ರಾಜ್ಯಕ್ಕೆ ಮತ್ತಷ್ಟು ಲಸಿಕೆ

ಬೆಂಗಳೂರು, ಮಾ. ೨೫- ದೇಶದಲ್ಲಿ ರೂಪಾಂತರಿ ಕೊರೊನಾ ವೈರಸ್ ಅಬ್ಬರ ಹೆಚ್ಚಾಗುತ್ತಿರುವುದರಿಂದ ರಾಜ್ಯದ ಜನ ಎಚ್ಚರಿಕೆ ವಹಿಸಿ ರಾಜ್ಯವನ್ನು ಕೊರೊನಾ ಮುಕ್ತ ಮಾಡಲು ಸಹಕರಿಸಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಮನವಿ ಮಾಡಿದ್ದಾರೆ.
ದೇಶದಲ್ಲಿ ರೂಪಾಂತರಿ ವೈರಸ್ ವೇಗವಾಗಿ ಹರಡುತ್ತಿದ್ದು ೭೦೦ಕ್ಕೂ ಹೆಚ್ಚು ಜನರಲ್ಲಿ ಕಾಣಿಸಿಕೊಂಡಿದೆ. ಹೀಗಾಗಿ ಜನ ಇನ್ನೆರಡು ತಿಂಗಳ ಕಾಲ ಎಚ್ಚರಿಕೆಯಿಂದ ಇರಬೇಕು. ಕೆಮ್ಮೆ, ನೆಗಡಿ ಕಾಣಿಸಿಕೊಂಡರೆ ನಿರ್ಲಕ್ಷ್ಯ ಮಾಡದೆ ತಕ್ಷಣ ಆಸ್ಪತ್ರೆಗೆ ಹೋಗಿ ಕೊರೊನಾ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.
ರಾಜ್ಯಕ್ಕೆ ನಿನ್ನೆ ತಡರಾತ್ರಿ ೨ ಲಕ್ಷ ಡೋಸ್ ಕೊರೊನಾ ಲಸಿಕೆ ಬಂದಿದೆ. ಇನ್ನು ಈ ವಾರದೊಳಗೆ ೧೨ ಲಕ್ಷ ಡೋಸ್ ಲಸಿಕೆ ಬರಲಿದೆ. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಲಸಿಕೆ ಕೊರತೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಟ್ವೀಟರ್‌ನಲ್ಲಿ ಹೇಳಿದ್ದಾರೆ.
ರಾಜ್ಯದ ಎಲ್ಲ ಅರ್ಹ ನಾಗರಿಕರು ಕೂಡಲೇ ನೋಂದಣಿ ಮಾಡಿಕೊಂಡು ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಮನವಿ ಮಾಡಿರುವ ಅವರು, ಕಳೆದ ವರ್ಷ ಕೊರೊನಾ ವೈರಾಣುವಿನ ಮೊದಲ ಅಲೆ ಅಪ್ಪಳಿಸಿದಾಗ ಲಸಿಕೆ ನಮಗೆ ಒಂದು ಆಶಾ ಕಿರಣವಾಗಿತ್ತು. ಆದರೆ ಅದು ಈಗ ವಾಸ್ತವವಾಗಿದೆ. ಹಾಗಾಗಿ ಪ್ರತಿಯೊಬ್ಬರು ಲಸಿಕೆ ಹಾಕಿಸಿಕೊಂಡು ರಾಜ್ಯವನ್ನು ಕೊರೊನಾಮುಕ್ತ ರಾಜ್ಯ ಮಾಡೋಣ ಎಂದು ಅವರು ಹೇಳಿದ್ದಾರೆ
ಪ್ರತಿಯೊಬ್ಬರು ತಮ್ಮ ಮನೆಯಲ್ಲಿ, ನೆರೆ ಹೊರೆಯಲ್ಲಿ, ಸ್ನೇಹಿತರಲ್ಲಿ, ಬಂಧು ಬಳಗದಲ್ಲಿ ಎಲ್ಲ ಅರ್ಹ ವ್ಯಕ್ತಿಗಳಿಗೆ ಅದರಲ್ಲೂ ವಿಶೇಷವಾಗಿ ಹಿರಿಯ ನಾಗರಿಕರಿಗೆ ಮತ್ತು ವಿವಿಧ ರೋಗಗಳಿಂದ ಬಳಲುತ್ತಿರುವವರಿಗೆ ಲಸಿಕೆ ಪಡೆಯಲು ಅರಿವು ಮೂಡಿಸಿ, ಪ್ರೋತ್ಸಾಹಿಸಿ ಸಹಾಯ ಮಾಡುವಂತೆಯೂ ಸುಧಾಕರ್ ಟ್ವೀಟರ್‌ನಲ್ಲಿ ಕೋರಿದ್ದಾರೆ.
