಸಂಸತ್ತು ಸದಸ್ಯರಿಗೂ ಪ್ರಶ್ನಿಸುವ ಹಕ್ಕು ಇಲ್ಲದಂತೆ ಮಾಡಿದ್ದು, ಇದು ಹೆಚ್ಚು ಕಾಲ ನಡೆಯುವುದಿಲ್ಲ ಎಂದು ಹೇಳಿದರು.