ರಾಜೀವ್ ಕಂಚಿನ ಪುತ್ಥಳಿಗೆ ವಿರೋಧ

ಬೆಂಗಳೂರು, ಜು.೩೧- ಕಾಂಗ್ರೆಸ್ ಸರ್ಕಾರವೂ ಈಗ ರಾಜಧಾನಿ ಬೆಂಗಳೂರಿನಲ್ಲಿ ಕೋಟಿಗಟ್ಟಲೆ ಖರ್ಚು ಮಾಡಿ ಕಂಚಿನ ಪುತ್ಥಳಿ ನಿರ್ಮಾಣ ಮಾಡಲು ಮುಂದಾಗಿರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ.
ಶೇಷಾದ್ರಿಪುರದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಕಂಚಿನ ಪುತ್ಥಳಿ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಕೈ ಹಾಕಿದೆ. ಸ್ವಸ್ತಿಕ್ ಸರ್ಕಲ್ ನಲ್ಲಿ ನವೀಕರಣ ಮೂಲಕ ಕಂಚಿನ ಪುತ್ಥಳಿ ನಿರ್ಮಾಣ ಮಾಡಲು ಮುಂದಾಗಿದೆ.
ಪುತ್ಥಳಿ ನಿರ್ಮಾಣ ಹಾಗೂ ಸ್ಥಾಪನೆಗೆ ಬರೋಬ್ಬರಿ ೧ಕೋಟಿ ೭ಲಕ್ಷ ೮೦ ಸಾವಿರ ಖರ್ಚು ಮಾಡಿದ್ದಾರೆ. ಅಲ್ಪಾವಧಿ ಟೆಂಡರ್ ಮೂಲಕ ಪುತ್ಥಳಿ ನಿರ್ಮಾಣ ಮಾಡಲಾಗುತ್ತಿದ್ದು, ಬಿಬಿಎಂಪಿ ಪುತ್ಥಳಿ ನಿರ್ಮಾಣಕ್ಕೆ ಟೆಂಡರ್ ಕರೆದಿದೆ.
ಈ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ನಾಯಕರೊಬ್ಬರು, ಅತಿವೃಷ್ಟಿ, ಅನಾವೃಷ್ಟಿ ಎರಡರಿಂದಲೂ ರಾಜ್ಯದ ಜನತೆ ಕಂಗಾಲಾಗಿದ್ದು, ಅವರ ಸಮಸ್ಯೆಗೆ ಪರಿಹಾರ ಇವರ ಬಳಿ ಇಲ್ಲ. ಕುಡಿಯುವ ನೀರಿಗೆ ಹಣ ಬಿಡುಗಡೆ ಮಾಡಿಲ್ಲ.ಆದರೆ ಪುತ್ಥಳಿ ನಿರ್ಮಾಣಕ್ಕೆ ಕೋಟಿಗಟ್ಟಲೆ ಹಣ ಮೀಸಲು ಇಟ್ಟಿದ್ದಾರೆ.ಸಾರ್ವಜನಿಕರ ತೆರಿಗೆ ಹಣವನ್ನು ಬಿಬಿಎಂಪಿ, ರಾಜ್ಯ ಸರ್ಕಾರ ಪೋಲು ಮಾಡುತ್ತಿದೆ ಎಂದು ಕಿಡಿಕಾರಿದರು.
ಈಗಾಗಲೇ ಇದ್ದ ಪುತ್ಥಳಿ
ತೆಗೆದು, ಇದು ತಪ್ಪಲ್ವಾ? ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಒಂದು ವರ್ಷ ಅನುದಾನ ಕೇಳಬೇಡಿ ಎಂದು ಶಾಸಕರಿಗೆ ಸೂಚನೆ ನೀಡಲಾಗಿತ್ತು. ಆದರೆ ಕಂಚಿನ ಪ್ರತಿಮೆಗೆ ಕೋಟಿಗಟ್ಟಲೆ ಹಣ ಖರ್ಚು ಮಾಡಲಾಗುತ್ತಿರುವುದು ಹೇಗೇ? ಎಂದು ಅವರು ಪ್ರಶ್ನಿಸಿದರು.