ರಾಜ್ಯಕ್ಕೆ ಬಂದ 7.95 ಲಕ್ಷ ಲಸಿಕೆ

ಬೆಂಗಳೂರು, ಜ. ೧೨- ರಾಜ್ಯಕ್ಕೆ ಇಂದು ಮೊದಲ ಹಂತದಲ್ಲಿ ೭.೯೫ ಲಕ್ಷ ಕೋವಿಶೀಲ್ಡ್ ಲಸಿಕೆ ಬಂದಿದ್ದು, ಲಸಿಕೆ ಸಂಗ್ರಹ, ನೀಡಿಕೆಗೆ ಎಲ್ಲಾ ವ್ಯವಸ್ಥೆ ಆಗಿದೆ. ಲಸಿಕೆ ಸುರಕ್ಷಿತವಾಗಿದ್ದು, ಯಾವುದೇ ಅಡ್ಡಪರಿಣಾಮಗಳು ಉಂಟಾಗುವುದಿಲ್ಲ. ಈ ಬಗ್ಗೆ ಜನರು ಆತಂಕ ಪಡಬೇಕಾಗಿಲ್ಲ ಎಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರು ಹೇಳಿದರು.
ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದ ಔಷಧ ನಿಯಂತ್ರಣ ನಿರ್ದೇಶಕರು ಕೋವಿಶೀಲ್ಡ್ ಲಸಿಕೆ ಖರೀದಿಗೆ ಅನುಮತಿ ನೀಡಿದ್ದು, ಅದರಂತೆ, ಕೇಂದ್ರ ಸರ್ಕಾರ ಮೊದಲ ಹಂತದಲ್ಲಿ ೧.೧ ಕೋಟಿ ಡೋಸ್ ಲಸಿಕೆ ಖರೀದಿಸಿದೆ. ಈ ಲಸಿಕೆ ಖರೀದಿಗೆ ೨೩೧ ಕೋಟಿ ರೂ. ವೆಚ್ಚವಾಗಿದೆ ಎಂದರು.
ಕೋವಿಶೀಲ್ಡ್ ಲಸಿಕೆಯನ್ನು ಅತ್ಯಂತ ಕಡಿಮೆ ಬೆಲೆಗೆ ಅಂದರೆ, ಒಂದು ಡೋಸ್ ಗೆ ೨೧೦ ರೂ. ಗೆ ಖರೀದಿಸಲಾಗಿದೆ. ಇದರಲ್ಲಿ ಜಿಎಸ್‌ಟಿಯೂ ಸೇರಿದೆ ಎಂದರು. ರಾಜ್ಯಕ್ಕೆ ಇಂದು ೭.೯೫ ಲಕ್ಷ ಕೋವಿಶೀಲ್ಡ್ ಲಸಿಕೆ ಬಂದಿದ್ದು, ಅದನ್ನು ನಗರದ ಆನಂದ್ ರಾವ್ ವೃತ್ತದಲ್ಲಿರುವ ರಾಜ್ಯ ಲಸಿಕೆ ದಾಸ್ತಾನು ಕೇಂದ್ರದಲ್ಲಿ ಸಂಗ್ರಹಿಸಲಾಗುವುದು. ಅಲ್ಲಿಂದ ಲಸಿಕಾ ಕೇಂದ್ರಗಳಿಗೆ ಲಸಿಕೆಯನ್ನು ಸಾಗಾಣೆ ಮಾಡಲಾಗುವುದು ಎಂದರು.
ಒಂದು ಲಸಿಕೆ ವೈಲ್ ನಲ್ಲಿ ೫ ಎಂ ಎಲ್ ಲಸಿಕೆ ಇರುತ್ತದೆ. ಪ್ರತಿಯೊಬ್ಬರಿಗೂ ೦.೫ ಎಂ ಎಲ್ ಲಸಿಕೆಯ ಡೋಸ್ ಅನ್ನು ನೀಡಲಾಗುತ್ತದೆ. ಒಂದು ವೈಲ್ ಲಸಿಕೆಯನ್ನು ೧೦ ಜನರಿಗೆ ನೀಡಬಹುದಾಗಿದೆ ಎಂದರು.
ಲಸಿಕೆಯ ಮೊದಲ ಡೋಸ್ ತೆಗೆದುಕೊಂಡ ನಂತರ, ೨೮ ದಿನದ ಬಳಿಕ ೨ನೇ ಡೋಸ್ ಲಸಿಕೆ ತೆಗೆದುಕೊಳ್ಳಬೇಕು. ಇದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗಿ ಕೊರೊನಾಗೆ ಪ್ರತಿರೋಧ ಶಕ್ತಿ ದೇಹದಲ್ಲಿ ಉತ್ಪತ್ತಿಯಾಗುತ್ತದೆ. ಲಸಿಕೆಗಳು ಸಂಪೂರ್ಣ ಸುರಕ್ಷಿತವಾಗಿದೆ. ಯಾವುದೇ ಅಡ್ಡಪರಿಣಾಮ ಇಲ್ಲ. ಯಾರೂ ಭಯಬೀಳಬೇಕಾಗಿಲ್ಲ ಎಂದರು.
ಲಸಿಕೆಯ ಸಂಗ್ರಹ, ಲಸಿಕೆ ನೀಡಿಕೆ ಎಲ್ಲವೂ ಪಾರದರ್ಶಕವಾಗಿ ನಡೆಯಲಿದೆ. ಲಸಿಕೆ ನೀಡಿಕೆ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಲಾಗುತ್ತದೆ. ಆರಂಭದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡುತ್ತೇವೆ. ನಂತರ, ೫೦ ವರ್ಷ ಮೀರಿದ ವಿವಿಧ ರೋಗಗಳಿಂದ ಬಳಲುತ್ತಿರುವವರಿಗೆ ಲಸಿಕೆ ನೀಡಲಾಗುವುದು ಎಂದರು.
ಪ್ರಧಾನಿ ಮೋದಿ ಅವರು ಹೇಳಿದಂತೆ, ಕೊರೊನಾ ವಾರಿಯರ್ಸ್ ಮೊದಲು ಲಸಿಕೆ, ನಂತರ ಚುನಾಯಿತ ಪ್ರತಿನಿಧಿಗಳು ಎಂದಿದ್ದಾರೆ. ಅವರ ಆದೇಶ ಪಾಲಿಸುವುದಾಗಿ ಹೇಳಿದರು.