ರಾಜೀನಾಮೆ ಬಿಎಸ್‌ವೈ ಸುಳಿವು

ಬೆಂಗಳೂರು,ಜು.೨೨- ಪಕ್ಷದ ಹೈಕಮಾಂಡ್‌ನ ತೀರ್ಮಾನಕ್ಕೆ ತಾವು ಬದ್ಧನಾಗಿ ವರಿಷ್ಠರ ಸೂಚನೆಯಂತೆ ನಡೆದುಕೊಳ್ಳುತ್ತೇನೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪರವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಸೂಚನೆ ನೀಡಿದ್ದಾರೆ.
ಈ ತಿಂಗಳ ೨೫ ರಂದು ವರಿಷ್ಠರಿಂದ ಸೂಚನೆ ಬರಲಿದೆ. ಅವರು ಯಾವ ಸೂಚನೆ, ಸಂದೇಶ ನೀಡುತ್ತಾರೋ ಅದನ್ನು ನಾನು ಪಾಲಿಸುತ್ತೇನೆ. ಜು. ೨೬ ರಿಂದಲೇ ಪಕ್ಷ ಸಂಘಟನೆಗೆ ಗಮನ ನೀಡಿ, ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಕೆಲಸ ಆರಂಭಿಸುತ್ತೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಈ ತಿಂಗಳ ೨೬ ರಂದು ತಾವು ಮುಖ್ಯಮಂತ್ರಿಯಾಗಿ ೨ ವರ್ಷ ತುಂಬಲಿದೆ. ಸರ್ಕಾರದ ೨ ವರ್ಷದ ಸಾಧನೆಯ ಬಗ್ಗೆ ವಿಶೇಷ ಕಾಂiiಕ್ರಮವಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಹೈಕಮಾಂಡ್‌ನ ಸೂಚನೆಯನ್ನು ಪಾಲಿಸುತ್ತೇನೆ ಎಂದು ಅವರು ಹೇಳುವ ಮೂಲಕ ಸೋಮವಾರವೇ ಮುಖ್ಯಮಂತ್ರಿ ಪದತ್ಯಾಗದ ಸುಳಿವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಹೊರ ಹಾಕಿದ್ದಾರೆ.
ಬೆಂಗಳೂರಿನ ಕಾಚರಕನಹಳ್ಳಿಯ ಕೋದಂಡಸ್ವಾಮಿ ದೇವಸ್ಥಾನದಲ್ಲಿ ವಿಶ್ವ ಹಿಂದೂಪರಿಷತ್ ಹಮ್ಮಿಕೊಂಡಿದ್ದ ಧನ್ವಂತರಿ ಹೋಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೈಕಮಾಂಡ್‌ನ ಆದೇಶವನ್ನು ಪಾಲಿಸುತ್ತೇನೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ಇಡೀ ದೇಶದಲ್ಲಿ ೭೫ ವರ್ಷ ಮೀರಿದ ಯಾರಿಗೂ ಬಿಜೆಪಿ ಅಧಿಕಾರ ನೀಡಿಲ್ಲ, ತಮ್ಮ ಕಾರ್ಯನಿರ್ವಹಣೆ ಕೆಲಸಗಳ ಬಗ್ಗೆ ಮೆಚ್ಚುಗೆ ಹೊಂದಿದ್ದ ಪ್ರಧಾನಿ ನರೇಂದ್ರಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಇವರೆಲ್ಲ ೭೫ ವರ್ಷ ದಾಟಿದ ತಮ್ಮನ್ನು ಮುಖ್ಯಮಂತ್ರಿ ಮಾಡಿ ನನ್ನ ಬಗ್ಗೆ ವಿಶೇಷ ಕಾಳಜಿ ತೋರಿಸಿ ಅಧಿಕಾರ ನೀಡಿದ್ದಾರೆ ಎಂದು ಅವರು ಹೇಳಿದರು.
ಮುಖ್ಯಮಂತ್ರಿಯಾಗಿ ಇದೇ ೨೬ಕ್ಕೆ ೨ ವರ್ಷ ಪೂರೈಸುತ್ತೇನೆ. ಅಂದೇ ಹೈ ಕಮಾಂಡ್‌ನ ಸೂಚನೆಯನ್ನೂ ಪಾಲಿಸುತ್ತೇನೆ. ಹೈಕಮಾಂಡ್‌ನ ತೀರ್ಮಾನವೇ ತಮ್ಮ ತೀರ್ಮಾನ
ವರಿಷ್ಠರ ಯಾವುದೇ ನಿರ್ಧಾರಕ್ಕೆ ತಾವು ಬದ್ಧ ಎಂದರು.
ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಗೊಂದಲಕ್ಕೆ ಒಳಗಾಗುವುದು ಬೇಡ, ಮುಂದಿನ ದಿನಗಳಲ್ಲಿ ಪಕ್ಷವನ್ನು ಸದೃಢಗೊಳಿಸಿ, ಅಧಿಕಾರಕ್ಕೆ ತರುವುದು ತಮ್ಮ ಗುರಿ. ನನ್ನ ಪರವಾಗಿ ಹೇಳಿಕೆ ನೀಡುವುದೂ ಬೇಡ, ಹಾಗೆಯೇ ಕಾರ್ಯಕರ್ತರು, ಅಭಿಮಾನಿಗಳು ಪ್ರತಿಭಟನೆ ನಡೆಸುವುದೂ ಬೇಡ ಎಂದವರು ಮನವಿ ಮಾಡಿದರು.
ಕಳೆದ ೨ ದಿನಗಳಿಂದ ವಿವಿಧ ಜನಾಂಗ ಸಮುದಾಯಗಳ ೧೦೦ಕ್ಕೂ ಹೆಚ್ಚು ಸ್ವಾಮೀಜಿಗಳು ನನಗೆ ಆರ್ಶೀವಾದ ಮಾಡಿದ್ದಾರೆ.
ಬಹುಶಃ ನನ್ನ ಜೀವನzಲ್ಲಿ ಮರೆಯಲು ಸಾಧ್ಯವಿಲ್ಲ. ಒಂದು ವಿಶೇಷ ಸನ್ನಿವೇಶ ಇದಾಗಿದೆ. ಹಿಂದೆ ಯಾರಿಗೂ ಈ ರೀತಿಯ ಆರ್ಶೀವಾದ ಸಿಕ್ಕಿರಲಿಲ್ಲ. ಸ್ವಾಮೀಜಿಗಳು ತಮ್ಮ ಮೇಲೆ ವಿಶೇಷ ಪ್ರೀತಿ ತೋರಿದ್ದಾರೆ.
ಅವರ ಆರ್ಶೀವಾದ, ಕಾರ್ಯಕರ್ತರ ಬೆಂಬಲದೊಂದಿಗೆ ಮುಂದಿನ ದಿನಗಳಲ್ಲಿ ಪಕ್ಷ ಸಂಘಟಿಸುತ್ತೇನೆ. ಮಠಾಧೀಶರು ಎಲ್ಲರೂ ಸಹಕರಿಸಬೇಕು ಎಂದು ಯಡಿಯೂರಪ್ಪ ಹೇಳಿದರು.
ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಸಂಕಲ್ಪವನ್ನು ಮಾಡಿದ್ದೇನೆ ಎಂದು ಅವರು ಹೇಳಿದರು.

s