ರಾಜ್ಯಕ್ಕೆ ಮೋದಿ ಬಿಜೆಪಿಯಲ್ಲಿ ಸಂಚಲನ

ನಾಯಕರ ಜತೆ ಚರ್ಚೆ
ಬೆಂಗಳೂರು,ಜ.೧೨:ರಾಜಕೀಯ ಯಾತ್ರೆ, ಸಮಾವೇಶಗಳ ಮೂಲಕ ರಾಜ್ಯದಲ್ಲಿ ಚುನಾವಣಾ ಪೂರ್ವ ಪ್ರಚಾರಾಂದೋಲನಗಳನ್ನು ರಾಜಕೀಯ ಪಕ್ಷಗಳು ಆರಂಭಿಸಿರುವಾಗಲೇ ಪ್ರಧಾನಿ ಮೋದಿ ಅವರ ಇಂದಿನ ರಾಜ್ಯ ಭೇಟಿ ಪ್ರಚಾರಾಂದೋಲನದ ಕಾವನ್ನು ಹೆಚ್ಚಿಸಲಿದೆ.
ಯುವ ಸಮುದಾಯದ ಮತ ಭೇಟೆಗೆ ಮುಂದಾಗಿರುವ ಬಿಜೆಪಿ, ಯುವ ಜನೋತ್ಸವದ ಉದ್ಘಾಟನೆಗೆ ಪ್ರಧಾನಿ ಮೋದಿ ಅವರನ್ನು ಕರೆಸುವ ಮೂಲಕ ಯುವ ಸಮುದಾಯವನ್ನು ಸೆಳೆಯುವ ಪ್ರಯತ್ನ ನಡೆಸಿದೆ. ಪ್ರಧಾನಿಯವರ ಇಂದಿನ ರಾಜ್ಯ ಭೇಟಿ ಬಿಜೆಪಿ ಕಾರ್ಯಕರ್ತರಲ್ಲಿ ಮತ್ತಷ್ಟು ಹುರುಪು-ಉತ್ಸಾಹ ಹೆಚ್ಚಳಕ್ಕೆ ಕಾರಣವಾಗಲಿದೆ.
ಈ ಭೇಟಿ ಸಂದರ್ಭದಲ್ಲೇ ಪ್ರಧಾನಿಯವರು ರಾಜ್ಯ ಬಿಜೆಪಿ ನಾಯಕರೊಂದಿಗೆ ಚುನಾವಣಾ ರಣತಂತ್ರಗಳ ಬಗ್ಗೆಯೂ ಚರ್ಚೆ ನಡೆಸುವರು ಎನ್ನಲಾಗಿದೆ. ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಿ ಚುನಾವಣಾ ರಣ ನೀತಿಯ ಬಗ್ಗೆ ರಾಜ್ಯ ನಾಯಕರೊಂದಿಗೆ ಚರ್ಚಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಸಹ ಇಂದಿನ ರಾಜ್ಯ ಭೇಟಿಯಲ್ಲಿ ಚುನಾವಣಾ ಗೆಲುವಿಗೆ ಏನೆಲ್ಲ ತಂತ್ರಗಾರಿಕೆ ನಡೆಸಬೇಕು ಎಂಬ ಬಗ್ಗೆ ರಾಜ್ಯ ನಾಯಕರುಗಳಿಗೆ ಕೆಲ ಸೂಚನೆಗಳನ್ನು ನೀಡಲಿದ್ದಾರೆ ಎನ್ನಲಾಗಿದೆ.
ಮುಂದಿನ ವಿಧಾನಸಭಾ ಚುನಾವಣೆಗೆ ಆಡಳಿತಾರೂಢ ಬಿಜೆಪಿ ಹಾಗೂ ವಿರೋಧ ಪಕ್ಷಗಳಾದ ಕಾಂಗ್ರೆಸ್-ಜೆಡಿಎಸ್ ಯಾತ್ರೆಗಳನ್ನು ಆರಂಭಿಸುವ ಮೂಲಕ ಚುನಾವಣಾ ರಣಕಹಳೆಯನ್ನು ಈಗಾಗಲೇ ಮೊಳಗಿಸಿದ್ದು, ಪ್ರಧಾನಿ ಮೋದಿ ಅವರು ಇಂದು ರಾಜ್ಯಕ್ಕೆ ಭೇಟಿ ನೀಡಿ ಯುವಜನೋತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ಚುನಾವಣಾ ಕಾವಿನ ಬಿಸಿಯನ್ನು ಮತ್ತಷ್ಟು ಏರಿಸಲಿದ್ದಾರೆ.
ಹುಬ್ಬಳ್ಳಿಯಲ್ಲಿ ಇಂದಿನಿಂದ ೪ ದಿನಗಳ ಕಾಲ ನಡೆಯುವ ಯುವಜನೋತ್ಸವದ ಉದ್ಘಾಟನೆಯನ್ನು ಪ್ರಧಾನಿ ಮೋದಿ ಅವರು ಉದ್ಘಾಟಿಸಲಿದ್ದು, ಯುವ ಜನರ ಒಲವನ್ನು ಗಳಿಸಲು ಸ್ವಾಮಿ ವಿವೇಕಾನಂದರ ಜನ್ಮದಿನವಾದ ಇಂದು ಯುವಜನೋತ್ಸವವನ್ನು ದೊಡ್ಡ ಮಟ್ಟದಲ್ಲಿ ನಡೆಸುತ್ತಿದ್ದು, ೪ ದಿನಗಳ ಯುವಜನೋತ್ಸವದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಈ ಯುವಜನೋತ್ಸವವನ್ನು ಉದ್ಘಾಟಿಸಲಿರುವ ಪ್ರಧಾನಿ ಮೋದಿ ಅವರು ಚುನಾವಣಾ ಸಂದರ್ಭದಲ್ಲಿ ಯುವ ಜನತೆಯ ಒಲವನ್ನು ಗಳಿಸಲು ವಿಶೇಷ ಕಾರ್ಯಕ್ರಮಗಳನ್ನು ಪ್ರಕಟಿಸುವ ಸಾಧ್ಯತೆಗಳು ಇವೆ.
ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಪೂರ್ವ ಪ್ರಚಾರಾಂದೋಲನಗಳು ಬಿರುಸಾಗಿರುವಾಗಲೇ ಪ್ರಧಾನಿಯವರ ಭೇಟಿ ಹೆಚ್ಚು ಮಹತ್ವ ಪಡೆದುಕೊಂಡಿದೆ.