ರಾಜ್ಯಕ್ಕೆ ಇನ್ನೆರಡು ವಂದೇಭಾರತ್

ಅಹಮದಾಬಾದ್,ಮಾ.೧೨- ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ, ಕರ್ನಾಟಕದ ಕಲಬುರಗಿ-ಬೆಂಗಳೂರು, ಮೈಸೂರು-ಡಾ. ಎಂಜಿಆರ್ ಸೆಂಟ್ರಲ್ ಚೆನ್ನೈ ಮತ್ತು ತಿರುವನಂತಪುರಂನಿಂದ ಮಂಗಳೂರುವರೆಗೆ ವಿಸ್ತರಿಸಿದ ರೈಲು ಸೇರಿದಂತೆ ೧೦ ಹೊಸ ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಹಸಿರು ನಿಶಾನೆ ತೋರುವ ಮೂಲಕ ಕಳೆದ ೧೦ ವರ್ಷಗಳ ಅಭಿವೃದ್ಧಿ ಟ್ರೈಲರ್ ಅಷ್ಟೇ, ಮಾಡಬೇಕಾಗಿರುವುದು ಇನ್ನೂ ಸಾಕಷ್ಟು ಬಾಕಿ ಇದೆ ಎಂದಿದ್ಧಾರೆ.
ಇದರ ಜೊತೆಗೆ ದೇಶದ ವಿವಿಧ ಭಾಗಗಳಲ್ಲಿನ ೮೫ ಸಾವಿರ ಕೋಟಿ ರೂಪಾಯಿಗಳ ರೈಲ್ವೆ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ದೇಶದಲ್ಲಿ ರೈಲು ಸಂಪರ್ಕ ಕ್ಷೇತ್ರದಲ್ಲಿ ಹೊಸ ಭಾಷ್ಯ ಬರೆದಿದ್ದಾರೆ.ಅಹಮದಾಬಾದ್‌ನ ಸಬರಮತಿ ರೈಲು ನಿಲ್ದಾಣದಲ್ಲಿ ವರ್ಚುವಲ್ ಮೂಲಕ ದೇಶದ ವಿವಿಧ ಭಾಗಗಳ ೧೦ ವಂದೇ ಭಾರತ್ ರೈಲಿಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ “ನಾನು ನನ್ನ ಜೀವನವನ್ನು ರೈಲ್ವೆ ಹಳಿಗಳ ಮೇಲೆ ಪ್ರಾರಂಭಿಸಿದೆ. ಹಾಗಾಗಿ ರೈಲ್ವೆ ಸಂಪರ್ಕ ಎಷ್ಟು ಕೆಟ್ಟದಾಗಿದೆ ಎನ್ನುವುದು ನನಗೆ ತಿಳಿದಿದೆ. ಹೀಗಾಗಿಯೇ ಕಳೆದ ೧೦ ವರ್ಷಗಳಲ್ಲಿ ಕೇಂದ್ರ ಸರ್ಕಾರ ರೈಲ್ವೆ ಅಭಿವೃದ್ಧಿಗೆ ಹಿಂದಿನ ಸರ್ಕಾರಕ್ಕಿಂತಲೂ ೬ ಪಟ್ಟು ಹೆಚ್ಚು ಹಣವನ್ನು ಖರ್ಚು ಮಾಡಿದೆ ಎಂದು ಹೇಳಿದ್ದಾರೆ.ಈ ಹಿಂದೆ ಮಂಡಿಸಲಾಗುತ್ತಿದ್ದ ಪ್ರತ್ಯೇಕ ರೈಲ್ವೆ ಬಜೆಟ್ ನಿಲ್ಲಿಸಿದೆವು. ಅದನ್ನು ಕೇಂದ್ರ ಬಜೆಟ್‌ನಲ್ಲಿ ಸೇರಿಸಿದೆವು. ಇದರಿಂದ ಸರ್ಕಾರದ ಹಣವನ್ನು ರೈಲ್ವೆ ಅಭಿವೃದ್ಧಿಗೆ ಬಳಸಬಹುದಾಗಿದೆ.ಮಾಡುವ ಅಭಿವೃದ್ಧಿ ಕೆಲಸಗಳು ಚುನಾವಣೆ ಗೆಲ್ಲಲು ಮಾತ್ರ ಅಲ್ಲ, ರಾಷ್ಟ್ರದ ಪ್ರಗತಿಯ ದೃಷ್ಟಿಕೋನ ಹೊಂದಿರುತ್ತದೆ ಎಂದು ಹೇಳಿದ್ದಾರೆ.
