ರಾಜ್ಯದಲ್ಲಿಯೇ ಪ್ರಥಮ ಕೋವಿಡ್ ಪುನರ್ ಚೇತನ ಅಭಿಯಾನ ಕೇಂದ್ರಕ್ಕೆ ಚಾಲನೆ

ಕಲಬುರಗಿ,ಮೇ.29: ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ನಗರದಲ್ಲಿ ಜಿಲ್ಲಾಡಳಿತ ಹಾಗೂ ಶ್ರೀ ರವಿಶಂಕರ್ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸಹಯೋಗದೊಂದಿಗೆ ಕೋವಿಡ್ ಪುನರ್‍ಚೇತನ ಅಭಿಯಾನ ಕೇಂದ್ರಕ್ಕೆ ಶನಿವಾರ ಚಾಲನೆ ನೀಡಲಾಯಿತು.
ನಗರದ ರಾಮಮಂದಿರ- ನಾಗನಹಳ್ಳಿ ವರ್ತುಲ ರಸ್ತೆಯಲ್ಲಿರುವ ನಗರಾಭಿವೃದ್ಧಿ ಪ್ರಾಧಿಕಾರದ ಕಲ್ಯಾಣ ಮಂಟಪದಲ್ಲಿ ಜಿಲ್ಲಾಧಿಕಾರಿಗಳ ಮಾರ್ಗದರ್ಶನ ಹಾಗೂ ನೇತೃತ್ವವದಲ್ಲಿ ಕೋವಿಡ್‍ನಿಂದ ಗುಣಮುಖರಾದವರಿಗೆ ಶನಿವಾರದಿಂದ ಕೋವಿಡ್ ಪುನರ್ ಚೇತನ ಅಭಿಯಾನ ಕೇಂದ್ರದಲ್ಲಿ ನಿರಂತರ ತರಬೇತಿ ನೀಡಲಾಗುತ್ತದೆ.
ಕೇಂದ್ರಕ್ಕೆ ಕೋವಿಡ್‍ನಿಂದ ಗುಣಮುಖವಾಗಿ ಆಗಮಿಸಿದ ವ್ಯಕ್ತಿಗಳಿಗೆ ಸರ್ಕಾರದ ವತಿಯಿಂದ ಉಚಿತ ಶ್ವಾಸಕೋಶ ಹೆಚ್ಚಿಸುವ ಕಿಟ್, ಫಲ ಆಹಾರ ಹಾಗೂ ಡ್ರೈಫ್ರೂಟ್ಸ್ ನೀಡಲಾಯಿತು ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಹಾಗೂ ಕೋವಿಡ್ ನಿಯಂತ್ರಣದ ನೋಡಲ್ ಅಧಿಕಾರಿ ರಮೇಶ್ ಜಿ. ಸಂಗಾ ಅವರು ತಿಳಿಸಿದರು.
ಪುನರ್ ಚೇತನ ಅಭಿಯಾನ ಕೇಂದ್ರಕ್ಕೆ ನಗರದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್‍ನಿಂದ ಚೇತರಿಸಿಕೊಂಡು ಬಿಡುಗಡೆಯಾದವರಿಗೆ ಶ್ವಾಸಕೋಶ ಇಮ್ಮಡಿಗೊಳಿಸುವ ತರಬೇತಿಯನ್ನು ನೀಡಲಾಗುವುದು. ನಗರದ ಜಿಮ್ಸ್, ಬಸವೇಶ್ವರ್ ಆಸ್ಪತ್ರೆ, ಸ್ಪರ್ಶ ಆಸ್ಪತ್ರೆ, ವಿ.ಎಲ್. ಪಾಟೀಲ್ ಆಸ್ಪತ್ರೆ, ಧನ್ವಂತರಿ ಆಸ್ಪತ್ರೆ ಹಾಗೂ ಧನ್ವಂತರಿ ಆಸ್ಪತ್ರೆ ಸೇರಿದಂತೆ ಇನ್ನೂ ಹಲವಾರು ಆಸ್ಪತ್ರೆಯ ವ್ಯಕ್ತಿಗಳು ಅಭಿಯಾನ ಕೇಂದ್ರದಲ್ಲಿ ತರಬೇತಿ ಪಡೆಯುವರು ಎಂದು ಅವರು ವಿವರಿಸಿದರು.
