ರಾಜೇ ವಿರುದ್ದ ಭ್ರಷ್ಟಾಚಾರ ಆರೋಪ ತನಿಖೆಗೆ‌ ಸಚಿನ್ ಪೈಲೆಟ್ ಆಗ್ರಹ

ಜೈಪುರ,ಏ.9- ರಾಜಸ್ತಾನದಲ್ಲಿ ವಸುಂದರೆ ರಾಜೇ ನೇತೃತ್ವದ ಈ ಹಿಂದಿನ ಸರ್ಕಾರದ ಭ್ರಷ್ಟಾಚಾರ ಪ್ರಕರಣದ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕಾಂಗ್ರೆಸ್ ನಾಯಕ ಸಚಿನ್ ಪೈಲೆಟ್ ಅವರು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ವಸುಂಧರಾ ರಾಜೆ ನೇತೃತ್ವದ ಹಿಂದಿನ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ವಿರುದ್ಧ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಘೋಷಿಸಿದ್ದಾರೆ. ಗೆಹ್ಲೋಟ್ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

2018 ರ ವಿಧಾನಸಭಾ ಚುನಾವಣೆಗೆ ಮೊದಲು ನೀಡಿದ ಹೇಳಿಕೆಗಳು ಮತ್ತು ಭರವಸೆಗಳ ಮೇಲೆ ಕಾಂಗ್ರೆಸ್ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಜನರಿಗೆ ಭರವಸೆ ನೀಡುವುದು ಅಗತ್ಯ ಹೇಳಿದ್ಧಾರೆ.

ಅಬಕಾರಿ ಮಾಫಿಯಾ, ಅಕ್ರಮ ಗಣಿಗಾರಿಕೆ, ಭೂ ಒತ್ತುವರಿ ಹಾಗೂ ಲಲಿತ್ ಮೋದಿ ಅಫಿಡವಿಟ್ ಪ್ರಕರಣದ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಹೇಳಿದ್ದಾರೆ.

ವಸುಂದರೆ ರಾಜೇ ಅವರನ್ನು ಭ್ರಷ್ಟಾಚಾರ ಮತ್ತು ದುರಾಡಳಿತದ ಆರೋಪದ ಹಳೆಯ ವೀಡಿಯೊಗಳನ್ನು ಪ್ರದರ್ಶನ ಮಾಡಿದ ಅವರು ಇದುವರೆಗೆ ತಮ್ಮದೇ ಸರ್ಕಾರ ರಾಜೇ ವಿರುದ್ದ ಯಾವುದೆ ತನಿಖೆ ಅಥವಾ ವಿಚಾರಣೆಯನ್ನು ಪ್ರಾರಂಭಿಸಲಿಲ್ಲ ಎಂದು ಹೇಳಿದ್ದಾರೆ.

ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಸರ್ಕಾರದ ಬಳಿ ಸಾಕ್ಷ್ಯಾಧಾರಗಳಿವೆ ಆದರೆ ಅದರ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.

“ಈ ಭರವಸೆಗಳನ್ನು ಈಡೇರಿಸದೆ ನಾವು ಚುನಾವಣೆಗೆ ಹೋಗಲು ಸಾಧ್ಯವಿಲ್ಲ. ನಮ್ಮ ಬಳಿ ಸಾಕ್ಷ್ಯಗಳಿವೆ. ನಾವು ಕ್ರಮ ತೆಗೆದುಕೊಳ್ಳಬೇಕಿತ್ತು. ನಾವು ತನಿಖೆ ನಡೆಸಬೇಕು. ನಾವು ಚುನಾವಣೆಗೆ ಹೋಗುತ್ತೇವೆ. ಶೀಘ್ರದಲ್ಲೇ ಮಾದರಿ ನೀತಿ ಸಂಹಿತೆ ಇರುತ್ತದೆ. ನಾವು ಜನರಿಗೆ ಉತ್ತರಿಸುತ್ತೇವೆ” ಎಂದು ಒತ್ತಾಯಿಸಿದ್ದಾರೆ.