ರಾಜ್ಯಕ್ಕೆ ಏನೆಲ್ಲಾ ನೀಡಿದ ಜಿಲ್ಲೆಗೆ ಏಮ್ಸ್ ನೀಡಲೇಬೇಕು ಎನ್ನುವುದು ಈ ಭಾಗದ ಜನರ ಆಗ್ರಹ – ಬಾಬು ಭಂಡಾರಿಗಲ್

೫ ನೇ ಸಾಹಿತ್ಯ ಸಮ್ಮೇಳನ ಅದ್ಧೂರಿ ಉದ್ಘಾಟನೆ : ರಾಜಕೀಯ ಇಚ್ಛಾಶಕ್ತಿಯ ಕೊರತೆ ಹಿಂದುಳುವಿಕೆಗೆ ಕಾರಣ
ರಾಯಚೂರು.ನ.೦೫- ಜಿಲ್ಲೆಯಿಂದ ರಾಜ್ಯ ಮತ್ತು ರಾಜ್ಯ ಸರ್ಕಾರಕ್ಕೆ ಏನೆಲ್ಲಾ ನೀಡುವ ಜಿಲ್ಲೆಗೆ ಏಮ್ಸ್ ನೀಡಬೇಕೆಂಬ ಬೇಡಿಕೆ ಸರ್ಕಾರ ಈಡೇರಿಸಬೇಕು. ಇದು ಕೇವಲ ಮನವಿಯಲ್ಲ. ಈ ಭಾಗದ ಜನರ ಪರ ನನ್ನ ಆಗ್ರಹ ಎಂದು ೫ ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಬಾಬು ಭಂಡಾರಿಗಲ್ ಅವರು ಹೇಳಿದರು.
ಅವರಿಂದು ನಗರದ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದ ಖ್ಯಾತ ಸಾಹಿತಿ ಡಾ.ಶಾಂತರಸ ಅವರ ವೇದಿಕೆಯಿಂದ ಮಾತನಾಡುತ್ತಾ, ಕಳೆದ ೫ ತಿಂಗಳುನಿಂದ ನಿರಂತರವಾಗಿ ಏಮ್ಸ್ ಹೋರಾಟ ನಡೆಯುತ್ತಿದೆ. ಏಮ್ಸ್ ಮಂಜೂರಾತಿಗಾಗಿ ನಾವು ಸರ್ಕಾರಕ್ಕೆ ನಿರಂತರ ಮನವಿ ಮಾಡುತ್ತಿದ್ದೇವೆ. ಇಂದಿನಿಂದಲೂ ಜಿಲ್ಲೆ, ರಾಜ್ಯ ಸರ್ಕಾರಕ್ಕೆ ಏನೆಲ್ಲ ಸೌಕರ್ಯ ಕೊಡುತ್ತಲೆ ಬಂದಿದೆ. ಏಮ್ಸ್ ಬೇಡಿಕೆ ಮುಂದಿಟ್ಟು ನಡೆಯುತ್ತಿರುವ ಹೋರಾಟಕ್ಕೆ ಸ್ಪಂದಿಸುವ ಮೂಲಕ ಸರ್ಕಾರ ಏಮ್ಸ್ ಮಂಜೂರಿ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಐತಿಹಾಸಿಕ ನೈಸರ್ಗಿಕ ಮತ್ತು ಸಾಹಿತ್ಯ ಸಾಂಸ್ಕೃತಿಕವಾಗಿ ಅದೆಷ್ಟೋ ಶ್ರೀಮಂತವಾಗಿದ್ದರೂ, ಸಾಮಾಜಿಕ, ಆರ್ಥಿಕ ಅಭಿವೃದ್ಧಿಯಲ್ಲಿ ಹಿಂದುಳಿದ್ದೇವೆ ಎನ್ನುವುದು ಅಷ್ಟೆ ಸತ್ಯವಾಗಿದೆ. ರಾಜಕೀಯ ಇಚ್ಛಾಶಕ್ತಿ ಕೊರತೆ ಈ ಹಿಂದುಳುದಿರುವಿಕೆಗೆ ಕಾರಣವಾಗಿದೆ. ಕನ್ನಡದ ಭಾಷೆ ಮತ್ತು ಸಾಹಿತ್ಯ ಅಪಾರ ಇತಿಹಾಸ ಹೊಂದಿದೆ. ರಾಜ್ಯೋತ್ಸವ ಮಾಸದಲ್ಲಿ ಈ ಸಮ್ಮೇಳನ ನಡೆಯುತ್ತಿರುವುದು ಸಂತಸ ಮೂಡಿಸುತ್ತದೆ. ನಾವು ಕೇವಲ ನವೆಂಬರ್ ಕನ್ನಡಿಗರಾಗದೆ, ನಿತ್ಯ ಕನ್ನಡಿಗರಾಗಬೇಕು. ಸಾಹಿತ್ಯ ಎನ್ನುವುದನ್ನು ವಿಶಾಲ ಅರ್ಥದಲ್ಲಿ ಆಲೋಚಿಸುವ ಮೂಲಕ ಎಲ್ಲಕ್ಕಿಂತ ಬದುಕು ದೊಡ್ಡದಾಗಿದೆ. ಅದರ ಉನ್ನತಿಗೆ ಭಾಷೆ ಮತ್ತು ಸಾಹಿತ್ಯದ ಕೊಡುಗೆ ಅಪಾರವಾಗಿದೆ.
ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಹೇಳಿದ ಮಾತು ಅತ್ಯಂತ ಪ್ರಸ್ತುತವಾಗಿದೆ. ‘ಇತಿಹಾಸವನ್ನು ಅರಿಯದವರು ಇತಿಹಾಸ ನಿರ್ಮಿಸಲಾರರು‘ ಎನ್ನುವ ಪ್ರಜ್ಞೆಯೊಂದಿಗೆ ನಮ್ಮ ಇತಿಹಾಸದ ಸಮಗ್ರತೆಯ ಮೂಲಕ ನಾವು ಮುಂದುವರೆಯಬೇಕಾಗಿದೆ. ‘ಮನುಷ್ಯ ಜಾತಿ ತಾನೊಂದೇ ವಲಂ‘ ಎನ್ನುವ ಆದಿ ಪಂಪನ ಮಾತು ಭಾರತೀಯ ಐಕ್ಯತೆಗೆ ಪ್ರತೀಕವಾಗಿದೆ. ಎಲ್ಲರೂ ಒಗ್ಗಟ್ಟಿನಿಂದ ಕೂಡಿ ಬಾಳಿದರೆ ಶಾಂತಿ, ನೆಮ್ಮದಿ ಸಮಾಜದ ಭಾಗವಾಗುತ್ತದೆ.
ಕೃಷ್ಣಾ, ತುಂಗಭದ್ರಾ ನದಿಗಳ ಮಧ್ಯೆ ಇರುವ ಜಿಲ್ಲೆಯನ್ನು ದೋಹಬ್ ಪ್ರದೇಶವೆಂದು, ಎಡದೊರೆ ನಾಡೆಂದು ಅಭಿಮಾನದಿಂದ ಕರೆಯಲಾಗುತ್ತದೆ. ಅನೇಕ ಸಂಸ್ಥಾನಗಳು ಈ ನಾಡನ್ನು ಕಟ್ಟಿಬೆಳೆಸಲಾಗಿದೆ. ದಾಸರು, ಶರಣರು, ಸೂಫಿ ಸಂತರು, ಹುಟ್ಟಿ ತಮ್ಮ ತಮ್ಮ ಅಮೂಲ್ಯ ಕೊಡುಗೆಗಳನ್ನು ಕೊಟ್ಟಿದ್ದಾರೆ. ಅವರು ಬಿಟ್ಟು ಹೋದ ನೈತಿಕ ಮೌಲ್ಯಗಳು, ವೈಚಾರಿಕ ಪ್ರಖಾರತೆ ಮತ್ತು ಶಾಂತಿ, ಸಂದೇಶಗಳು ನಮ್ಮ ಮಧ್ಯೆ ಮುಂದುವರೆಯುತ್ತಿರುವುದು ಸಂತಸದ ಸಂಗತಿಯಾಗಿದೆ.
