ರಾಜ್ಯಕ್ಕೆ ಅರುಣ್‌ಸಿಂಗ್ ತ.ನಾಡಿಗೆ ಸಿ.ಟಿ ರವಿ

ನವದೆಹಲಿ,ನ.೧೪- ಉಪ ಚುನಾವಣೆ ಫಲಿತಾಂಶ ಹೊರ ಬಿದ್ದ ಬೆನ್ನಲ್ಲೆ ರಾಜ್ಯ ಬಿಜೆಪಿ ಉಸ್ತುವಾರಿಯನ್ನಾಗಿ ಅರುಣ್‌ಸಿಂಗ್ ಅವರನ್ನು ನೇಮಕ ಮಾಡಲಾಗಿದೆ.
ಈ ಮೊದಲು ರಾಜ್ಯ ಬಿಜೆಪಿ ಉಸ್ತುವಾರಿಯಾಗಿದ್ದ ಮುರಳೀಧರ ರಾವ್ ಅವರಿಗೆ ಮಧ್ಯಪ್ರದೇಶದ ಜವಾಬ್ದಾರಿ ನೀಡಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಈ ಸಂಬಂಧ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.
ಅರುಣ್‌ಸಿಂಗ್ ರಾಷ್ಟ್ರಮಟ್ಟದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಈಗ ಅವರಿಗೆ ರಾಜ್ಯದ ಜವಾಬ್ದಾರಿ ನೀಡಲಾಗಿದೆ.
ಮಾಜಿ ಸಚಿವ ಸಿ.ಟಿ ರವಿ ಅವರಿಗೆ ಮಹಾರಾಷ್ಟ್ರ ಮತ್ತು ತಮಿಳುನಾಡು ಹೊಣೆಗಾರಿಕೆ ವಹಿಸಲಾಗಿದೆ. ಪ್ರವಾಸೋದ್ಯಮ ಸಚಿವರಾಗಿದ್ದ ಸಿ.ಟಿ ರವಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನಿಯೋಜನೆಗೊಂಡಿದ್ದರು.
ಈ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ರಾಜೀನಾಮೆಯನ್ನು ರಾಜ್ಯಪಾಲ ವಜುಭಾಯಿವಾಲಾ ಅಂಗೀಕರಿಸಿದ್ದಾರೆ.
ಪಕ್ಷದಲ್ಲಿ ಒಬ್ಬರಿಗೆ ಒಂದೇ ಹುದ್ದೆ ಸೂತ್ರದನ್ವಯ ಸಿ.ಟಿ ರವಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈಗ ತಮಿಳುನಾಡು ಉಸ್ತುವಾರಿಯಾಗಿ ನಿಯೋಜನೆಗೊಂಡಿರುವ ರವಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹೊಸ ಜವಾಬ್ದಾರಿ ನಿರ್ವಹಿಸಬೇಕಾಗಿದೆ.