ಎಲ್ಲ ಅರ್ಹ ವ್ಯಕ್ತಿಗಳು ಆರೋಗ್ಯ ಸೇತು ಆಪ್ ಮೂಲಕ ನೋಂದಣಿ ಮಾಡಿಸಿಕೊಂಡು ಹತ್ತಿರದ ಲಸಿಕಾ ಕೇಂದ್ರಕ್ಕೆ ಹೋಗಿ ಲಸಿಕೆ ಪಡೆಯಬೇಕು. ಲಸಿಕೆ ಪಡೆದುಕೊಳ್ಳುವ ವ್ಯಕ್ತಿ ತಾನು ಸೋಂಕಿನಿಂದ ಸುರಕ್ಷಿತವಾಗುವ ಜತೆಗೆ ಇತರರ ಸುರಕ್ಷಿತೆಗೆ ಸಹಕಾರಿಯಾಗುವುದರಿಂದ ಲಸಿಕೆ ಪಡೆಯುವುದು ನಮ್ಮ ಸುರಕ್ಷತೆ ಜತೆಗೆ ಒಂದು ಸಾಮಾಜಿಕ, ಸಾಮೂಹಿಕ ಜವಾಬ್ದಾರಿ ಆಗಿದೆ ಎಂದು ಅವರು ಟ್ವೀಟರ್‌ನಲ್ಲಿ ಹೇಳಿದ್ದಾರೆ.
ಕೊರೊನಾ ಲಸಿಕೆ ಬರುವ ಮುನ್ನ ಮುಂಪ್ಸ್ ವೈರಸ್‌ಗೆ ನಾಲ್ಕು ವರ್ಷದಲ್ಲಿ ಲಸಿಕೆ ಕಂಡು ಹಿಡಿದಿದ್ದೆ ಕಡಿಮೆ ಅವಧಿಯಲ್ಲಿ ಲಸಿಕೆ ಕಂಡು ಹಿಡಿದ ಸಾಧನೆಯಾಗಿತ್ತು.ಈಗ ಒಂದು ವರ್ಷದೊಳಗೆ ಕೊರೊನಾಗೆ ಲಸಿಕೆ ಕಂಡು ಹಿಡಿಯಲಾಗಿದೆ. ಇದರ ಹಿಂದೆ ನಮ್ಮ ವಿಜ್ಞಾನಿಗಳ ಅಚಲ ತಪಸ್ಸು, ಕಠಿಣ ಪರಿಶ್ರಮ ನಿರಂತರ ಪ್ರಯತ್ನಗಳಿವೆ. ಹಾಗಾಗಿ ಇಂತಹ ಕಠಿಣ ಪರಿಶ್ರಮದ ಪ್ರತಿಫಲವಾದ ಲಸಿಕೆ ನಮಗೆ ದೊರೆತಿರುವಾಗ ಅದರ ಲಾಭ ಪಡೆಯುವುದು ನಮ್ಮೆಲ್ಲರ ಕರ್ತವ್ಯ ಎಂದು ಸುಧಾಕರ್ ಹೇಳಿದ್ದಾರೆ.
ಯಬೊಲಾ ವೈರಸ್‌ಗೆ ಲಸಿಕೆ ಕಂಡು ಹಿಡಿಯಲು ೨೦ ವರ್ಷ ಕಾಯಬೇಕಾಯಿತು. ಹಾಗೆಯೇ ರೊಟಾ ವೈರಸ್‌ಗೆ ಲಸಿಕೆ ಸಿಗಲು ೨೯ ವರ್ಷ ಬೇಕಾಯಿತು ಎಂಬುದನ್ನು ಟ್ವೀಟರ್‌ನಲ್ಲಿ ನೆನಪು ಮಾಡಿದ ಅವರು ಎಲ್ಲರೂಲಸಿಕೆ ಪಡೆದು ಒಗ್ಗಟ್ಟಿನಿಂದ ಕರ್ನಾಟವನ್ನು ಕೊರೊನಾ ಮುಕ್ತ ಮಾಡೋಣ ಎಂದು ಹೇಳಿದ್ದಾರೆ.

ಮ್ಯಾಟರ್‌ಗೆ ಸ್ಟಮಕ್
ರಾಜ್ಯದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸಿನಿಮಾ ಮಂದಿರಗಳಲ್ಲಿ ಶೇ. ೫೦ ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡುವ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಠಿಣ ಕ್ರಮಗಳ ಜಾರಿ ಅವಶ್ಯ. ಹಾಗಾಗಿ ಸಿನಿಮಾ ಮಂದಿರಗಳಲ್ಲಿ ಶೇ. ೫೦ ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡುವ ಸಂಬಂಧ ಇಂದು ಮುಖ್ಯಮಂತ್ರಿಗಳೊಂದಿಗೆಚರ್ಚಿಸಿ ತೀರ್ಮಾನ ಮಾಡುವುದಾಗಿ ಅವರು ಹೇಳಿದರು.
ಕೊರೊನಾ ಸೊಂಕು ತಡೆಯಲು ಕಠಿಣ ಕ್ರಮಗಳನ್ನು ಜಾರಿ ಮಾಡಲಾಗಿದೆ. ಮಾಸ್ಕ್ ಧರಿಸದವರಿಗೆ ದಂಡ ವಿಧಿಸಲು ಆದೇಶ ಹೊರಡಿಸಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಮಾಸ್ಕ್ ಹಾಕದವರಿಗೆ ೨೫೦ ರೂ. ದಂಡ, ಗ್ರಾಮೀಣ ಭಾಗದಲ್ಲಿ ಮಾಸ್ಕ್ ಹಾಕದವರಿಗೆ ೧೦೦ ರೂ. ದಂಡ ವಿಧಿಸಲಾಗುತ್ತಿದೆ. ಹಾಗೆಯೇ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಮಾಲ್, ಹೋಟೆಲ್, ಕಲ್ಯಾಣ ಮಂಟಪಗಳು, ಸಭಾಂಗಣಗಳು,ಸ್ಟಾರ್ ಹೋಟೆಲ್‌ಗಳು, ಸಾರ್ವಜನಿಕ ಸಭೆಗಳ ಆಯೋಜಕರಿಗೂ ದಂಡ ವಿಧಿಸಲಾಗುವುದು ಎಂದು ಅವರು ಹೇಳಿದರು.
ಕೊರೊನಾ ಸುರಕ್ಷತಾ ಕ್ರಮಗಳನ್ನು ಪಾಲಿಸದ ಅಂಗಡಿ ಮುಂಗಟ್ಟುಗಳು, ಮಾಲ್, ಹೋಟೆಲ್‌ಗಳು, ಸಭಾಂಗಣ ಮತ್ತು ಕಲ್ಯಾಣ ಮಂಟಪದ ಮಾಲೀಕರಿಗೆ ೫ ಸಾವಿರ ರೂ., ಹವಾನಿಯಂತ್ರಿತ ಸಭಾಂಗಣ, ಸ್ಟಾರ್ ಹೋಟೆಲ್ ಹಾಗೂ ಸಾರ್ವಜನಿಕ ಸಭೆಗಳ ಆಯೋಜಕರಿಗೆ ಸುರಕ್ಷತಾ ಕ್ರಮಗಳನ್ನು ಉಲ್ಲಂಘಿಸಿದರೆ ೧೦ ಸಾವಿರ ರೂ. ದಂಡ ವಿಧಿಸಲಾಗುವುದು ಎಂದು ಸುಧಾಕರ್ ಹೇಳಿದರು.