ಸ್ವಾಭಿಮಾನ ಬದುಕು ಕಲಿಸಿದ ನನ್ನ ತಂದೆ ಹುಸೇನಪ್ಪ, ತಾಯಿ ಸಾಬಮ್ಮ ಅವರ ಆಶೀರ್ವಾದದೊಂದಿಗೆ ಬೆಳೆದ ನನಗೆ ಬಂಡಾಯ ಸಾಹಿತ್ಯ ಮಾರ್ಗದರ್ಶಕರಾದದ್ದು, ಜಂಬಣ್ಣ ಅಮರಚಿಂತ ಮತ್ತು ಚಣ್ಣನ್ನ ವಾಲಿಕಾರ ಎಂದು ಹೇಳಿದ ಅವರು, ಸಾಹಿತ್ಯ ಎನ್ನುವುದು ಬರೆಯುವುದು ಪುಸ್ತಕಗಳ ಸಂಖ್ಯೆಗೆ ಮಾತ್ರವಲ್ಲ. ಅದು ಬದುಕಿನ ಹೋರಾಟವಾಗಬೇಕು ಎನ್ನುವ ಭಾವನೆಯೊಂದಿಗೆ ಬೆಳೆಯುತ್ತ ಹೋರಾಟಕ್ಕೆ ಹೆಚ್ಚಿನ ಆದ್ಯತೆ ನೀಡುವುದರೊಂದಿಗೆ ಜನ ಜಾಗೃತಿ ಅಸ್ಪೃಶ್ಯತೆ ವಿರುದ್ಧ ಧ್ವನಿಯಾಗಿ, ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಅವಶ್ಯಕತೆಗಳಿಗೆ ಅನುಗುಣವಾಗಿ ಹಾಡು, ಕವಿತೆ ರಚಿಸಿ, ಹಾಡುತ್ತಾ ಬರುವುದು ಅಂದಿನ ಸಾಮಾಜಿಕ ತಲ್ಲಣಗಳಿಗೆ ಅನಿವಾರ್ಯವಾಗಿತ್ತು ಎಂದು ಹೇಳಿದರು.
ವೇದಿಕೆ ಸಾನಿಧ್ಯವನ್ನು ಕಿಲ್ಲೆ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯ ಸ್ವಾಮಿಗಳು ವಹಿಸಿದ್ದರು. ಉದ್ಘಾಟಕರಾದ ಕುಂ.ವೀರಭದ್ರಪ್ಪ, ಶಾಸಕ ಡಾ.ಶಿವರಾಜ ಪಾಟೀಲ್, ನಗರಸಭೆ ಅಧ್ಯಕ್ಷರಾದ ಲಲಿತಾ ಕಡಗೋಳ ಆಂಜಿನೇಯ್ಯ, ಉಪಾಧ್ಯಕ್ಷರಾದ ನರಸಮ್ಮ ನರಸಿಂಹಲು ಮಾಡಗಿರಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ತಿಮ್ಮಪ್ಪ ನಾಡಗೌಡ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ರಂಗಣ್ಣ ಅಳ್ಳುಂಡಿ, ಜಯಲಕ್ಷ್ಮೀ ಮಂಗಳಮೂರ್ತಿ, ತಾಲೂಕಾಧ್ಯಕ್ಷರಾದ ವೆಂಕಟೇಶ ಬೇವಿನಬೆಂಚಿ, ಜಿ.ಸುರೇಶ, ಅಯ್ಯಪ್ಪಯ್ಯಹುಡಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.