ರಾಜು ಆಲಗೂರರಿಗೆ ಕುರುಬ ಸಮಾಜದ ಬೆಂಬಲ

ಸಂಜೆವಾಣಿ ವಾರ್ತೆ,
ವಿಜಯಪುರ,ಮೇ.4:ಕುರುಬ ಸಮಾಜ ಯಾವತ್ತೂ ನ್ಯಾಯದ ಪರವಾಗಿದೆ. ಹಾಗಾಗಿ ಯೋಗ್ಯ ಅಭ್ಯರ್ಥಿಯಾದ ರಾಜು ಆಲಗೂರರಿಗೆ ಬೆಂಬಲ ನೀಡುತ್ತದೆ ಎಂದು ಮಾಜಿ ಜಿಪಂ ಅಧ್ಯಕ್ಷ ಹಾಗೂ ಜಿಲ್ಲೆಯ ಕುರುಬ ಸಮಾಜದ ಮುಖಂಡ ಮಲ್ಲಪ್ಪ ಸಾಲಿ ಹೇಳಿದರು.
ಶುಕ್ರವಾರ ಸಿಂದಗಿಯಲ್ಲಿ ನಡೆದ ಕುರುಬ ಸಮುದಾಯದ ಬೃಹತ್ ಸಭೆಯಲ್ಲಿ ಮಾತನಾಡಿದರು.
ಆಲಗೂರರು ಚಳವಳಿ, ಹೋರಾಟದಿಂದ ಬಂದವರು. ನಮ್ಮಂತಹ ತಳ ಸಮುದಾಯದ ಜೊತೆ ಅವರು ಮೊದಲಿಂದ ಬೆರೆತಿದ್ದಾರೆ. ಅಹಿಂದ ಚಳವಳಿಗೆ ಅವರು ಬೆನ್ನೆಲುಬಾಗಿದ್ದರು. ಹಾಗಾಗಿ ನಮ್ಮ ಸಮುದಾಯ ಅವರ ಗೆಲುವಿಗೆ ಸಹಕರಿಸಬೇಕು ಎಂದು ಕೋರಿದರು.
ರಾಜ್ಯ ಸರಕಾರದ ಸಾಧನೆಗೆ ಕಾರಣರಾಗಿರುವ ಸಿದ್ದರಾಮಯ್ಯರ ಕೈಬಲಪಡಿಸಲು ಆಲಗೂರರಿಗೆ ಮತ ಹಾಕಬೇಕು. ಜಾತಿ ರಹಿತ ಸಮಾಜಕ್ಕಾಗಿ ನಾವು ಒಟ್ಟಾಗಬೇಕು. ಲೋಕಸಭೆ ಕ್ಷೇತ್ರದಲ್ಲಿ ಈ ಸಲ ಬದಲಾವಣೆ ತರಲು ಕುರುಬ ಸಮಾಜ ಕಾರಣವಾಗಬೇಕು ಎಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ. ಮಹಾದೇವಪ್ಪ ಅವರು ಮಾತನಾಡಿ, ಕುರುಬ ಸಮಾಜ ಒಟ್ಟಾಗಿ ಸಭೆ ನಡೆಸಿದ್ದು ಸಂತೋಷ. ಇಲ್ಲಿ ಎಲ್ಲ ಸಮುದಾಯದವರೂ ಇದ್ದಾರೆ. ದೇಶಕ್ಕೆ ಒಳ್ಳೆಯದಾಗಲು ಈ ಸಭೆ ಮಹತ್ವದ್ದಾಗಿದೆ. ರಾಜ್ಯದಲ್ಲಿ ನಾವು ಗೆದ್ದಂತೆ ದೇಶದ ಚುನಾವಣೆಯಲ್ಲೂ ನಾವು ಗೆಲ್ಲಬೇಕು. ಇಷ್ಟೊಂದು ಗಟ್ಟಿಯಾಗಿ ಗೆಲ್ಲಲು ಕಾರಣರಾದ ನೀವು ಲೋಕಸಭೆಯಲ್ಲೂ ಬಹುಮತ ಕೊಡಬೇಕು. ಸಮರ್ಥ ಅಭ್ಯರ್ಥಿ ಆಲಗೂರರಿಗೆ ಮತ ನೀಡಬೇಕು ಎಂದರು.
ಅಭ್ಯರ್ಥಿ ರಾಜು ಆಲಗೂರ ಅವರು ಮಾತನಾಡಿ, ನಾನು ಲೋಕಸಭೆಗೆ ಸ್ಪರ್ಧಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರಣ. ಅವರೇ ನನಗೆ ಟಿಕೆಟ್ ನೀಡಿದ್ದಾರೆ. ಕರ್ನಾಟಕದಲ್ಲಿ ಹಾಲು ಮತ ಸಮುದಾಯ ರಾಜ್ಯದಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ ಎಂದರು.
ನಾನು ಸಮಾಜದ ಯಾವ ವ್ಯಕ್ತಿಯನ್ನು ಜಿಲ್ಲೆಯಲ್ಲಿ ಏಕವಚನದಲ್ಲೂ ಮಾತನಾಡಿಸಿಲ್ಲ. ಹಾಗೇನಾದರೂ ಮಾಡಿದ್ದರೆ, ಇದನ್ನು ಜಿಗಜಿಣಗಿಯವರು ಸಾಬೀತು ಮಾಡಿದರೆ ಚುನಾವಣೆ ಕಣದಿಂದಲೇ ನಿವೃತ್ತಿಯಾಗುವೆ. ನನ್ನಿಂದ ಲಿಂಗಾಯತರಿಗೆ ತೊಂದರೆಯಾಗುತ್ತೆ ಎಂದಿರುವ ಅವರು ಸಣ್ಣತನಕ್ಕೆ ಇಳಿದಿದ್ದಾರೆ. ಮೋದಿ ಅವರು ಕೂಡ ಇದೇ ದಾರಿ ಹಿಡಿದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಂಬಿಕೆ ಹಾಗೂ ವಿಶ್ವಾಸಕ್ಕೆ ಕುರುಬ ಸಮಾಜ ಹೆಸರಾಗಿದೆ. ನನಗೆ ಅವಕಾಶ ನೀಡಿದರೆ ನಿಮ್ಮ ವಿಶ್ವಾಸ ಕಾಯ್ದುಕೊಳ್ಳುವ ಕೆಲಸ ಮಾಡುವೆ ಎಂದರು.
ಶಾಸಕ ಅಶೋಕ ಮನಗೂಳಿ ಮಾತನಾಡಿ, ಇದು ಮಹತ್ವದ ಚುನಾವಣೆ. ದೇಶ ಉಳಿಸುವ ಹೋರಾಟವಿದು. ಕಾಂಗ್ರೆಸ್ ಮಾಡಿದ ಕೆಲಸಗಳಿಗಾಗಿ ನಡೆದಿರುವ ಚುನಾವಣೆ ಇದಾಗಿದೆ. ಮೋದಿ ಹೇಳಿರುವುದು ಯಾವುದೂ ಆಗಿಲ್ಲ. ಕುರುಬ ಸಮಾಜ ಒಗ್ಗಟ್ಟಾಗಿ ಅಭಿವೃದ್ಧಿ ಪರವಿರುವ ವ್ಯಕ್ತಿಗೆ ಮತ ನೀಡಬೇಕು. ಆಲಗೂರರು ಜಿಲ್ಲೆಯ ಏಳಿಗೆಗಾಗಿ ಹತ್ತು ಅಂಶದ ಕಾರ್ಯಕ್ರಮ ಹಾಕಿಕೊಂಡಿದ್ದಾರೆ. ರಾಜ್ಯಕ್ಕೆ ಸಿದ್ದರಾಮಯ್ಯರಂತಹ ಧೀಮಂತರನ್ನು ಕೊಡುಗೆ ನೀಡಿದ ಸಮಾಜ ನಿಮ್ಮದು. ನೀವು ಗೆಲುವಿಗೆ ಕಾರಣರಾಗಿ ಎಂದರು.
ಮಾಜಿ ಶಾಸಕ ಶರಣಪ್ಪ ಸುಣಗಾರ ಮಾತನಾಡಿ, ಇದು ಸತ್ಯ-ಅಸತ್ಯದ, ಧರ್ಮ-ಅಧರ್ಮದ ನಡುವಿನ ಚುನಾವಣೆ. ದೇಶದಲ್ಲಿ ಕೆಟ್ಟ ಆಡಳಿತದಿಂದ ಕರಾಳ ಛಾಯೆ ಆವರಿಸಿದೆ. ಮೋದಿ ಮುಖ ನೋಡಿ ಯಾಕೆ ಮತ ಹಾಕಬೇಕು. ಅಭಿವೃದ್ಧಿಯ ಹರಿಕಾರ ಸಿದ್ದರಾಮಯ್ಯರ ಮುಖ ನೋಡಿ ಮತ ಹಾಕುವ ಅಗತ್ಯ ಇದೆ ಎಂದು ಹೇಳಿದರು.
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಡವರ ಬಾಳು ಬೆಳಗಲಿದೆ. ರಾಜ್ಯದಂತೆ ದೇಶದಲ್ಲೂ ಗ್ಯಾರಂಟಿಗಳ ಯೋಜನೆ ಜಾರಿಗೆ ಬರಲಿವೆ. ಬೆಲೆ ಏರಿಕೆಯಿಂದ ಜನ ಬೇಸತ್ತಿದ್ದಾರೆ. ಗ್ಯಾರಂಟಿಗಳ ಭಾಗ್ಯದಿಂದ ಅವರು ಒಂದಿಷ್ಟಾದರೂ ಉಸಿರಾಡುವಂತಾಗಿದೆ. ಹಾಗಾಗಿ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರರಿಗೆ ಮತ ನೀಡಿದರೆ ಜಿಲ್ಲೆ ಅಭಿವೃದ್ಧಿಯಾಗಲಿದೆ ಎಂದರು.
ಬೀರಪ್ಪ ಪೂಜಾರಿ ಸಾನ್ನಿಧ್ಯ ವಹಿಸಿದ್ದರು. ಎಸ್.ಎಂ.ಪಾಟೀಲ ಗಣಿಹಾರ, ಕೆ.ಡಿ. ಪೂಜಾರಿ, ಶ್ರೀನಿವಾಸ ಪೂಜಾರಿ, ಅಪ್ಪಾಸಾಹೇಬ ಯರನಾಳ, ವಿಠ್ಠಲ ಕೊಳ್ಳೂರ, ರುಕ್ಸಾನಾ ಉಸ್ತಾದ, ರಮೇಶ ಬಂಟನೂರ, ಸಾದಿಕ್ ಸುಂಬಡ, ಸಂಗೀತಾ, ಮಹೇಶ್ಚಂದ್ರ ಯಂಕಂಚಿ, ತಳವಾರ ಸಮಾಜದ ರಾಜ್ಯ ಅಧ್ಯಕ್ಷ ಸಿದ್ದರಾಮ ಜೇರಟಗಿ, ಕಾಮೆಶ ಉಕ್ಕಲಿ ಅನೇಕರಿದ್ದರು.
ಸಿಂದಗಿಯಲ್ಲಿ ನಡೆದ ಕುರುಬ ಸಮುದಾಯದ ಸಮಾವೇಶದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹಾದೇವಪ್ಪ ಮಾತನಾಡಿದರು.