ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವಲ್ಲಿ ಲಕ್ಷ್ಮಣ ಸವದಿ ಅವರ ಪಾತ್ರ ಮಹತ್ತರ

ಅಥಣಿ :ಮೇ.29: ಚುನಾವಣಾ ಪೂರ್ವದಲ್ಲಿ ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷವನ್ನ ಸೇರುವ ಮೂಲಕ ರಾಜ್ಯದಲ್ಲಿಯೇ ದೊಡ್ಡ ಅಲೆ ಎಬ್ಬಿಸಿದ್ದ ಲಕ್ಷ್ಮಣ ಸವದಿಯವರು ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನ ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಿಸುವಲ್ಲಿ ಸಾಕಷ್ಟು ಶ್ರಮ ವಹಿಸಿದ್ದರು. ಅದರಲ್ಲಿ ವಿಶೇಷವಾಗಿ ಅಥಣಿ, ಕಾಗವಾಡ ಮತ್ತು ಕುಡುಚಿ ಮತಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವದರ ಜೊತೆಗೆ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಪ್ರಚಾರ ಸಭೆಗಳಲ್ಲಿ ಭಾಗವಹಿಸಿ ಪ್ರಚಾರ ಮಾಡಿದ್ದರು ಕಾಂಗ್ರೆಸ್ ಪಕ್ಷದಲ್ಲಿರುವ ಇಂತಹ ಪ್ರಭಾವಿ ನಾಯಕನಿಗೆ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ ಇವರ ಜೋಡೆತ್ತು ಸರ್ಕಾರದಲ್ಲಿ ಮೊದಲನೇಯ ಹಂತದಲ್ಲಿಯೇ ಸಚಿವರಾಗುತ್ತಾರೆ ಎಂಬ ಕ್ಷೇತ್ರದ ಜನರ ನಿರೀಕ್ಷೆಯಾಗಿತ್ತು, ಚುನಾವಣೆಯಲ್ಲಿ ಲಕ್ಷ್ಮಣ ಸವದಿ ಭರ್ಜರಿ ಜಯಭೇರಿ ಬಾರಿಸಿದರೆ ಜಗದೀಶ್ ಶೆಟ್ಟರ್ ಸೋಲು ಅನುಭವಿಸಿದ್ದರು. ಸೋತಿದ್ದರು ಕೂಡ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ನೇಮಿಸಿ ಸಚಿವರನ್ನಾಗಿ ಮಾಡುತ್ತಾರೆ ಎಂಬ ನಿರೀಕ್ಷೆ ಇತ್ತು. ಅದು ಕೂಡಾ ಹುಸಿಯಾಗಿದೆ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವಲ್ಲಿ ಲಕ್ಷ್ಮಣ ಸವದಿ ಮತ್ತು ಜಗದೀಶ್ ಶೆಟ್ಟರ್ ಅವರ ಪಾತ್ರ ಕೂಡ ಮಹತ್ತರವಾಗಿತ್ತು.
