ರಾಜ್ಯದಲ್ಲಿ ಏನಾಗುತ್ತೋ ನೋಡೋಣ

ಬೆಂಗಳೂರು,ಜೂ.೨:ಮತಗಟ್ಟೆ ಸಮೀಕ್ಷೆಗಳಲ್ಲಿ ಕೇಂದ್ರದಲ್ಲಿ ನರೇಂದ್ರಮೋದಿ ನೇತೃತ್ವದ ಸರ್ಕಾರ ಹ್ಯಾಟ್ರಿಕ್ ಜಯಭೇರಿ ಬಾರಿಸಲಿದೆ ಎಂದು ದೃಢಪಟ್ಟಿದೆ. ಆದರೆ,ರಾಜ್ಯದಲ್ಲಿ ಯಾವ ರೀತಿ ಫಲಿತಾಂಶ ಬರಲಿದೆ ಎಂಬುದನ್ನು ಕಾದು ನೋಡುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದರು.
ನಿನ್ನೆಯಷ್ಟೆ ಮತಗಟ್ಟೆ ಸಮೀಕ್ಷೆಗಳು ಹೊರ ಬಿದ್ದಿರುವ ಹಿನ್ನೆಲೆಯಲ್ಲಿ ಡಾಲರ್‍ಸ್ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತಗಟ್ಟೆ ಸಮೀಕ್ಷೆಗಳ ಪ್ರಕಾರ ಬಿಜೆಪಿ ಪರ ಅಲೆ ಇದೆಎನ್ನುವುದು ಸ್ಪಷ್ಟವಾಗಿದೆ ಎಂದರು.
ಕರ್ನಾಟಕ ಸೇರಿದಂತೆ ದೇಶಾದ್ಯಂತ ಎನ್‌ಡಿಎ ಪರ ಅಲೆ ಇದೆ. ಮೋದಿ ಅವರು ಹೆಚ್ಚು ಮತಗಳಿಂದ ಜಯಸಾಧಿಸಿ ೩ನೇ ಬಾರಿಯೂ ಪ್ರಧಾನಿಯಾಗುವುದು ನಿಶ್ಚಿತ. ಜೂ. ೪ ರಂದು ಫಲಿತಾಂಶ ಪ್ರಕಟವಾಗಲಿದ್ದು,ಈ ಬಗ್ಗೆ ಸ್ಪಷ್ಟ ಚಿತ್ರಣ ಹೊರ ಬರಲಿದೆ ಎಂದರು.
ರಾಜ್ಯದಲ್ಲಿ ಕಡಿಮೆ ಸೀಟುಗಳು ಗೆಲ್ಲುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಏನಾಗಲಿದೆ ಎಂಬುದನ್ನು ನೋಡೋಣ ಎಂದಷ್ಟೆ ಹೇಳಿದರು.