ಕೋವಿಡ್ ಪುನರ್‍ಚೇತನ ಅಭಿಯಕಾನಾ ಕೇಂದ್ರಕ್ಕೆ ಸಹಾಯಕ ಆಯುಕ್ತ ರಾಮಚಂದ್ರ ಗಡಾದೆ, ನಾನು ಉಸ್ತುವಾರಿಗಳಾಗಿದ್ದೇವೆ ಎಂದು ಹೇಳಿದ ಸಂಗಾ ಅವರು, ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಪರವಾಗಿ ಡಾ. ಕವಿರಾಜ್ ಎಂ., ಅವರು ವಿಶೇಷ ತರಬೇತಿ ನೀಡುವರು. ಸರ್ಕಾರ ನಿಯೋಜಿಸಿರುವ ಡೈಟಿಷಿಯನ್‍ಗಳಾಗಿ ಡಾ. ರಾಣಿ, ಡಾ. ಸಂಗೀತಾ, ಡಾ. ವಿಜಯ್ ಅವರು ಕಾರ್ಯನಿರ್ವಹಿಸಲಿದ್ದಾರೆ ಎಂದು ಅವರು ಹೇಳಿದರು.
ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಶಿಕ್ಷಕರಾದ ಗೀತಾ, ವಿಕಾಸ್, ಅಶ್ವಿನಿ, ನಿಂಗರಾಜ್, ಕಿಶೋರ್ ಅವರು ಗುಣಮುಖ ವ್ಯಕ್ತಿಗಳಿಗೆ ತರಬೇತಿ ಶಿಕ್ಷಣ ನೀಡುವರು. ಪುನರ್ ಚೇತನ ಕೇಂಧ್ರಕ್ಕೆ ಖರ್ಚು, ವೆಚ್ಚವನ್ನು ವಿಪತ್ತು ನಿರ್ವಹಣಾ ನಿಧಿಯಿಂದ ಕಂದಾಯ ಇಲಾಖೆ ಸಹಾಯಕ ಆಯುಕ್ತರು ಹಾಗೂ ತಹಸಿಲ್ದಾರರು ಭರಿಸಲಿದ್ದಾರೆ. ಕೇಂದ್ರಕ್ಕೆ ಬೇಕಾದ ಬೆಡ್ ಹಾಗೂ ಹಾಸಿಗೆಗಳನ್ನು ಅಜಿಮ್ ಪ್ರೇಮ್‍ಜಿ ಫೌಂಡೇಶನ್‍ನಿಂದ ಉಚಿತವಾಗಿ ನೀಡಲಾಗುತ್ತಿದೆ. ತರಬೇತಿ ಸಮಯದಲ್ಲಿ 1ರಿಂದ 2 ಗಂಟೆಗಳ ಕಾಲ ಧ್ಯಾನ, ಯೋಗ ಹಾಗೂ ಕೌನ್ಸಿಲಿಂಗ್ ಸೇರಿದಂತೆ ಇನ್ನಿತರ ಚಟುವಟಿಕೆಗಳನ್ನು ದಾಖಲಾದವರಿಂದ ಮಾಡಿಸಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಆರ್ಟ್ ಆಫ್ ಲಿವಿಂಗ್ ನಗರ ಘಟಕದ ಅಧ್ಯಕ್ಷ ಸ್ವಾಮಿ ಶರಣು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಆರ್ಟ್ ಆಫ್ ಲಿವಿಂಗ್‍ನ ಸಿಬ್ಬಂದಿಗಳು ಮುಂತಾದವರು ಉಪಸ್ಥಿತರಿದ್ದರು.