ರಾಜೇಂದ್ರಗೆ ಪರಿಷತ್ ಟಿಕೆಟ್ ನೀಡಲು ಒಕ್ಕಲಿಗ ಮುಖಂಡರ ಆಗ್ರಹ

ತುಮಕೂರು, ಸೆ. ೨೨- ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಿಂದ ೨೦೦೮ ರಲ್ಲಿ ಕಾಂಗ್ರೆಸ್ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿ, ಅತ್ಯಂತ ಹೀನಾಯವಾಗಿ ಸೋತ ಅಡಿಟರ್ ಯಲಚವಾಡಿ ನಾಗರಾಜು, ಒಕ್ಕಲಿಗರ ಹೆಸರು ಹೇಳಿಕೊಂಡು ವಿಧಾನ ಪರಿಷತ್ ಟಿಕೇಟ್ ಕೇಳುತ್ತಿರುವುದನ್ನು ಕಾಂಗ್ರೆಸ್ ಪಕ್ಷದ ಎಲ್ಲಾ ಒಕ್ಕಲಿಗ ಮುಖಂಡರು ಖಂಡಿಸುವುದಾಗಿ ಬಯಲು ಸೀಮೆ ಅಭಿವೃದ್ದಿ ಮಂಡಳಿಯ ಮಾಜಿ ಅಧ್ಯಕ್ಷ ಕೆ.ಎ.ದೇವರಾಜು ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ೨೦೦೮ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತ ನಂತರ, ಆ ಕ್ಷೇತ್ರದಲ್ಲಿ ಪಕ್ಷದ ಸಂಘಟನೆಗೆ ಯಾವುದೇ ರೀತಿಯ ಪ್ರಯತ್ನ ನಡೆಸಿಲ್ಲ. ಕನಿಷ್ಠ ತಮ್ಮ ಸಮುದಾಯದ ಮುಖಂಡರನ್ನು ಒಗ್ಗೂಡಿಸುವ ಕಾರ್ಯಕ್ಕೂ ಮುಂದಾಗದೆ, ಪಕ್ಷ ನಡೆಸಿದ ಸಭೆಗಳಿಗೂ ಗೈರು ಹಾಜರಾಗಿ, ಈಗ ಬಂದು ಒಕ್ಕಲಿಗ ಸಮುದಾಯದ ಹೆಸರಿನಲ್ಲಿ ಟಿಕೆಟ್ ಕೇಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರು.
ಕೊರೊನ ಮೊದಲನೇ ಮತ್ತು ಎರಡನೇ ಅಲೆಯ ಸಂದರ್ಭದಲ್ಲಿ ಕ್ಷೇತ್ರದಲ್ಲಿಯಾಗಲೀ, ಇಡೀ ಜಿಲ್ಲೆಯಲ್ಲಾಗಲೀ ಇವರ ಸುಳಿವಿಲ್ಲ. ಅಂದು ಜನರ ಸಂಕಷ್ಟಕ್ಕೆ ಸ್ಪಂದಿಸಿದ ನಿಂತವರು ಆರ್. ರಾಜೇಂದ್ರ, ಎರಡು ಲಕ್ಷಕ್ಕೂ ಅಧಿಕ ಜನರಿಗೆ ಉಚಿತ ಊಟ ನೀಡಿಲ್ಲದಲ್ಲದೆ, ಮಧುಗಿರಿ ಸೇರಿದಂತೆ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ತಿರುಗಾಡಿ, ಸಂಕಷ್ಟದಲ್ಲಿದ್ದವರಿಗೆ ಸ್ಪಂದಿಸಿ ಕೆಲಸ ಮಾಡಿದ್ದಾರೆ. ಜನರ ನಡುವೆ ಇದ್ದ ಕೆಲಸ ಮಾಡುವವರಿಗೆ ಟಿಕೆಟ್ ನೀಡಿದರೆ ಮಾತ್ರ ಗೆಲುವು ಸಾಧ್ಯ. ಹಾಗಾಗಿ ಆರ್. ರಾಜೇಂದ್ರ ಅವರಿಗೆ ಟಿಕೆಟ್ ನೀಡಬೇಕೆಂಬುದು ಕಾಂಗ್ರೆಸ್ ಪಕ್ಷದಲ್ಲಿರುವ ಒಕ್ಕಲಿಗ ಮುಖಂಡರ ಆಗ್ರಹವಾಗಿದೆ. ಒಂದು ವೇಳೆ ಒಕ್ಕಲಿಗರಿಗೆ ಟಿಕೆಟ್ ನೀಡುವುದಾಗಿ ಪಕ್ಷದ ಹಿರಿಯರಾಗಿರುವ ಆರ್. ನಾರಾಯಣ್, ಟಿ.ಬಿ. ಜಯಚಂದ್ರ ಅವರಿಗೆ ಟಿಕೆಟ್ ನೀಡಲಿ, ನಾವೆಲ್ಲರೂ ಅವರ ಗೆಲುವಿಗೆ ಶ್ರಮಿಸುವುದಾಗಿ ತಿಳಿಸಿದರು.