ಲಕ್ಷ್ಮಣ ಸವದಿ ಅವರ ಹೆಸರು ಮೊದಲ ಹಂತದಲ್ಲಿ ಬಾರದ ಇದ್ದಾಗ ಎರಡನೆಯೇ ಹಂತದಲ್ಲಾದರೂ ನಮ್ಮ ಸಾಹುಕಾರನಿಗೆ ಮಂತ್ರಿ ಸ್ಥಾನ ಸಿಕ್ಕೇ ಸಿಗುತ್ತದೆ. ಎಂಬ ವಿಶ್ವಾಸ ಕ್ಷೇತ್ರದ ಜನತೆಯಲ್ಲಿ ಹೆಚ್ಚಾಗಿತ್ತು. ಎರಡನೆಯ ಸಚಿವ ಸಂಪುಟದ ಪಟ್ಟಿಯಲ್ಲಿ ಲಕ್ಷ್ಮಣ ಸವದಿ ಹೆಸರು ಇರದೇ ಇರುವುದು. ಅಭಿಮಾನಿಗಳಲ್ಲಿ ಹಾಗೂ ಕ್ಷೇತ್ರದ ಜನರಲ್ಲಿ ನಿರಾಶೆ ಮೂಡಿದೆ.
ಬಿಜೆಪಿಯಿಂದ ಟಿಕೆಟ್ ಸಿಗಲಿಲ್ಲ. ಎಂಬ ಕಾರಣಕ್ಕೆ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆ ಯಾಗುವ ಮೂಲಕ ಅಥಣಿ ಅಖಾಡದಲ್ಲಿ ನಡೆದ ಧರ್ಮ ಯುದ್ಧದಲ್ಲಿ ದಿಗ್ವಿಜಯ ಸಾಧಿಸಿದ ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ಸಿಗದೇ ಧರ್ಮ ಸಂಕಟ ಎದುರಿಸುವಂತಾಗಿದೆ. ಕಾಂಗ್ರೆಸ್ ಪಕ್ಷದ ಯಾವುದೇ ಹಿರಿಯ ನಾಯಕರನ್ನು ಪ್ರಚಾರಕ್ಕಾಗಿ ಕರೆಸಿಕೊಳ್ಳದೆ ಸ್ವಂತ ಬಲದಿಂದ ತಮ್ಮ ಬೆಂಬಲಿಗರನ್ನು ಮತ್ತು ಮೂಲ ಕಾಂಗ್ರೆಸ್ಸಿಗರನ್ನು ಒಗ್ಗೂಡಿಸುವ ಮೂಲಕ ಸ್ವಾಭಿಮಾನಿ ಮತದಾರರ ಹೃದಯ ಗೆದ್ದು 76 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿರುವ ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ ಎಂಬ ನಿರೀಕ್ಷೆ ಹುಸಿಯಾಗುವ ಮೂಲಕ ಅಥಣಿ ಕ್ಷೇತ್ರದ ಜನತೆಗೆ ನಿರಾಶೆ ಮೂಡಿಸಿದೆ.ಸಂಘಟನಾ ಚತುರ ಹಾಗೂ ಜಾಣಾಕ್ಷ ರಾಜಕಾರಣಿಯಾಗಿರುವ ಲಕ್ಷ್ಮಣ ಸವದಿ
ಚುನಾವಣಾ ಪೂರ್ವದಲ್ಲಿ ವಿವಿಧ ಸಮುದಾಯಗಳ ಅಭಿಪ್ರಾಯ ಸಂಗ್ರಹಿಸುವ ಮೂಲಕ ಸ್ವಾಭಿಮಾನಿ ಮತದಾರರ ಆಶೀರ್ವಾದದಿಂದ ನಾಲ್ಕನೆಯ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿ
ಸರ್ಕಾರದಲ್ಲಿ ಮೊದಲ ಹಂತದಲ್ಲಿಯೇ ಸಚಿವರಾಗಿ, ಉಪ ಮುಖ್ಯಮಂತ್ರಿಯಾಗಿ ಉತ್ತರ ಕರ್ನಾಟಕದ ಪ್ರಭಾವಿ ನಾಯಕ ಎನಿಸಿಕೊಂಡವರು.

