ರಾಜ್ಯಕ್ಕೆ ಮುಂಗಾರು ಪ್ರವೇಶ 3 ಜಿಲ್ಲೆಗಳಲ್ಲಿ ರೆಡ್ ಅಲರ್ಟ್

ಬೆಂಗಳೂರು,ಜೂ.೫-ರಾಜ್ಯದ ಹಲವೆಡೆ ಸುರಿಯುತ್ತಿರುವ ಭಾರೀ ಮಳೆಯ ನಡುವೆಯೇ ಮುಂಗಾರು ಪ್ರವೇಶಿಸಿದ್ದು, ಮೂರು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳ ಲಾಗಿದೆ.
ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿಗೆ ನಿನ್ನೆ ಪ್ರವೇಶಿಸಿರುವ ಮುಂಗಾರು ಇಂದು ಉತ್ತರ ಒಳನಾಡನ್ನು ವ್ಯಾಪಿಸಲಿವೆ. ಇದರೊಂದಿಗೆ ರಾಜ್ಯದಲ್ಲಿ ೪ ತಿಂಗಳ ಮಳೆಗಾಲ ಅಧಿಕೃತವಾಗಿ ಆರಂಭವಾಗಿದೆ.
ವಾಡಿಕೆಯಂತೆ ಜೂನ್.೧ರಂದೇ ಪ್ರವೇಶವಾಗಬೇಕಿದ್ದ ಮುಂಗಾರು ಮಾರುತಗಳು ನಾಲ್ಕು ದಿನ ತಡವಾಗಿ ಕರಾವಳಿ ಮತ್ತು ದಕ್ಷಿಣ ಒಳನಾಡು ಭಾಗಗಳನ್ನು ಪ್ರವೇಶಿಸಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡನ್ನು ಪ್ರವೇಶಿಸಿರುವ ನೈಋತ್ಯ ಮುಂಗಾರು ಜೂ.೫ರಂದು ಉತ್ತರ ಒಳನಾಡಿನ ಪ್ರದೇಶ ತಲುಪಲಿದೆ.ಆ ಮೂಲಕ ರಾಜ್ಯದಲ್ಲಿ ಮುಂಗಾರು ಆರಂಭವಾಗಲಿದೆ.
ಉತ್ತರ ಒಳನಾಡನ್ನು ಇಂದು ಹಾದು ಹೋಗುವ ಮೂಲಕ ಈ ಮಾರುತಗಳು ಇಡೀ ರಾಜ್ಯ ಆವರಿಸಲಿವೆ. ಮುಂಗಾರು ಅರಂಭವಾದ ಮೊದಲ ದಿನವೇ ಕರಾವಳಿ ಭಾಗದಲ್ಲಿ ವ್ಯಾಪಕ ಮಳೆ ದಾಖಲಾಗಿದೆ.ಇದೇ ರೀತಿ ಜೂನ್ ೬ರವರೆಗೆ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಎಲ್ಲಾ ಕಡೆಗಳಲ್ಲಿ ಗುಡುಗು ಮತ್ತು ಗಾಳಿ ಸಹಿತ ಮಳೆ ಮುಂದುವರೆಯಲಿದೆ.
ಜೂ.೫ ರಂದು ಅತ್ಯಧಿಕ ಮಳೆ ಬೀಳುವುದರಿಂದ ಉಡುಪಿ, ಉತ್ತರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸುವ ಹವಾಮಾನ ಇಲಾಖೆ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆಯನ್ನು ನೀಡಿದೆ.
ರಾಜ್ಯದಲ್ಲಿ ನಿನ್ನೆ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗಿದೆ. ರಾಜ್ಯದಲ್ಲಿ ನಿನ್ನೆ ಒಟ್ಟಾರೆ ೩೭.೨ ಎಂಎಂ ಮಳೆಯಾಗಿದೆ. ಇದು ಶೇ.೧೧೫ ಪಟ್ಟು ಹೆಚ್ಚಿನ ಮಳೆಯಾಗಿದೆ ಎಂದು ತಿಳಿದುಬಂದಿದೆ.
೪೪.೨ಎಂಎಂ ಮಳೆ:
ನಗರದಲ್ಲಿ ನಿನ್ನೆ ಸಂಜೆ ೫.೩೦ರವರೆಗೂ ೯ ಎಂಎಂ ಮಳೆಯಾಗಿದ್ದು, ರಾತ್ರಿ ೮.೩೦ರವರೆಗೆ ೧೨.೪ ಎಂಎಂ ಮಳೆಯಾಗಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಜೆ ೫.೩೦ರವರೆಗೆ ೨೫.೬ ಎಂಎಂ ಮಳೆಯಾಗಿದ್ದು, ಹೆಎಎಲ್ ವಿಮಾನ ನಿಲ್ದಾಣದಲ್ಲಿ ರಾತ್ರಿ ೮.೩೦ರ ವೇಳೆಗೆ ೪೪.೨ಎಂಎಂ ಮಳೆಯಾಗಿದೆ.
ಜೂ.೫ ಹಾಗೂ ೬ ರಂದು ಗುಡುಗು ಸಹಿತ ಜೋರು ಮಳೆ ಬೀಳಲಿದೆ. ನಂತರ ಜೂ.೭ ರಂದು ಮಳೆ ಅಬ್ಬರ ತುಸು ಕಡಿಮೆಯಾಗುವ ನಿರೀಕ್ಷೆಗಳಿವೆ.
ರೆಡ್ ಅಲರ್ಟ್ ಘೋಷಣೆ:
ಇಂದು (ಜೂ.೫)ಅತ್ಯಧಿಕ ಮಳೆ ಬೀಳುವುದರಿಂದ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಮಲೆನಾಡಿನ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, ದಕ್ಷಿಣ ಒಳನಾಡಿನ ಬಹುತೇಕ ಎಲ್ಲಾ ಜಿಲ್ಲೆಗಳು, ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಹಾವೇರಿ, ಧಾರವಾಡ, ವಿಜಯಪುರ, ಕಲಬುರಗಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ರಾಜ್ಯದಲ್ಲಿ ಮುಂಗಾರು ಪ್ರವೇಶವಾದ ಹಿನ್ನೆಲೆಯಲ್ಲಿ ನಗರದಲ್ಲಿ ಜೂ. ೭ರವರೆಗೂ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆಯು ಮಾಹಿತಿಯನ್ನು ನೀಡಿದೆ.