ರಾಜ್ಯಕ್ಕೆ ಮೋದಿ ಕೊಡುಗೆ ಏನು

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಏ.೨೦:ಪ್ರಧಾನಿ ಮೋದಿ ಅವರು ರಾಜ್ಯಕ್ಕೆ ಕೊಟ್ಟಿರುವುದು ಚೊಂಬು ಅದನ್ನು ನಾವು ಹೇಳಿದ್ದೇವೆ. ಹಾಗಾದರೆ ಅವರು ರಾಜ್ಯಕ್ಕೆ ಏನು ಕೊಟ್ಟಿದ್ದಾರೆ ಎಂದು ಹೇಳಲಿ ಎಂದು ಕೆಪಿಸಿಸಿ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು.
ಇಂದು ರಾಜ್ಯಕ್ಕೆ ಆಗಮಿಸುತ್ತಿರುವ ಪ್ರಧಾನಿ ಮೋದಿ ಅವರು ಕಾಂಗ್ರೆಸ್ ಪಕ್ಷದ ಪ್ರಶ್ನೆಗಳಿಗೆ ಮೊದಲು ಉತ್ತರಿಸಲಿ ಅನುದಾನ ತಾರತಮ್ಯ, ತೆರಿಗೆ ಹಂಚಿಕೆಯಲ್ಲಿನ ಅನ್ಯಾಯ, ನೀರಾವರಿಗೆ ಅನುದಾನ ನೀಡದಿರುವುದು ಎಲ್ಲದರ ಬಗ್ಗೆಯೂ ನಾವು ಕೇಳಿರುವ ಪ್ರಶ್ನೆಗಳಿಗೆ ಉತ್ತರಿಸಲಿ ನೋಡೋಣ ಎಂದು ಡಿ.ಕೆ ಶಿವಕುಮಾರ್ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು.
ಪ್ರಧಾನಿ ಮೋದಿ ಅವರು ತೆರಿಗೆ ಹಕ್ಕಿನ ಬಗ್ಗೆ, ಬರಪರಿಹಾರದ ಹಣ ನೀಡದಿರುವ ಬಗ್ಗೆ, ಮಹದಾಯಿ, ಮೇಕೆದಾಟು ಯೋಜನೆಗೆ
ಅನುಮತಿ ನೀಡದಿರುವ ಬಗ್ಗೆಯೂ ಉತ್ತರ ನೀಡಬೇಕು. ಹಾಗೆಯೇ ಭದ್ರಾ ಮೇಲ್ದಂಡೆಗೆ ಮೀಸಲಿಟ್ಟ ಹಣ ಯಾವಾಗ ಬಿಡುಗಡೆ ಮಾಡುತ್ತಾರೆ ಎಂಬುದನ್ನು ಹೇಳಲಿ ಎಂದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಬಿಜೆಪಿ ಆರೋಪದಲ್ಲಿ ಹುರುಳಿಲ್ಲ.ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿದೆ. ಹುಬ್ಬಳ್ಳಿಯ ಯುವತಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಪ್ರಕಾರ ಏನೆಲ್ಲ ಕ್ರಮ ತೆಗೆದುಕೊಳ್ಳಬೇಕೊ ಅದನ್ನೆಲ್ಲ ತೆಗೆದುಕೊಳ್ಳಲಾಗಿದೆ. ಯಾರ ಪರ ಲಾಬಿ ಪ್ರಶ್ನೆಯೇ ಇಲ್ಲ ಯಾರ ಮೇಲೂ ಕರುಣೆಯಾಗಲಿ ಕನಿಕರವಾಗಲಿ ಇಲ್ಲ ಎಂದು ಸ್ಪಷ್ಟಪಡಿಸಿದರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನೀಚ ಎನ್ನುವ ಪದ ಬಳಸಿರುವ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್ ಒಳ್ಳೊಳ್ಳೆ ಪದಗಳನ್ನು ಬಳಸುತ್ತಿದ್ದಾರೆ ಬಳಸಲಿ ಎಂದು ವ್ಯಂಗ್ಯವಾಡಿದರು.
ಸಮ್ಮಿಶ್ರ ಸರ್ಕಾರವನ್ನು ಬೀಳಿಸಲು ಮುಂಬೈಗೆ ಹೋಗಿದ್ದ ಶಾಸಕರನ್ನು ಕರೆತರಲು ಶಿವಕುಮಾರ್ ಮುಂಬೈಗೆ ಹೋಗಿದ್ದು, ಕೇವಲ ನಾಟಕೀಯ ವರ್ತನೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾನು ನಾಟಕ ಮಾಡಿದೆನೋ ಇಲ್ಲವೋ ಎಂಬುದು ಜೆಡಿಎಸ್ ಶಾಕಸರಿಗೆ ಗೊತ್ತಿದೆ. ಒಟ್ಟಿನಲ್ಲಿ ಬಂಡೆ ತರ ನಿಂತೆನಲ್ಲ ಎಂದು ಒಪ್ಪಿಕೊಂಡಿದ್ದಾರಲ್ಲ ಅಷ್ಟು ಸಾಕು ಎಂದರು.
ಲೋಕಸಭಾ ಚುನಾವಣೆಯ ನಂತರ ಮುಖ್ಯಮಂತ್ರಿ ಕುರ್ಚಿ ಗಲಾಟೆಯಿಂದ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ ಎಂಬ ಹೆಚ್‌ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಚುನಾವಣೆ ಆದ ಮೇಲೆ ಬಿಜೆಪಿ -ಜೆಡಿಎಸ್ ಏನಾಗುತ್ತದೆ ಎಂದು ಹೇಳಲಿ ನಂತರ ನಮ್ಮ ಬಗ್ಗೆ ಮಾತನಾಡಲಿ ಎಂದರು.
ಡಿ.ಕೆ ಶಿವಕುಮಾರ್ ಅವರು ಪ್ರತಿದಿನ ೫೦ ಕೋಟಿ ದುಡ್ದಿಲ್ಲದೆ ಮಲಗುತ್ತಿಲ್ಲ ಎಂಬ ಕುಮಾರಸ್ವಾಮಿ ಹೇಳಿಕೆಗೆ ಕಿಡಿಕಾರಿದ ಡಿ.ಕೆ ಶಿವಕುಮಾರ್, ನನಗೆ ದುಡ್ಡು ಹೊಡೆಯಲು ಆಗುತ್ತಿಲ್ಲ ಎಂದು ಕೈ ಕೈ ಹೊಸೆದುಕೊಂಡು ಕುಮಾರಸ್ವಾಮಿ ಅವರೇ ನಿದ್ದೆ ಮಾಡುತ್ತಿಲ್ಲ ಎಂದು ತಿರುಗೇಟು ನೀಡಿದರು.