ರಾಜ್ಯಕ್ಕೆ ಮತ್ತೆ ವಕ್ಕರಿಸಿದ ಹೆಮ್ಮಾರಿ 215 ವಿದ್ಯಾರ್ಥಿಗಳಿಗೆ ಸೋಂಕು

ಬೆಂಗಳೂರು,ನ.೨೬- ಧಾರವಾಡದ ಎಸ್ ಡಿಎಂ ವೈದ್ಯಕೀಯ ಕಾಲೇಜು ಮತ್ತು ವಿಜ್ಞಾನ ಸಂಸ್ಥೆ ಯಲ್ಲಿ ಹೊಸ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲು ಆಯೋಜಿಸಿದ್ದ ಪಾರ್ಟಿ ಕೊರೊನಾ ಸೋಂಕಿನ ಹಾಟ್ ಸ್ಪಾಟ್ ಆಗಿ ಪರಿವರ್ತನೆ ಆಗಿಯಾಗಿರುವ ಮಧ್ಯೆಯೇ ನಗರದ ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಿ ೩೩ ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ತಗುಲಿರುವುದು ಆತಂಕಕ್ಕೆ ಎಡೆ ಮಾಡಿದೆ.
ವೈದ್ಯಕೀಯ ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಸೋಂಕಿತರ ಸಂಖ್ಯೆ ೧೮೨ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಕಡಿಮೆಯಾಗಿದ್ದ ಸೋಂಕು ಸಂಖ್ಯೆ ದಿಢೀರ್ ಏರಿಕೆಯಾಗಲು ಹೊಸ ಮಾದರಿಯ ಸೋಂಕು ಇರಬಹುದೇ ಎಂಬುದನ್ನು ಪತ್ತೆ ಮಾಡಲು ಜಿನೋಮ್ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ.
ವೈದ್ಯಕೀಯ ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಪೈಕಿ ೧೮೨ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು ಅದರಲ್ಲಿ ೬೬ ಮಂದಿ ಪೂರ್ಣಪ್ರಮಾಣದಲ್ಲಿ ಲಸಿಕೆ ಪಡೆದವರಿಗೂ ಮತ್ತೆ ಸೋಂಕು ಕಾಣಿಸಿಕೊಂಡಿರುವುದು ಆತಂಕಕ್ಕೆ ಗುರಿಮಾಡಿದೆ.
ವೈದ್ಯಕೀಯ ಕಾಲೇಜಿನ ಪಾರ್ಟಿಯಲ್ಲಿ ಸೋಂಕು ಉಲ್ಬಣವಾದ ಹಿನ್ನೆಲೆಯಲ್ಲಿ ೩೦೦ಮಂದಿ ಪತ್ತೆ ಪರೀಕ್ಷೆ ನಡೆಸಲಾಗಿತ್ತು ಅದರಲ್ಲಿ ೧೮೨ ಮಂದಿಗೆ ಸೋಂಕು ಇರುವುದು ಧೃಡಪಟ್ಟಿದೆ. ಏಕಾಏಕಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಸೋಂಕು ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಹೊಸ ಮಾದರಿಯ ಸೋಂಕು ಪತ್ತೆಯಾಗಿರುವ ಅನುಮಾನ ವ್ಯಕ್ತವಾಗಿದೆ ಹೀಗಾಗಿ ಎಲ್ಲರ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆಯ ಆಯುಕ್ತ ರಣದೀಪ್ ತಿಳಿಸಿದ್ದಾರೆ.
ನವೆಂಬರ್ ೧೭ರಂದು ಹೊಸ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲು ಕಾಲೇಜಿನಲ್ಲಿ ಆಯೋಜಿಸಿದ್ದ ಪಾರ್ಟಿಯಿಂದ ಸೋಂಕು ಹೆಚ್ಚಾಗಲು ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ. ಸೋಂಕಿತ ವಿದ್ಯಾರ್ಥಿಗಳು ಮತ್ತು ಕಾಲೇಜಿನ ಸಿಬ್ಬಂದಿಗಳನ್ನು ಕ್ಯಾಂಪಸ್ ಆವರಣದಲ್ಲಿ ಕ್ವಾಂರಟೈನ್ ಮಾಡಲಾಗಿದೆ. ಜೊತೆಗೆ ಎರಡು ಹಾಸ್ಟೆಲ್‌ಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಸೀಲ್ ಡೌನ್ ಮಾಡಲಾಗಿದೆ.
ಹೊಸದಾಗಿ ಕೊರೊನಾ ಸೋಂಕು ತಗಲಿರುವ ಮಂದಿಯ ಪೈಕಿ ಬಹುತೇಕರು ಸಂಪೂರ್ಣ ಲಸಿಕೆ ಪಡೆದಿದ್ದರೂ ಮತ್ತೆ ಸೋಂಕು ಕಾಣಿಸಿಕೊಂಡಿರುವುದು ಆತಂಕಕ್ಕೆ ಗುರಿ ಮಾಡಿದೆ ಎಂದು ಹುಬ್ಬಳ್ಳಿ-ಧಾರವಾಡ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಯಶವಂತ್ ತಿಳಿಸಿದ್ದಾರೆ.
ಸೋಂಕು ಕಾಣಿಸಿಕೊಂಡಿರುವ ಎಲ್ಲರಿಗೂ ವೈದ್ಯಕೀಯ ಕಾಲೇಜು ಆವರಣದಲ್ಲಿ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
೧೮೨ ಮಂದಿ ವಿದ್ಯಾರ್ಥಿಗಳು ಸಿಬ್ಬಂದಿ ವರ್ಗದಲ್ಲಿ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ವೈದ್ಯಕೀಯ ಕಾಲೇಜಿನಲ್ಲಿರುವ ಎಲ್ಲಾ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಹಾಗೂ ಬೋಧಕ ಬೋಧಕೇತರ ಪರೀಕ್ಷೆ ಮಾಡಿದ್ದು ಮುಂದಾಗಿದ್ದು ವರದಿಗಾಗಿ ಕಾಯಲಾಗುತ್ತಿದೆ ಎಂದು ತಿಳಿಸಲಾಗಿದೆ. ಕರ್ನಾಟಕದಲ್ಲಿ ಕಳೆದ ಕೆಲವು ವಾರಗಳಿಂದ ಕೊರೊನಾ ಸೋಂಕು ಸಂಖ್ಯೆ ಇಳಿಕೆಯಾಗುತ್ತಿದೆ. ಆದರೆ ಧಾರವಾಡದ ವೈದ್ಯಕೀಯ ಕಾಲೇಜಿನಲ್ಲಿ ದಿಡೀರನೆ ಸೋಂಕು ಹೆಚ್ಚಳವಾಗಿರುವುದು ಆತಂಕಕ್ಕೆ ಸಿಲುಕಿಸಿದೆ.
ಬೆಂಗಳೂರು ನಗರದ ಮಹದೇವಪುರ ವಲಯದ ಸರ್ಜಾಪುರ ಬಳಿಯ ದೊಡ್ಡಸಂದ್ರದಲ್ಲಿರುವ ಶಾಲೆಯಲ್ಲಿನ ನಾಲ್ಕು ಮಂದಿ ಸಿಬ್ಬಂದಿ ಹಾಗೂ ೩೩ ವಿದ್ಯಾರ್ಥಿಗಳಿಗೆ ಸೋಂಕು ತಗುಲಿದೆ.
ಆರೋಗ್ಯ ಇಲಾಖೆ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.