ಕೊಟ್ಟ ಪ್ರತಿಜ್ಞೆ ಈಡೇರಿಸಿದ ಲಕ್ಷ್ಮಣ ಸವದಿ

ಲಕ್ಷ್ಮಣ ಸವದಿ ಕುಡಚಿ ಮತಕ್ಷೇತ್ರದ ಹಾರುಗೇರಿಯ ಪ್ರಜಾಧ್ವನಿಯಾತ್ರೆಯಲ್ಲಿ ಕಾಗವಾಡ ಹಾಗೂ ಕುಡಚಿ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳನ್ನ ಗೆಲ್ಲಿಸಿಕೊಂಡು ಅವರನ್ನು ಹೆಗಲ ಮೇಲೆ ಹೊತ್ತಿಕೊಂಡು ವಿಧಾನಸಭೆಗೆ ಬರತ್ತೀನಿ ಅಂತಾ
ಲಕ್ಷ್ಮಣ ಸವದಿ ಸಿದ್ದರಾಮಯ್ಯ ಮುಂದೆ ಪ್ರತಿಜ್ಞೆ ಮಾಡಿದ್ದರು ಲಕ್ಷ್ಮಣ ಸವದಿ ಕೊಟ್ಟ ಮಾತಿನಂತೆ ಕಾಗವಾಡದಿಂದ ರಾಜು ಕಾಗೆ ಹಾಗೂ ಕುಡಚಿಯಿಂದ ಮಹೇಶ ತಮ್ಮಣ್ಣವರ ಅವರಿಗೆ ಗೆಲ್ಲಿಸಲು ಲಕ್ಷ್ಮಣ ಸವದಿ ಯಶಸ್ವಿಯಾಗಿದ್ದಾರೆ.
ಬಿಜೆಪಿ ಘಟಾನುಘಟಿ ನಾಯಕರೇ ಬಂದು ಪ್ರಚಾರ ನಡೆಸಿ ಹೋಗಿದ್ದರೂ ಕೊನೆಗೆ ಜಯದ ಮಾಲೆಯನ್ನು ಕೊರಳಿಗೆ ಹಾಕಿಕೊಂಡಿದ್ದರು. ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರಿದ್ದು. ಇದು ಎಷ್ಟರ ಮಟ್ಟಿಗೆ ಪ್ರಭಾವ ಬೀರಿತೆಂದರೆ, ಬೆಳಗಾವಿ ಜಿಲ್ಲೆಯಷ್ಟೇ ಅಲ್ಲ ರಾಜ್ಯದಲ್ಲಿಯೂ ಕೂಡ ಪರಿಣಾಮ ಬೀರಿದ್ದನ್ನೂ ಯಾರೂ ಅಲ್ಲಗಳೆಯುತ್ತಿಲ್ಲ.

ಮುಂದೆ ಒಳ್ಳೆಯ ಅವಕಾಶ ಸಿಗುವ ಆಶಾಭಾವನೆ

ಬೆಳಗಾವಿ ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ
ಮಾಜಿ ಸಚಿವ ರಮೇಶ ಹಾರಕಿಹೊಳಿ ವಿರುದ್ಧ ಸೆಡ್ಡು ಹೊಡೆದು ಗೆದ್ದು ಬಂದಿದ್ದ ಲಕ್ಷ್ಮಣ ಸವದಿ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಮಂತ್ರಿ ಸ್ಥಾನ ನೀಡದೆ ಶಾಕ್ ನೀಡಿರುವುದು ತೀವ್ರ ಚರ್ಚೆಗಳಿಗೆ ಕಾರಣವಾಗಿದೆ. ಕಾಂಗ್ರೆಸ್ ಪಕ್ಷದಿಂದ ಮೊದಲ ಬಾರಿಗೆ ಗೆದ್ದು ಶಾಸಕರಾಗಿರುವ ಲಕ್ಷ್ಮಣ ಸವದಿ ತಾಳ್ಮೆ ಕಾಯ್ದುಕೊಂಡು ಕಾಂಗ್ರೆಸ್ ಪಕ್ಷದಲ್ಲಿ ಮುಂದಿನ ದಿನಮಾನಗಳಲ್ಲಿ ಒಳ್ಳೆಯ ಅವಕಾಶ ಸಿಗಲಿದೆ ಎಂಬ ಆಶಾಭಾವನೆಯಿಂದ ಸಧ್ಯ ಮಂತ್ರಿ ಸ್ಥಾನಕ್ಕೆ ಯಾವುದೇ ಲಾಬಿ ಮಾಡದೆ ಮೌನ ವಹಿಸಿದಂತ ಕಾಣುತ್ತದೆ. ಮುಂಬರುವ ದಿನಗಳಲ್ಲಿ ಜಿಲ್ಲಾ ಪಂಚಾಯತ ಮತ್ತು ತಾಲೂಕಾ ಪಂಚಾಯಿತ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಲಕ್ಷ್ಮಣ ಸವದಿ ಅವರ ಸಂಘಟನಾ ಶಕ್ತಿಯನ್ನು ಕಾಂಗ್ರೆಸ್ ಹೈಕಮಾಂಡ್ ಯಾವ ರೀತಿ ಬಳಸಿ ಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಷ್ಟೆ.