ಭೈರವೇಶ್ವರ ಬ್ಯಾಂಕ್ ಹಾಗೂ ಗುಬ್ಬಿ ಎಪಿಎಂಸಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಟಿ.ಆರ್. ಚಿಕ್ಕರಂಗಣ್ಣ ಮಾತನಾಡಿ, ಕಳೆದ ಬಾರಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಿ ಆರ್. ರಾಜೇಂದ್ರ ಸೋಲು ಅನುಭವಿಸಿದ್ದರು. ಆ ನಂತರದಲ್ಲಿ ಇಡೀ ಜಿಲ್ಲೆಯನ್ನು ಸುತ್ತಿನ ಕಾಂಗ್ರೆಸ್ ಪಕ್ಷ ಕಾರ್ಯಕರ್ತರ ಕಷ್ಟ ಸುಖಗಳಿಗೆ ಸ್ಪಂದಿಸಿ ಕೆಲಸ ಮಾಡುತ್ತಿದ್ದಾರೆ. ಡಿಸಿಸಿ ಬ್ಯಾಂಕಿನ ನಿರ್ದೇಶಕರಾಗಿಯೂ ಬಡವರಿಗೆ, ಅದರಲ್ಲಿಯೂ ಎಲ್ಲಾ ಸಮುದಾಯದ ರೈತರಿಗೂ ಸಾಲ ಸೌಲಭ್ಯ ದೊರಕಿಸುವಲ್ಲಿ ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಜನರ ಸಂಕಷ್ಟಗಳಿಗೆ ಸ್ಪಂದಿಸಿ ಕೆಲಸ ಮಾಡಿದ್ದಾರೆ. ಅವರಿಗೆ ವಿಧಾನ ಪರಿಷತ್ ಟಿಕೆಟ್ ನೀಡಿದರೆ ಮಾತ್ರ ಕಾಂಗ್ರೆಸ್ ಪಕ್ಷ ಗೆಲ್ಲಲ್ಲು ಸಾಧ್ಯ. ಹಾಗಾಗಿ ಪಕ್ಷದ ಹೈಕಮಾಂಡ್ ಮತ್ತು ಸ್ಥಳೀಯ ಮುಖಂಡರು ಆರ್. ರಾಜೇಂದ್ರ ಅವರಿಗೆ ಟಿಕೇಟ್ ನೀಡಬೇಕು ಎಂದು ಆಗ್ರಹಿಸಿದರು.
ಸಹಕಾರ ಮಹಾಮಂಡಳದ ರಾಜ್ಯಾಧ್ಯಕ್ಷ ಟಿ.ಜಿ. ವೆಂಕಟೇಗೌಡ ಮಾತನಾಡಿ, ಜಿಲ್ಲೆಯಲ್ಲಿ ಪ್ರಸ್ತುತ ೩೩೦ ಗ್ರಾಮ ಪಂಚಾಯ್ತಿಯಿಂದ ೧೧೦೦ ಜನ ಒಕ್ಕಲಿಗ, ೬೦೦ ಜನ ಲಿಂಗಾಯಿತ, ಪರಿಶಿಷ್ಟ ಜಾತಿ, ವರ್ಗ ಮತ್ತು ಒಬಿಸಿಯಿಂದ ೩೬೨೬ ಮತ್ತು ನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಸೇರಿ ೨೫೮ ಸೇರಿದಂತೆ ಒಟ್ಟು ೫೩೭೬ ಮತದಾರರಿದ್ದಾರೆ.ಕೇವಲ ಜಾತಿ, ಹಣ ಬಲದಿಂದ ವಿಧಾನ ಪರಿಷತ್ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ.ಜನರ ಕಷ್ಟ ಸುಖಃಗಳಿಗೆ ಸ್ಪಂದಿಸಿ ಕೆಲಸ ಮಾಡಿರುವವರಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಆರ್.ರಾಜೇಂದ್ರ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಟಿಕೇಟ್ ನೀಡುವುದರಿಂದ ಪಕ್ಷಕ್ಕೆ ಗೆಲುವ ಖಚಿತ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಭರತ್‌ಗೌಡ, ವಿಜಯಕುಮಾರ್, ರಾಮಲಿಂಗಾರೆಡ್ಡಿ, ತುರುವೇಕೆರೆ ದೇವರಾಜು, ಜಯರಾಂ, ಶಿವರಾಮ್, ದಾನಿಗೌಡ, ಶ್ರೀನಿವಾಸ್, ವೆಂಕಟೇಶ್, ಜಿ.ಎಲ್. ಮೂರ್ತಿ, ಶಿವಕುಮಾರ್, ನಾಗೇಶ್‌ಬಾಬು, ರಾಜಗೋಪಾಲ್, ನಾರಾಯಣಗೌಡ, ರಾಜಕುಮಾರ್, ಕೆಂಚಪ್ಪ, ಸುವರ್ಣಮ್ಮ ಉಪಸ್ಥಿತರಿದ್ದರು.