೧೦ ವರ್ಷಗಳ ಅಭಿವೃದ್ಧಿ ಟ್ರೈಲರ್ ಮಾತ್ರ:
ಹತ್ತು ವರ್ಷಗಳಲ್ಲಿ ದೇಶದಲ್ಲಿ ಮಾಡಿರುವ ಅಭಿವೃದ್ಧಿ ಬರೀ ಟ್ರೈಲರ್ ಮಾತ್ರ. ಇನ್ನು ಮಾಡಬೇಕಾಗಿರುವುದು ಬಹಳಷ್ಟು ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ
ಭಾರತ ಯುವ ದೇಶವಾಗಿದೆ, ಇಲ್ಲಿ ಹೆಚ್ಚಿನ ಯುವಜನತೆ ನೆಲೆಸಿದ್ದಾರೆ, ಯುವ ಜನರ ಉಜ್ವಲ ಭವಿಷ್ಯ.ಸ್ವಾತಂತ್ರ್ಯದ ನಂತರ ಬಂದ ಸರ್ಕಾರಗಳು ರಾಜಕೀಯ ಸ್ವಾರ್ಥಕ್ಕೆ ಆದ್ಯತೆ ನೀಡಿದವು. ಅದಕ್ಕೆ ಭಾರತೀಯ ರೈಲ್ವೇ ಅದಕ್ಕೆ ಬಲಿಪಶುವಾಗಿದೆ.ತಾವು
ಅಧಿಕಾರಕ್ಕೆ ವಹಿಸಿಕೊಂಡ ನಂತರ ಮಾಡಿದ ಮೊದಲ ಕೆಲಸವೆಂದರೆ ರೈಲ್ವೆಯನ್ನು ಸರ್ಕಾರದ ಬಜೆಟ್‌ಗೆ ಸೇರಿಸಿದ್ದು ಎಂದರು
“ವಿಕಸಿತ ಭಾರತ’ ಕ್ಕಾಗಿ ಹಲವು ಸುಧಾರಣೆ ಕೈಗೊಳ್ಳಲಾಗುತ್ತಿದೆ ಮತ್ತು ದೇಶದ ಪ್ರತಿಯೊಂದು ಭಾಗದಲ್ಲೂ ಹಲವಾರು ಯೋಜನೆಗಳನ್ನು ಉದ್ಘಾಟಿಸಲಾಗುತ್ತಿದೆ. ೨೦೨೪ ರಲ್ಲಿ ಸುಮಾರು ೭೫ ದಿನಗಳಲ್ಲಿ ೧೧ ಲಕ್ಷ ಕೋಟಿ ಮೊತ್ತದ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದಿದ್ಧಾರೆ
ಪ್ಯಾಸೆಂಜರ್ ರೈಲಿಗೂ ಚಾಲನೆ:
ಅಸನ್ಸೋಲ್ ಮತ್ತು ಹಟಿಯಾ, ತಿರುಪತಿ ಮತ್ತು ಕೊಲ್ಲಂ ನಿಲ್ದಾಣಗಳನ್ನು ಸಂಪರ್ಕಿಸುವ ಎರಡು ಹೊಸ ಪ್ಯಾಸೆಂಜರ್ ರೈಲುಗಳಿಗೂ ಪ್ರಧಾನಿ ನರೇಂದ್ರ ಮೋದಿ ಅವರು ಹಸಿರು ನಿಶಾನೆ ತೋರಿದರು.ವಿವಿಧ ರೈಲು ನಿಲ್ದಾಣಗಳಲ್ಲಿ ೫೦ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರಗಳನ್ನು ಲೋಕಾರ್ಪಣೆ ಮಾಡಿದರು. ಈ ಕೇಂದ್ರಗಳು ಜನರಿಗೆ ಕೈಗೆಟಕುವ ಮತ್ತು ಗುಣಮಟ್ಟದ ಜೆನೆರಿಕ್ ಔಷಧಗಳನ್ನು ನೀಡಲಿವೆ. ಪ್ರಧಾನಿಯವರು ದೇಶಕ್ಕೆ ೫೧ ಗತಿ ಶಕ್ತಿ ಮಲ್ಟಿ-ಮೋಡಲ್ ಕಾರ್ಗೋ ಟರ್ಮಿನಲ್‌ಗಳನ್ನು ಸಮರ್ಪಿಸಿದ್ದಾರೆ.

೧೦ ವಂದೇ ಭಾರತ್ ಎಲ್ಲೆಲ್ಲಿಗೆ ರೈಲು
ಕರ್ನಾಟಕದ ಕಲಬುರಗಿ-ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು, ಅಹಮದಾಬಾದ್-ಮುಂಬೈ ಸೆಂಟ್ರಲ್, ಸಿಕಂದರಾಬಾದ್-ವಿಶಾಖಪಟ್ಟಣಂ, ಮೈಸೂರು-ಡಾ ಎಂಜಿಆರ್ ಸೆಂಟ್ರಲ್ -ಚೆನ್ನೈ, ಪಾಟ್ನಾ-ಲಖನೌ, ನ್ಯೂ ಜಲಪೈಗುರಿ-ಪಾಟ್ನಾ, ಪುರಿ-ವಿಶಾಖಪಟ್ಟಣಂ, ಲಖನೌ-ಡೆಹ್ರಾಡೂನ್, ರಾಂಚಿ-ವಾರಣಾಸಿ ಮತ್ತು ಖಜುರಾಹೊ- ದೆಹಲಿ ನಿಜಾಮುದ್ದೀನ್ ನಡುವಿನ ೧೦ ಹೊಸ ವಂದೇ ಭಾರತ್ ರೈಲುಗಳಿಗೆ ಇಂದಿನಿಂದ ದೇಶಾದ್ಯಂತ ಆರಂಭವಾಗಿವೆ
ಜೊತೆಗೆ ಅಹಮದಾಬಾದ್-ಜಾಮ್‌ನಗರ ವಂದೇ ಭಾರತ್ ರೈಲನ್ನು ದ್ವಾರಕಾವರೆಗೆ, ಅಜ್ಮೀರ್-ದೆಹಲಿ ಸರೈ ರೋಹಿಲ್ಲಾ ರೈಲನ್ನು ಚಂಡೀಗಢದವರೆಗೆ, ಗೋರಖ್‌ಪುರ-ಲಖನೌ ವಂದೇ ಭಾರತ್ ಅನ್ನು ಪ್ರಯಾಗರಾಜ್‌ವರೆಗೆ ಮತ್ತು ತಿರುವನಂತಪುರಂ-ಕಾಸರಗೋಡು ವಂದೇ ಭಾರತ್ ಅನ್ನು ಮಂಗಳೂರಿನವರೆಗೆ ವಿಸ್ತರಿಸಿದ ೪ ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿದರು