ರಾಜ್ಯದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲಲಿದೆ: ಕೆ.ಮರೀಗೌಡ

ಸಂಜೆವಾಣಿ ನ್ಯೂಸ್
ಮೈಸೂರು.ಮೇ.17:- ರಾಜ್ಯದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲ್ಲಿದ್ದು ಮೈಸೂರು-ಕೊಡಗು ಹಾಗೂ ಚಾಮರಾಜನಗರದ ಕಾಂಗ್ರೆಸ್ ಅಭ್ಯರ್ಥಿಗಳಾದ ಎಂ. ಲಕ್ಷಣ್ ಹಾಗೂ ಸುನೀಲ್‍ಬೋಸ್ ಗೆಲ್ಲಲಿದ್ದಾರೆಂದು ಮುಡಾ ಅಧ್ಯಕ್ಷ ಕೆ. ಮರೀಗೌಡ ತಿಳಿಸಿದರು.
ಮುಡಾ ಕಛೇರಿಯಲ್ಲಿ ಗುರುವಾರ ಮೈಸೂರು ತಾಲ್ಲೂಕು ಕೈಗಾರಿಕಾ ಸಹಕಾರ ಸಂಘದ ವತಿಯಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯರವರು 2013 ರಿಂದ 2018 ರವರೆಗೆ ಜನರಿಗೆ ನೀಡಿದ ಕಾರ್ಯಕ್ರಮಗಳು, ಈಗ ಜಾರಿಗೊಳಿಸಿರುವ 5 ಜನಪರ ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲುವಿನತ್ತ ಕೊಂಡೊಯ್ಯಲಿದ್ದು ರಾಜ್ಯದಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಲಿವೆ. ಅದಲ್ಲದೆ ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುವ ಪಕ್ಷವಾಗಿದೆ. ಸಾಮಾಜಿಕ ನ್ಯಾಯದಡಿಯಲ್ಲಿ ಸಂವಿಧಾನದ ಆಶಯದಂತೆ ಬಸವಣ್ಣರವರ ತತ್ವ ಸಿದ್ದಾಂತಗಳಿಗೆ ಅನುಗುಣವಾಗಿ ಸಿದ್ದರಾಮಯ್ಯರವರು ಅಧಿಕಾರ ನಡೆಸುತ್ತಿದ್ದಾರೆ. ಆದ್ದರಿಂದ ರಾಜ್ಯದ ಬಡವರು ನೆಮ್ಮದಿಯಾಗಿದ್ದಾರೆ ಎಂದ ಅವರು ಬಿಜೆಪಿ ಪಕ್ಷ ಕೋಮುವಾದದ ವಿಷಬೀಜ ಬಿತ್ತುತ್ತ ಹಿಂದು-ಮುಸ್ಲಿಂ ಎಂದು ಭೇದಭಾವ ಮಾಡುತ್ತ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡದೇ ಸುಳ್ಳು ಭರವಸೆಗಳನ್ನು ನೀಡುತ್ತಾ ಬಂದಿರುವ ಬಿಜೆಪಿ ಪಕ್ಷಕ್ಕೆ ಜನರು ಈ ಬಾರಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮೈಸೂರು ತಾಲ್ಲೂಕು ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷ ಬಿ.ಎಸ್. ಶಿವಣ್ಣ, ಕಾರ್ಯದರ್ಶಿ ಮಂಜುನಾಥ್, ನಿರ್ದೇಶಕರುಗಳಾದ ಚಿಕ್ಕಣ್ಣಗೌಡ, ನಂಜಪ್ಪ, ನಿಜಲಿಂಗಪ್ಪ, ರಾಜಶೇಖರ್, ಲಕ್ಷಿ?ಮ, ಸುನಂದಮ್ಮ, ನಾಡನಹಳ್ಳಿ ರವಿ, ಹೆಳವರಹುಂಡಿ ಸೋಮು, ಧನಗಳ್ಳಿ ಬಸವರಾಜು, ಬಿ. ರವಿ, ಪ್ರಕಾಶ್, ಹಂಚ್ಯಾ ಸಣ್ಣಸ್ವಾಮಿ, ಹೂಟಗಳ್ಳಿ ಮಹೇಶ, ನಾಗರಾಜ್ ಹಾಜರಿದ್ದರು.