ರಾಜೇಂದ್ರ ಗೋಖಲೆ ತತ್ವ ಆದರ್ಶಗಳ ಪ್ರೇರಣೆಯಾಗಿದ್ದರು

ಧಾರವಾಡ, ನ17: ರಾಜೇಂದ್ರ ಗೋಖಲೆ ವಿಶಿಷ್ಟ ವ್ಯಕ್ತಿತ್ವ ಹೊಂದಿದ್ದರು. ರಾಜಕೀಯ ಕ್ಷೇತ್ರದಲ್ಲಿ ಸೇವೆ ಮಾಡುವ ಆಶಯ ಹೊಂದಿದ್ದ ಅವರಿಗೆ ಸೂಕ್ತ ಅವಕಾಶ ಸಿಗಲಿಲ್ಲ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಬಸವರಾಜ ಪಾಟೀಲ ಸೇಡಂ ಬೇಸರ ವ್ಯಕ್ತಪಡಿಸಿದರು.
ಬಿಜೆಪಿ ಮುಖಂಡ ರಾಜೇಂದ್ರ ಗೋಖಲೆ ಸ್ಮರಣಾರ್ಥ ನಗರದ ಆಲೂರು ವೆಂಕಟರಾವ್ ಭವನದಲ್ಲಿ ಆಯೋಜಿಸಿದ್ದ ಶ್ರದ್ಧಾಂಜಲಿ ಹಾಗೂ ಸ್ಮರಣಿಕಾ ಪ್ರಕಾಶನ ಸಮಾರಂಭದಲ್ಲಿ ಅವರು ಮಾತನಾಡಿದರು.
ನಿಷ್ಠುರ ವ್ಯಕ್ತಿತ್ವ ಹೊಂದಿದ್ದ ರಾಜೇಂದ್ರ ಗೋಖಲೆ ತ್ಯಾಗದ ಪುಣ್ಯ ಪುರುಷ. ರಾಷ್ಟ್ರ ಸೇವೆಯಲ್ಲಿ ಎಲ್ಲರಿಗೂ ಪ್ರೇರಣೆ ಆಗಿದ್ದ ಅವರು ತತ್ವ, ಸಿದ್ಧಾಂತ, ಆದರ್ಶಗಳ ಮಾರ್ಗದಲ್ಲೇ ಜೀವನ ಸಾಗಿಸಿದವರು. ನಮ್ಮೊಂದಿಗೆ ಇಲ್ಲವಾದರೂ ಅವರ ತತ್ವ, ಸಿದ್ಧಾಂತಗಳನ್ನು ನಮ್ಮಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದರು.
ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ರಾಜೇಂದ್ರ ಸ್ಮರಣಾರ್ಥ ಹೊರ ತಂದ ಗ್ರಂಥ ಆತ್ಮವೀರ ಅಕ್ಷರ ಜೋಡಣೆಗೆ ಸೀಮಿತವಾಗದೆ ನಮ್ಮ ಭಾವನೆಗಳ ಜೋಡಣೆಗೆ ಸಾಕ್ಷಿಯಾಗಿದೆ. ರಾಜೇಂದ್ರರ ಕುಟುಂಬ ಎಲ್ಲರ ಜೀವನದಲ್ಲಿ ಒಂದಲ್ಲ ಒಂದು ರೀತಿ ಕೊಡುಗೆ ನೀಡಿದೆ ಎಂದರು.
ಮಂಗಳೂರು ರಾಮಕೃಷ್ಣ ಮಿಷನ್‍ನ ಶ್ರೀ ಏಕಗಮ್ಯಾನಂದ ಸ್ವಾಮೀಜಿ ಮಾತನಾಡಿದರು. ಧಾರವಾಡ ರಾಮಕೃಷ್ಣ ಆಶ್ರಮದ ಶ್ರೀ ವಿಜಯಾನಂದ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಾಧನಾ ಗೋಖಲೆ, ಸಿದ್ದಾರ್ಥ ಗೋಖಲೆ, ಶಾಸಕ ಅರವಿಂದ ಬೆಲ್ಲದ, ಪ್ರಮೋದ ಮುತಾಲಿಕ, ಈರೇಶ ಅಂಚಟಗೇರಿ, ಶ್ರೀಧರ ನಾಡಗೀರ, ದೀಪಕ ಚಿಂಚೋರೆ, ಸುಭಾಷಸಿಂಗ್ ಜಮಾದಾರ, ಡಾ. ಆನಂದ ಪಾಂಡುರಂಗಿ, ಗೋಖಲೆ ಕುಟುಂಬಸ್ಥರು, ಗೆಳೆಯರು, ಹಿತೈಷಿಗಳು, ಇತರರು ಇದ್ದರು.
ಮುಕುಂದ ಗೋಖಲೆ ಸ್ವಾಗತಿಸಿದರು. ಅಲ್ಕಾ ಇನಾಮದಾರ ಪ್ರಾಸ್ತಾವಿಕವಾಗಿ ಮಾತನಾಡಿದರು.