ರಾಜೀವ್ ಪುಣ್ಯ ತಿಥಿ ಆಚರಣೆ

ಕೋಲಾರ,ಮೇ.೨೨: ಭಾರತ ದೇಶ ಕಂಡ ಅಪ್ರತಿಮ ರಾಜಕಾರಣಿ, ೬ನೇ ಪ್ರಧಾನ ಮಂತ್ರಿ, ದಿವಂಗತ ರಾಜೀವ್ ಗಾಂಧಿ ಅವರ ೩೦ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಕೋಲಾರ ಜಿಲ್ಲಾ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ. ಚಂದ್ರಾರೆಡ್ಡಿ ರವರ ನೇತೃತ್ವದಲ್ಲಿ ಕಾಂಗ್ರೆಸ್ ಕಛೇರಿಯಲ್ಲಿ ಸರಳವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ದಿವಂಗತ ರಾಜೀವ್ ಗಾಂಧಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದ ಕೆ.ಚಂದ್ರಾರೆಡ್ಡಿ, ರಾಷ್ಟ್ರ ಕಂಡ ಧೀಮಂತ ನಾಯಕ, ಆಧುನಿಕ ಭಾರತದ ಕನಸುಗಾರ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಇಡೀ ದೇಶದ ಆಸ್ತಿ. ಅವರು ಸಧೃಡ ಭಾರತ ನಿರ್ಮಾಣದ ಕನಸು ಕಂಡಿದ್ದರು, ೧೯೪೪ ರಲ್ಲಿ ಮುಂಬೈನಲ್ಲಿ ಜನಿಸಿದ ರಾಜೀವ್ ಗಾಂಧಿ, ಲಂಡನ್‌ನ ಟ್ರಿನಿಟಿ ಆಫ್ ಕೇಂಬ್ರಿಡ್ಜ್ ಆಫ್ ಲಂಡನ್‌ನಲ್ಲಿ ವಿಧ್ಯಾಭ್ಯಾಸ ಮಾಡಿ, ಪೈಲೆಟ್ ಆಗಿ ಕೆಲಸ ನಿರ್ವಹಿಸುತ್ತಿದ್ದ ರಾಜೀವ್ ಗಾಂಧಿ, ತಮ್ಮ ತಾಯಿ ಇಂದಿರಾಗಾಂಧಿ ಅವರ ಮರಣಾನಂತರ ಭಾರತದ ೬ನೇ ಪ್ರಧಾನ ಮಂತ್ರಿಗಳಾಗಿ ೧೯೮೪ ರಿಂದ ೧೯೮೯ ನೇ ಅವಧಿಯಲ್ಲಿ ಕಾರ್ಯನಿರ್ವಹಿಸಿದರು. ಅವರ ನಾಯಕತ್ವ ಇಡೀ ವಿಶ್ವದಲ್ಲಿ ಮಾದರಿಯಾಗಿತ್ತು. ಇಂತಹ ಧೀಮಂತ ನಾಯಕನನ್ನು ೧೯೯೧ ರಲ್ಲಿ ತಮಿಳು ನಾಡಿನ ಪೆರಂಬದೂರಿನಲ್ಲಿ ನಡೆದ ದುರ್ಘಟನೆಯಲ್ಲಿ ಕಳೆದುಕೊಂಡು ಇಡೀ ದೇಶವೇ ಅನಾಥವಾಯಿತು ಎಂದು ಅಭಿಪ್ರಾಯಪಟ್ಟ ಅವರು, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದು ಪಕ್ಷವನ್ನು ಬಲಪಡಿಸುವ ಹಾಗೂ ಮುಂಬರುವ ದಿನಗಳಲ್ಲಿ ರಾಜ್ಯ ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಶತಾಯಗತಾಯ ಶ್ರಮಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಬಾಬು, ಎಸ್.ಸಿ ಸೆಲ್ ಅಧ್ಯಕ್ಷ ಜಯದೇವ್, ಎಸ್.ಸಿ ಬ್ಲಾಕ್ ಅಧ್ಯಕ್ಷ ಖಾದ್ರಿಪುರ ಬಾಬು, ಅಲ್ಪಸಂಖ್ಯಾತರ ಮುಖಂಡ ಮಹಮದ್ ಎಕ್ಬಾಲ್, ಯೂತ್ ಬ್ಲಾಕ್ ಅಧ್ಯಕ್ಷ ನವೀನ್ ಕುಮಾರ್, ಕೆಪಿಸಿಸಿ ವೈದ್ಯಕೀಯ ಸೆಲ್‌ನ ಜಿಲ್ಲಾಧ್ಯಕ್ಷ ಲೋಹಿತ್, ನಗರಸಭಾ ಮಾಜಿ ಸದಸ್ಯ ಪ್ಯಾರೇಜಾನ್, ವೆಂಕಟಪತಿ, ಕೋಲಾರ ಜಿಲ್ಲಾ ಸಾಮಾಜಿಕ ಜಾಲತಾಣ ಜಿಲ್ಲಾ ಉಪಾಧ್ಯಕ್ಷ ಕರವೇ ಚಲಪತಿ, ಕಾರ್ಯದರ್ಶಿ ಮೌನೇಶ್, ಹರೀಶ್ ಉಪಸ್ಥಿತರಿದ್ದರು.